- Kannada News Photo gallery India vs England: KL Rahul fined for showing dissent at umpire's decision
KL Rahul: ಔಟ್ ಆದ ಬಳಿಕ ಅಸಮಾಧಾನ: ಕೆಎಲ್ ರಾಹುಲ್ಗೆ ದಂಡದ ಬರೆ
India vs England 4th Test: ಎರಡು ಅಮಾನತು ಅಂಕಗಳನ್ನು ಪಡೆದರೆ ಒಂದು ಟೆಸ್ಟ್ ಅಥವಾ ಎರಡು ಏಕದಿನ ಪಂದ್ಯಗಳು ಅಥವಾ ಎರಡು ಟಿ 20 ಪಂದ್ಯಗಳಿಂದ ನಿಷೇಧಕ್ಕೊಳಗಾಗಲಿದ್ದಾರೆ.
Updated on: Sep 05, 2021 | 3:04 PM

ಇಂಗ್ಲೆಂಡ್ ವಿರುದ್ದ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ತೋರಿದ ಅನುಚಿತ ವರ್ತನೆಗೆ ಟೀಮ್ ಇಂಡಿಯಾ ಆರಂಭಿಕ ಕೆಎಲ್ ರಾಹುಲ್ಗೆ ಐಸಿಸಿ ದಂಡ ವಿಧಿಸಿದೆ. ಎರಡನೇ ಇನ್ನಿಂಗ್ಸ್‌ನ 34 ನೇ ಓವರ್‌ನಲ್ಲಿ ಜೇಮ್ಸ್ ಆಂಡರ್ಸನ್ ಎಸೆತದಲ್ಲಿ ರಾಹುಲ್ ವಿಕೆಟ್ಗಾಗಿ ಮನವಿ ಮಾಡಲಾಗಿತ್ತು. ಚೆಂಡು ಬ್ಯಾಟ್ ಸವರಿ ಕೀಪರ್ ಕೈ ಸೇರಿದ್ದರಿಂದ ಇಂಗ್ಲೆಂಡ್ ಆಟಗಾರರು ಮನವಿ ಮಾಡಿದ್ದರು. ಆದರೆ ಫೀಲ್ಡ್ ಅಂಪೈರ್ ನಾಟೌಟ್ ಎಂದು ನೀಡಿದ ತೀರ್ಪಿನ ವಿರುದ್ದ ಇಂಗ್ಲೆಂಡ್ ನಾಯಕ ಜೋ ರೂಟ್ ಡಿಆರ್‌ಎಸ್ ಮೊರೆ ಹೋಗಿದ್ದರು. ಚೆಂಡು ಬ್ಯಾಟ್ ಸವರಿ ಕೀಪರ್ ಕೈ ಸೇರಿರುವುದು ಡಿಆರ್‌ಎಸ್ ಪರಿಶೀಲನೆ ವೇಳೆ ಸ್ಷಷ್ಟವಾಗಿತ್ತು. ಇದಾಗ್ಯೂ ಅಂಪೈರ್ ಔಟ್ ನೀಡುತ್ತಿದ್ದಂತೆ ರಾಹುಲ್ ಅಸಮಾಧಾನ ವ್ಯಕ್ತಪಡಿಸಿ ಹೊರ ನಡೆದಿದ್ದರು.

ಈ ಬಗ್ಗೆ ಆನ್-ಫೀಲ್ಡ್ ಅಂಪೈರ್‌ಗಳಾದ ರಿಚರ್ಡ್ ಇಲ್ಲಿಂಗ್‌ವರ್ತ್ ಮತ್ತು ಅಲೆಕ್ಸ್ ವಾರ್ಫ್ ಮ್ಯಾಚ್ ರೆಫರಿಗೆ ದೂರು ನೀಡಿದ್ದರು. ಅದರಂತೆ ಅಂಪೈರ್ ನಿರ್ಧಾರಕ್ಕೆ ಅಸಮ್ಮತಿ ತೋರಿದ ಹಿನ್ನೆಲೆಯಲ್ಲಿ ಕೆಎಲ್ ರಾಹುಲ್ ಅವರು ಪಂದ್ಯದ ಶುಲ್ಕದ ಶೇ. 15 ರಷ್ಟು ದಂಡವನ್ನು ಪಾವತಿಸಬೇಕಿದೆ.

"ರಾಹುಲ್ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.8 ಅನ್ನು ಉಲ್ಲಂಘಿಸಿರುವುದು ಕಂಡುಬಂದಿದ್ದು, ಇದು ಅಂತರಾಷ್ಟ್ರೀಯ ಪಂದ್ಯದ ಸಮಯದಲ್ಲಿ ಅಂಪೈರ್ ನಿರ್ಧಾರದ ವಿರುದ್ದದ ನಡೆಯಾಗಿದೆ" ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ. ಹೀಗಾಗಿ ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ. ಅಷ್ಟೇ ಅಲ್ಲದೆ ಆಟಗಾರರ ಶಿಸ್ತಿನ ದಾಖಲೆ ಪಟ್ಟಿಯಲ್ಲಿ ಒಂದು ಡಿಮೆರಿಟ್ ಪಾಯಿಂಟ್ ಅನ್ನು ಸೇರಿಸಲಾಗಿದೆ ಎಂದು ಐಸಿಸಿ ತಿಳಿಸಿದೆ.

ಇನ್ನು ಐಸಿಸಿ ನಿಯಮ ಉಲ್ಲಂಘಣೆಯ ಲೆವೆಲ್ 1 ಅಲ್ಲಿ ಕನಿಷ್ಠ ದಂಡ ಮತ್ತು ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗುತ್ತದೆ. ಇನ್ನು ಗರಿಷ್ಠ ದಂಡದಲ್ಲಿ ಪಂದ್ಯದ ಶುಲ್ಕದ ಶೇಕಡಾ 50 ರಷ್ಟು ಫೈನ್ ಮತ್ತು 2 ಡಿಮೆರಿಟ್ ಪಾಯಿಂಟ್‌ಗಳನ್ನು ನೀಡಲಾಗುತ್ತದೆ. 24 ತಿಂಗಳ ಅವಧಿಯಲ್ಲಿ ಆಟಗಾರನು ನಾಲ್ಕು ಅಥವಾ ಹೆಚ್ಚು ಡಿಮೆರಿಟ್ ಪಾಯಿಂಟ್‌ಗಳನ್ನು ಪಡೆದರೆ, ಅವರನ್ನು ಅಮಾನತು ಪಾಯಿಂಟ್ ಆಗಿ ಪರಿವರ್ತಿಸಲಾಗುತ್ತದೆ.

ಅದರಂತೆ ಎರಡು ಅಮಾನತು ಅಂಕಗಳನ್ನು ಪಡೆದರೆ ಒಂದು ಟೆಸ್ಟ್ ಅಥವಾ ಎರಡು ಏಕದಿನ ಪಂದ್ಯಗಳು ಅಥವಾ ಎರಡು ಟಿ 20 ಪಂದ್ಯಗಳಿಂದ ನಿಷೇಧಕ್ಕೊಳಗಾಗಲಿದ್ದಾರೆ.




