ಸಿನಿಮಾ ರಂಗದಿಂದ ಸಿಎಂ ಗದ್ದುಗೆಗೆ ಏರಿದ ಸಾಧಕರು ಇವರು
Movie and Politics: ಭಾರತದಲ್ಲಿ ಸಿನಿಮಾ ಹಾಗೂ ರಾಜಕೀಯ ದಶಕಗಳಿಂದಲೂ ಜೊತೆ-ಜೊತೆಯಾಗಿಯೇ ಸಾಗಿ ಬರುತ್ತಿದೆ. ಸಿನಿಮಾನಲ್ಲಿ ಸಿಕ್ಕ ಜನಪ್ರಿಯತೆಯನ್ನು ಬಂಡವಾಳವಾಗಿರಿಸಿಕೊಂಡು ಹಲವಾರು ನಟ-ನಟಿಯರು ರಾಜಕೀಯಕ್ಕೆ ಬಂದಿದ್ದಾರೆ. ರಾಜಕಾರಣಿಗಳು ಸಹ ಚುನಾವಣಾ ಪ್ರಚಾರಕ್ಕೆ, ರಾಜಕೀಯ ಸಿದ್ಧಾಂತದ ಪ್ರಚಾರಕ್ಕೆ ಸಿನಿಮಾ ಅನ್ನು, ಸಿನಿಮಾ ಮಂದಿಯನ್ನು ವರ್ಷಗಳಿಂದಲೂ ಬಳಸಿಕೊಂಡು ಬರುತ್ತಲೇ ಇದ್ದಾರೆ. ಸಿನಿಮಾ ರಂಗದಿಂದ ಬಂದು ಸಿಎಂ ಗದ್ದುಗೆ ಏರಿದವರ ಪಟ್ಟಿ ಇಲ್ಲಿದೆ ನೋಡಿ...
Updated on: May 10, 2026 | 3:27 PM

ಅಣ್ಣಾದೊರೈ ಸಿನಿಮಾ ಅನ್ನು ಬಳಸಿಕೊಂಡು ರಾಜಕೀಯ ಕ್ರಾಂತಿ ಮಾಡಿ, ಬಳಿಕ ತಮಿಳುನಾಡು ಸಿಎಂ ಆದ ಮೊದಲಿಗರು. 1949 ರಲ್ಲಿ ತಮಿಳು ಚಿತ್ರರಂಗಕ್ಕೆ ಕಾಲಿಟ್ಟು ಹಲವು ಸಿನಿಮಾಗಳಿಗೆ ಕತೆ ಮತ್ತು ಚಿತ್ರಕತೆ ಬರೆದಿದ್ದರು. ಆ ಸಮಯದಲ್ಲಿಯೇ ಕ್ರಾಂತಿಕಾರಿ ಆಲೋಚನೆಗಳನ್ನು ಅವರು ಸಿನಿಮಾಗಳ ಮೂಲಕ ಹರಿಯ ಬಿಟ್ಟಿದ್ದರು. ಅದುವೇ ಅವರಿಗೆ ಜನಪ್ರಿಯತೆ ತಂದುಕೊಟ್ಟಿತ್ತು ಮತ್ತು ಸಿಎಂ ಆಗುವಲ್ಲಿ ನೆರವು ನೀಡಿತು. 1969ರಲ್ಲಿ ಸಿಎಂ ಆದ ಇವರು ಸಿಎಂ ಸ್ಥಾನದಲ್ಲಿದ್ದಿದ್ದು ಕೇವಲ 20 ದಿನಗಳು ಮಾತ್ರ.

ಎಂ ಕರುಣಾನಿಧಿ ಸಹ ತಮಿಳು ಚಿತ್ರರಂಗದಿಂದಲೇ ಬಂದವರು. ಹಲವಾರು ಸಿನಿಮಾಗಳಿಗೆ ಕತೆ, ಚಿತ್ರಕತೆ, ಹಾಡುಗಳನ್ನು ಕರುಣಾನಿಧಿ ಬರೆದಿದ್ದಾರೆ. ಅಣ್ಣಾದೊರೈ ಅವರ ಬಳಿಕ ಸಿಎಂ ಆದ ಇವರು ಆರು ವರ್ಷಕ್ಕೂ ಹೆಚ್ಚು ಸಮಯ ಸಿಎಂ ಸ್ಥಾನದಲ್ಲಿದ್ದು ಮಾತ್ರವಲ್ಲದೆ ಆ ನಂತರವು ಕೆಲವು ಬಾರಿ ಸಿಎಂ ಆಗಿ ಆಡಳಿತ ನಡೆಸಿದರು.

ಎಂಜಿಆರ್ (ಎಂಜಿ ರಾಮಚಂದ್ರನ್) ಇವರು ಭಾರತದ ಮೊಟ್ಟ ಮೊದಲ ‘ಸೂಪರ್ ಸ್ಟಾರ್’ ಸಿಎಂ. ನಾಯಕ ನಟರಾಗಿ ಬಳಿಕ ಸಿಎಂ ಆದ ಮೊದಲಿಗರು ಎಂಜಿಆರ್. ಸಿನಿಮಾ ನಟರು ಸಿಎಂ ಆಗಬಹುದು ಎಂದು ತೋರಿಸಿಕೊಟ್ಟವರು ಇವರು. ಇವರ ಸ್ಪೂರ್ತಿಯಿಂದ ಆ ನಂತರದಲ್ಲಿ ಹಲವು ನಟರುಗಳು ರಾಜಕೀಯಕ್ಕೆ ಬಂದರು, ಸ್ವಂತ ಪಕ್ಷಗಳನ್ನು ಸಹ ಕಟ್ಟಿದರು. ಎಂಜಿಆರ್ ಅವರು ಎರಡು ಬಾರಿ ತಮಿಳುನಾಡಿನ ಸಿಎಂ ಆಗಿದ್ದರು.

ಎನ್ಟಿಆರ್ (ಎನ್ಟಿ ರಾಮಾರಾವ್) ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಆಗಿದ್ದ ರಾಮಾ ರಾವ್ ಅವರು ಅಖಂಡ ಆಂಧ್ರ ಪ್ರದೇಶದ ಸಿಎಂ ಆಗಿ ಕಾರ್ಯ ನಿರ್ವಹಿಸಿದ್ದರು. ಪಕ್ಷ ಕಟ್ಟಿದ ಕೆಲವೇ ತಿಂಗಳುಗಳಲ್ಲಿ ಸಿಎಂ ಆಗಿ ದಾಖಲೆ ಬರೆದವರು ಎನ್ಟಿ ರಾಮಾರಾವ್. ಎನ್ಟಿಆರ್ ಅವರು ಮೂರು ಬಾರಿ ಆಂಧ್ರ ಪ್ರದೇಶದ ಸಿಎಂ ಆದರು. ಇವರು ಕಟ್ಟಿದ ಪಕ್ಷವೇ ಈಗ ಆಂಧ್ರದಲ್ಲಿ ಅಧಿಕಾರದಲ್ಲಿದೆ.

ಎಂಜಿಆರ್ ಅವರ ಪತ್ನಿ ವಿಎನ್ ಜಾನಕಿ, ದಕ್ಷಿಣ ಭಾರತದ ಜನಪ್ರಿಯ ನಟಿ ಆಗಿದ್ದವರು. ಎಂಜಿಆರ್ ಅವರ ನಿಧನದ ಬಳಿಕ ವಿಎನ್ ಜಾನಕಿ ಅವರು ತಮಿಳುನಾಡಿನ ಸಿಎಂ ಆದರು. ಆದರೆ ಅವರು ಸಿಎಂ ಹುದ್ದೆಯಲ್ಲಿದ್ದಿದ್ದು ಕೇವಲ 23 ದಿನಗಳು ಮಾತ್ರ. ಜಾನಕಿ ಅವರು ಯಾವುದೇ ಚುನಾವಣೆ ಎದುರಿಸದೇ ಸಿಎಂ ಆಗಿದ್ದರು.

ಜೆ ಜಯಲಲಿತಾ, 1960 ರಿಂದ 1980 ರ ವರೆಗೆ ದಕ್ಷಿಣ ಭಾರತದಲ್ಲಿ ಖ್ಯಾತ ನಟಿಯಾಗಿ ಮೆರೆದವರು ಜಯಲಲಿತಾ. ಸೂಪರ್ ಸ್ಟಾರ್ ನಟರು ಮಾತ್ರವಲ್ಲ, ನಟಿಯರು ಸಹ ಪಕ್ಷ ಕಟ್ಟಿ ಚುನಾವಣೆ ಎದುರಿಸಿ ಸಿಎಂ ಆಗಬಹುದು ಎಂದು ತೋರಿಸಿಕೊಟ್ಟವರು ಜಯಲಲಿತಾ. ಐದು ಬಾರಿ ತಮಿಳುನಾಡಿನ ಸಿಎಂ ಆಗಿದ್ದರು ಜಯಲಲಿತಾ.

ಜೋಸೆಫ್ ವಿಜಯ್ ಅಲಿಯಾಸ್ ದಳಪತಿ ವಿಜಯ್ ಇದೀಗ ತಮಿಳುನಾಡಿನ ಹೊಸ ಸಿಎಂ ಆಗಿದ್ದಾರೆ. ಆ ಮೂಲಕ ಚಿತ್ರರಂಗದಿಂದ ಬಂದ ತಮಿಳುನಾಡು ಸಿಎಂ ಆದ ಐದನೇ ವ್ಯಕ್ತಿ ಎನಿಸಿಕೊಂಡಿದ್ದಾರೆ. ಇಂದಿನಿಂದ ತಮಿಳುನಾಡಿನಲ್ಲಿ ವಿಜಯ್ ಸರ್ಕಾರ ಆರಂಭವಾಗಿದೆ.

ನಟ ಪವನ್ ಕಲ್ಯಾಣ್, ಈಗ ಸಿಎಂ ಅಲ್ಲ ಆದರೆ ಸಿಎಂ ಆಗುವ ಕನಸು ಕಾಣುತ್ತಿರುವ ಮತ್ತು ಸಿಎಂ ಆಗುವ ಅವಕಾಶವೂ ಇರುವ ಸೂಪರ್ ಸ್ಟಾರ್ ನಟ. ಈಗಲೂ ಸಿನಿಮಾಗಳಲ್ಲಿ ಸಕ್ರಿಯವಾಗಿರುವ ಪವನ್ ಕಲ್ಯಾಣ್ ಅವರು ಆಂಧ್ರ ಪ್ರದೇಶದ ಡಿಸಿಎಂ ಆಗಿದ್ದಾರೆ. ಮುಂದೊಂದು ದಿನ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ.




