JioPhone Next: ಸ್ಮಾರ್ಟ್ಫೋನ್ ಕ್ಷೇತ್ರದಲ್ಲಿ ಹೊಸ ಕ್ರಾಂತಿ: ಕೇವಲ 500 ರೂ.ಗೆ ಜಿಯೋ ನೆಕ್ಸ್ಟ್
jiophone next Price: ಈ ಯೋಜನೆಯಡಿಯಲ್ಲಿ ರಿಲಯನ್ಸ್ ಜಿಯೋ ತನ್ನ ನೂತನ ಜಿಯೋ ಫೋನ್ ನೆಕ್ಸ್ಟ್ ಅನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದು, ಅದರಂತೆ ಕೇವಲ 500 ರೂ.ಗೆ ಸ್ಮಾರ್ಟ್ಫೋನ್ ಖರೀದಿಸುವ ಅವಕಾಶ ಗ್ರಾಹಕರದ್ದಾಗಲಿದೆ.
Updated on: Sep 04, 2021 | 7:08 PM

ರಿಲಯನ್ಸ್ ಜಿಯೋ-ಗೂಗಲ್ ಸಹಯೋಗದಲ್ಲಿ ಹೊರ ತರುತ್ತಿರುವ ಬಹು ನಿರೀಕ್ಷಿತ ಜಿಯೋ ಫೋನ್ ನೆಕ್ಸ್ಟ್ (JioPhone Next) ಸೆಪ್ಟೆಂಬರ್ 10 ರಂದು ಬಿಡುಗಡೆಯಾಗಲಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಸ್ಮಾರ್ಟ್ಫೋನ್ಗಳಿಗಿಂತ ಕೈಗೆಟುಕುವ ಬೆಲೆಯಲ್ಲಿ ಹೊಸ ಮೊಬೈಲ್ನ್ನು ಪರಿಚಯಿಸುವುದಾಗಿ ಈ ಹಿಂದೆಯೇ ಜಿಯೋ ಘೋಷಿಸಿತ್ತು.

ಇದೀಗ ಅದರ ಮೊದಲ ಹೆಜ್ಜೆ ಎಂಬಂತೆ ನೂತನ ಸ್ಮಾರ್ಟ್ಫೋನ್ ಜಿಯೋ ನೆಕ್ಸ್ಟ್ (JioPhone Next) ಅನ್ನು ಕೇವಲ 500 ರೂ.ಗೆ ಗ್ರಾಹಕರ ಮುಂದಿಡಲು ಜಿಯೋ ಕಂಪೆನಿ ನಿರ್ಧರಿಸಿದೆ ಎಂದು ವರದಿಯಾಗಿದೆ. ಅಂದರೆ ಜಿಯೋ ಫೋನನ್ನು ಖರೀದಿಸಲು ಒಂದೇ ಬಾರಿಗೆ ಪೂರ್ತಿ ಹಣ ನೀಡುವ ಅಗತ್ಯವಿಲ್ಲ. ಬದಲಾಗಿ ಫೋನಿನ ಒಟ್ಟು ಮೊತ್ತದ ಶೇ.10ರಷ್ಟು ಹಣವನ್ನು ನೀಡಿ ಜಿಯೋ ನೆಕ್ಸ್ಟ್ ಅನ್ನು ಖರೀದಿಸಬಹುದು.

ಇದಕ್ಕಾಗಿ ರಿಲಯನ್ಸ್ ಜಿಯೋ ಹಲವಾರು ಭಾರತೀಯ ಬ್ಯಾಂಕುಗಳೊಂದಿಗೆ ಪಾಲುದಾರಿಕೆಗೆ ಮುಂದಾಗಿದೆ. ಅದರಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಿರಮಲ್ ಕ್ಯಾಪಿಟಲ್, ಐಡಿಎಫ್‌ಸಿ ಫಸ್ಟ್ ಅಶೂರ್ ಮತ್ತು ಡಿಎಂಐ ಫೈನಾನ್ಸ್‌ನ ಸಹಭಾಗಿತ್ವದಲ್ಲಿ ಮುಂದಿನ 6 ತಿಂಗಳಲ್ಲಿ 50 ದಶಲಕ್ಷ ಜಿಯೋ ಫೋನ್ ನೆಕ್ಟ್ಸ್ ಅನ್ನು ಮಾರಾಟ ಮಾಡುವ ಗುರಿ ಇಟ್ಟುಕೊಂಡಿದೆ ಎಂದು ಇಟಿ ನೌ ವರದಿ ಮಾಡಿದೆ.

ವರದಿಯ ಪ್ರಕಾರ, ಕಂಪನಿಯು ಎರಡು ಮಾಡೆಲ್ನ ಜಿಯೋಫೋನ್ ನೆಕ್ಸ್ಟ್ ಅನ್ನು ಪರಿಚಯಿಸಲಿದೆ. ಒಂದು ಬೇಸಿಕ್ ಜಿಯೋಫೋನ್ ನೆಕ್ಸ್ಟ್ ಆಗಿದ್ದು ಅದರ ಬೆಲೆ 5000 ರೂ. ಇರಲಿದೆ ಎಂದು ಅಂದಾಜಿಸಲಾಗಿದೆ. ಹಾಗೆಯೇ ಎರಡನೇ ಮಾಡೆಲ್ ಜಿಯೋಫೋನ್ ನೆಕ್ಸ್ಟ್ ಅಡ್ವಾನ್ಸ್ ಎಂಬ ಹೆಸರಿನಲ್ಲಿ ಬರಲಿದ್ದು, ಇದರ ಬೆಲೆ 7000. ರೂ. ಎಂದು ಹೇಳಲಾಗಿದೆ. ಇದಾಗ್ಯೂ ಜಿಯೋ ಕಂಪೆನಿ ಇನ್ನೂ ಕೂಡ ನೂತನ ಮೊಬೈಲ್ ಬೆಲೆಯನ್ನು ಬಹಿರಂಗಪಡಿಸಿಲ್ಲ.

ಗ್ರಾಹಕರು ಈ ಫೋನ್ಗಳ ಖರೀದಿ ಮೇಲೆ ವಿಶೇಷ ಇಎಂಐ ಆಯ್ಕೆಗಳು ದೊರೆಯಲಿದೆ. ಅದರಂತೆ ಸಂಪೂರ್ಣ ಮೊತ್ತದ ಅಂದರೆ ಶೇಕಡಾ 10 ರಷ್ಟು ಮಾತ್ರ ಪಾವತಿಸುವ ಮೂಲಕ ಮೊಬೈಲ್ ಅನ್ನು ಖರೀದಿಸಬಹುದು. ಆ ಬಳಿಕ ಉಳಿದ ಹಣವನ್ನು ಬ್ಯಾಂಕ್ ಮತ್ತು ಸಾಲ ನೀಡಿದ ಪಾಲುದಾರರಿಗೆ ತಿಂಗಳ ಕಂತುಗಳಂತೆ ನೀಡಬೇಕಾಗುತ್ತದೆ.

EMI ಯೋಜನೆಯಡಿಯಲ್ಲಿ ರಿಲಯನ್ಸ್ ಜಿಯೋ ತನ್ನ ನೂತನ ಜಿಯೋ ಫೋನ್ ನೆಕ್ಸ್ಟ್ ಅನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದು, ಅದರಂತೆ ಕೇವಲ 500 ರೂ.ಗೆ ಸ್ಮಾರ್ಟ್ಫೋನ್ ಖರೀದಿಸುವ ಅವಕಾಶ ಗ್ರಾಹಕರದ್ದಾಗಲಿದೆ. ಈ ಮೂಲಕ ಈ ಹಿಂದೆ ಜಿಯೋ ಸಿಮ್ ಮೂಲಕ ಸಂಚಲನ ಸೃಷ್ಟಿಸಿದ್ದ ರಿಲಯನ್ಸ್ ಸ್ಮಾರ್ಟ್ಫೋನ್ ಕ್ಷೇತ್ರದಲ್ಲೂ ಹೊಸ ಮಾರುಕಟ್ಟೆ ಸೃಷ್ಟಿಸುವ ಇರಾದೆಯಲ್ಲಿದೆ.




