- Kannada News Photo gallery Kadalekai Parishe: Bangalore's Iconic Groundnut Fair and Festival starts Today
Kadalekai Parishe: ಇಂದಿನಿಂದ ಶುರು ಐತಿಹಾಸಿಕ ಕಡಲೆಕಾಯಿ ಪರಿಷೆ; ಬಡವರ ಬಾದಾಮಿ ಸವಿಯಲು ಸಜ್ಜಾಗಿರುವ ಸಿಟಿ ಮಂದಿ!
ಬಸವನಗುಡಿಯಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ ಇಂದಿನ ಕಾರ್ತಿಕ ಮಾಸದ ಕೊನೆಯ ಸೋಮವಾರದಂದು ಆರಂಭವಾಗಲಿದ್ದು, ದೊಡ್ಡ ಬಸವಣ್ಣನ ದೇಗುಲದಲ್ಲಿ ಅಭಿಷೇಕದೊಂದಿಗೆ ಚಾಲನೆ ಪಡೆಯಲಿದೆ. ಈ ವರ್ಷ ಐದು ದಿನಗಳ ಕಾಲ ನಡೆಯಲಿರುವ ಈ ಜಾತ್ರೆಯು ಪ್ಲಾಸ್ಟಿಕ್ ಮುಕ್ತವಾಗಿದ್ದು, ಲಕ್ಷಾಂತರ ಪ್ರವಾಸಿಗರು ಆಗಮಿಸುವ ನಿರೀಕ್ಷೆಯಿದೆ. ನೆರೆ ರಾಜ್ಯಗಳಿಂದಲೂ ವ್ಯಾಪಾರಿಗಳು ಆಗಮಿಸಿದ್ದು, ಬಸವನಗುಡಿ ಹಬ್ಬದ ವಾತಾವರಣದಿಂದ ಕಂಗೊಳಿಸುತ್ತಿದೆ.
Updated on: Nov 17, 2025 | 8:27 AM

ಬಸವನಗುಡಿಯ ಐತಿಹಾಸಿಕ ಕಡಲೆಕಾಯಿ ಪರಿಷೆ ಕಾರ್ತಿಕ ಮಾಸದ ಕೊನೆ ಸೋಮವಾರವಾದ ಇಂದು ಆರಂಭವಾಗಲಿದೆ. ಇಂದು ಬೆಳಗ್ಗೆ ಬಸವನಗುಡಿಯ ಡೊಡ್ಡ ಬಸವಣ್ಣನ ದೇಗುಲದಲ್ಲಿ ಕಡಲೆಕಾಯಿ ಅಭಿಷೇಕ ಮಾಡುವ ಮೂಲಕ ಕಡಲೆಕಾಯಿ ಪರಿಷೆಗೆ ಚಾಲನೆ ಸಿಗಲಿದೆ. ದೊಡ್ಡ ಗಣಪತಿ ಗುಡಿ, ದೊಡ್ಡ ಬಸವಣ್ಣನ ದೇಗುಲಕ್ಕೆ ನಿನ್ನೆಯಿಂದಲೇ ಭಕ್ತರು ಭೇಟಿ ನೀಡುತ್ತಿದ್ದು, ಕಡಲೆಕಾಯಿಪರಿಷೆ ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ.

ಪರಿಷೆಗೆ ಈಗಾಗಲೇ ಬಸವನಗುಡಿಯ ಬೀದಿಗಳು ಮಧುವಣಗಿತ್ತಿಯಂತೆ ಸಿಂಗಾರಗೊಂಡಿದ್ದು, ರಸ್ತೆಯ ಎರಡು ಬದಿಗಳಲ್ಲಿ ಬಡವರ ಬಾದಾಮಿ ಕಡಲೆಕಾಯಿಯ ರಾಶಿ ಹಾಜರ್ ಆಗಿದೆ. ಪ್ರತಿ ವರ್ಷ ಎರಡು ದಿನಕ್ಕೆ ಮುಗಿಯುತ್ತಿದ್ದ ಕಡಲೆಕಾಯಿ ಪರಿಷೆಯನ್ನು ಇದೇ ಮೊದಲ ಬಾರಿಗೆ ಐದು ದಿನಗಳ ಕಾಲ ನಡೆಸಲು ಮುಂದಾಗಿದ್ದು, ಈಗಾಗಲೇ ಬೇರೆ ಬೇರೆ ಭಾಗಗಳಿಂದ ಆಗಮಿಸಿರುವ ವ್ಯಾಪಾರಿಗಳು ತಮ್ಮ ತಮ್ಮ ಜಾಗ ಗುರುತಿಸಿ ಕಡಲೆಕಾಯಿ ರಾಶಿ ಹಾಕಿದ್ದಾರೆ.

ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಇಡೀ ಬಸವನಗುಡಿಯ ಸುತ್ತಮುತ್ತ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಈ ಬಾರಿ ಕಡಲೆಕಾಯಿ ಪರಿಷೆಯನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಹೊರಟಿದ್ದು, ಈಗಾಗಲೇ ಸ್ವಯಂಸೇವಕರು, ಕಾಲೇಜು ವಿದ್ಯಾರ್ಥಿಗಳು ವ್ಯಾಪಾರಿಗಳಿಗೆ ಪೇಪರ್ ಬ್ಯಾಗ್ಗಳನ್ನು ವಿತರಿಸಿ ಪ್ಲಾಸ್ಟಿಕ್ ಬಳಸದಂತೆ ಅರಿವು ಮೂಡಿಸುತ್ತಿದ್ದಾರೆ.

ಕಡಲೆಕಾಯಿಪರಿಷೆಯಲ್ಲಿ ತಮಿಳುನಾಡು, ಆಂಧ್ರಪ್ರದೇಶ ಸೇರಿ ನೆರೆ ರಾಜ್ಯಗಳ ವ್ಯಾಪಾರಿಗಳು ಕೂಡ ಆಗಮಿಸಿದ್ದು, ವಿವಿಧ ಬಗೆಯ ಕಡಲೆಕಾಯಿಗಳು ಸಿಟಿಮಂದಿಯ ನಾಲಿಗೆ ರುಚಿ ಹೆಚ್ಚಿಸಲು ಸಜ್ಜಾಗಿವೆ. ಇನ್ನು ಲಕ್ಷಾಂತರ ಜನರು ಸೇರುವ ನಿರೀಕ್ಷೆ ಇರುವುದರಿಂದ ಪೊಲೀಸ್ ಇಲಾಖೆ ಕೂಡ ಭದ್ರತೆಗೆ ಸಜ್ಜಾಗಿದ್ದು, ದೇಗುಲದ ಸುತ್ತಮುತ್ತ, ಪರಿಷೆ ನಡೆಯುವ ಬೀದಿಗಳಲ್ಲಿ ಈಗಾಗಲೇ ನಿಗಾ ಇಟ್ಟಿದ್ದಾರೆ. ಇಡೀ ರಸ್ತೆಯಲ್ಲಿ ಬಗೆ ಬಗೆಯ ಮಳಿಗೆಗಳು ತಲೆ ಎತ್ತಿದ್ದು, ಜಾತ್ರೆ ಸಂಭ್ರಮಕ್ಕೆ ಮೆರುಗು ತುಂಬಲು ಸಜ್ಜಾಗಿವೆ.

ಆಧುನಿಕತೆಯ ಭರಾಟೆ ಮಧ್ಯೆ, ಕೆಲಸ, ಜೀವನದ ಜಂಜಾಟದಲ್ಲಿ ಸುಸ್ತಾಗಿದ್ದ ಸಿಟಿಮಂದಿ ಇದೀಗ ಕಡಲೆಕಾಯಿ ಪರಿಷೆಯಲ್ಲಿ ರೌಂಡ್ ಹಾಕಿ ರಿಲ್ಯಾಕ್ಸ್ ಆಗೋಕೆ ಸಜ್ಜಾಗಿದ್ದಾರೆ. ಇತ್ತ ಕಡಲೆಕಾಯಿ ಬೆಲೆ ಬೆಳೆದು ಕಾದುಕುಳಿತ ವ್ಯಾಪಾರಿಗಳು ಕೂಡ ಲಾಭದ ನಿರೀಕ್ಷೆಯಲ್ಲಿದ್ದಾರೆ.



