
ಕಿರಣ್ ರಾಜ್ ನಾಯಕನಾಗಿ ನಟಿಸುತ್ತಿರುವ ‘ಜಾಕಿ 42’ ಸಿನಿಮಾಗೆ ಹೃತಿಕಾ ಶ್ರೀನಿವಾಸ್ ಅವರು ನಾಯಕಿಯಾಗಿ ಆಯ್ಕೆ ಯಾಗಿದ್ದಾರೆ. ಮಾಡರ್ನ್ ಮತ್ತು ಹೋಮ್ಲಿ ಶೇಡ್ ಇರುವ ಪಾತ್ರ ಇದಾಗಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

‘ಯೋಗರಾಜ್ ಭಟ್ ಸಿನಿಮಾಸ್’ ಮತ್ತು ‘ರವಿ ಶಾಮನೂರು’ ನಿರ್ಮಾಣ ಮಾಡಿರುವ ‘ಉಡಾಳ’ ಚಿತ್ರದಲ್ಲೂ ಹೃತಿಕಾ ಶ್ರೀನಿವಾಸ್ ಅವರು ನಾಯಕಿಯಾಗಿ ನಟಿಸಿದ್ದಾರೆ. ಸದ್ಯ ತೆಲುಗು ಚಿತ್ರವೊಂದರ ಚಿತ್ರೀಕರಣದಲ್ಲೂ ಅವರು ಬ್ಯುಸಿ.

ಹೃತಿಕಾ ಶ್ರೀನಿವಾಸ್ ಅವರು ಸದ್ಯದಲ್ಲೇ ‘ಜಾಕಿ 42’ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ. ಇದು ಹಾರ್ಸ್ ರೇಸ್ ಹಿನ್ನೆಲೆಯ ಕಥೆ ಇರುವ ಸಿನಿಮಾ. ಗುರುತೇಜ್ ಶೆಟ್ಟಿ ಅವರು ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ.

‘ಗೋಲ್ಡನ್ ಗೇಟ್ ಸ್ಟುಡಿಯೋಸ್’ ಮೂಲಕ ಭಾರತಿ ಸತ್ಯನಾರಾಯಣ ಅವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ವಿನೋದ್ ಯಜಮಾನಿ ಅವರು ಸಂಗೀತ ನೀಡುತ್ತಿದ್ದಾರೆ. ಈಗಾಗಲೇ ಬೆಂಗಳೂರಲ್ಲಿ ಶೂಟಿಂಗ್ ನಡೆಯುತ್ತಿದೆ.

ರಾಘವೇಂದ್ರ ಬಿ. ಕೋಲಾರ್, ಉಮೇಶ್ ಆರ್.ಬಿ, ಸತೀಶ್ ಪೆರ್ಡೂರು ಮುಂತಾದವರು ತೆರೆಹಿಂದೆ ಕೆಲಸ ಮಾಡುತ್ತಿದ್ದಾರೆ. ಕನ್ನಡ, ತಮಿಳು ಮತ್ತು ತೆಲುಗಿನ ಹೆಸರಾಂತ ಕಲಾವಿದರು ಪಾತ್ರವರ್ಗದಲ್ಲಿ ಇದ್ದಾರೆ.