
ಭಾರತೀಯ ಚಿತ್ರರಂಗದಲ್ಲಿ ಅಟ್ಲಿ ಕುಮಾರ್ ಅವರಿಗೆ ಸಾಕಷ್ಟು ಬೇಡಿಕೆ ಇದೆ. ಕಾಲಿವುಡ್ನಲ್ಲಿ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ‘ಜವಾನ್’ ಸಿನಿಮಾ ಮೂಲಕ ಅವರು ಬಾಲಿವುಡ್ಗೂ ಕಾಲಿಟ್ಟಿದ್ದಾರೆ. ಈ ನಡುವೆ ಅವರು ಕಾನ್ ಚಿತ್ರೋತ್ಸವಕ್ಕೆ ಹಾಜರಿ ಹಾಕಿದ್ದಾರೆ.

ನಿರ್ದೇಶಕ ಅಟ್ಲಿ ಕುಮಾರ್ ಅವರು ತಮ್ಮ ಪತ್ನಿ ಪ್ರಿಯಾ ಜೊತೆ ಕಾನ್ ಚಿತ್ರೋತ್ಸವದಲ್ಲಿ ಭಾಗಿ ಆಗಿದ್ದಾರೆ. ಇದೇ ಮೊದಲ ಬಾರಿ ಅವರಿಗೆ ಈ ಪ್ರತಿಷ್ಠಿತ ಫಿಲ್ಮ್ ಫೆಸ್ಟಿವಲ್ನಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿದೆ. ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.

ಕಾನ್ ಚಿತ್ರೋತ್ಸವದಲ್ಲಿ ಸೆಲೆಬ್ರಿಟಿಗಳು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುವುದೇ ಒಂದು ವಿಶೇಷ ಆಕರ್ಷಣೆ. ಅಟ್ಲಿ ಕುಮಾರ್ ಮತ್ತು ಪ್ರಿಯಾ ಕೂಡ ಕೆಂಪು ಹಾಸಿನಲ್ಲಿ ನಡೆದು ಮಾಧ್ಯಮದ ಕ್ಯಾಮೆರಾಗಳಿಗೆ ಪೋಸ್ ನೀಡಿದ್ದಾರೆ. ಅವರ ಫೋಟೋಗಳು ವೈರಲ್ ಆಗಿವೆ.

ತಮಿಳಿನಲ್ಲಿ ಅಟ್ಲಿ ಕುಮಾರ್ ‘ರಾಜಾ ರಾಣಿ’, ‘ಮೆರ್ಸೆಲ್’, ‘ಬಿಗಿಲ್’ ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದಾರೆ. ಅನೇಕ ಪ್ರಶಸ್ತಿಗಳು ಅವರಿಗೆ ಸಿಕ್ಕಿವೆ. ಕಾನ್ ಸಿನಿಮೋತ್ಸವದಲ್ಲಿ ಭಾಗಿ ಆಗಿರುವುದರಿಂದ ಅವರ ಜನಪ್ರಿಯತೆ ಇನ್ನಷ್ಟು ಹೆಚ್ಚಾಗಿದೆ.

ಶಾರುಖ್ ಖಾನ್ ನಟನೆಯ ‘ಜವಾನ್’ ಸಿನಿಮಾಗೆ ಅಟ್ಲಿ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಈಗಾಗಲೇ ಈ ಚಿತ್ರದ ಪೋಸ್ಟರ್ ಗಮನ ಸೆಳೆದಿದೆ. ಅಟ್ಲಿ ಮತ್ತು ಶಾರುಖ್ ಕಾಂಬಿನೇಷನ್ ಬಗ್ಗೆ ಹೈಪ್ ಸೃಷ್ಟಿ ಆಗಿದೆ.