- Kannada News Photo gallery Karnataka late IAS Officer Mahantesh bilagi daughter chaitanya gets Governmnet job, Which Department? salary here Is Her Job Details
ಮೃತ IAS ಮಹಾಂತೇಶ್ ಪುತ್ರಿಗೆ ಯಾವ ಇಲಾಖೆಯಲ್ಲಿ ಕೆಲಸ? ಎಷ್ಟು ಸಂಬಳ? ಇಲ್ಲಿದೆ ವಿವರ
ಪ್ರಾಮಾಣಿಕ, ಕರ್ತವ್ಯನಿಷ್ಠ, ಜನಪರ ಕಾಳಜಿ, ಯುವಕರಿಗೆ ಸ್ಪೋರ್ತಿದಾಯಕರಾಗಿದ್ದ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರು ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದು, ಇವರ ಸಾವಿಗೆ ಇಡೀ ಕರ್ನಾಟಕವೇ ಮಮ್ಮಲ ಮರುಗಿದೆ. ಅನುಕಂಪದ ಆಧಾರದ ಮೇಲೆ ಮಹಾಂತೇಶ್ ಬೀಳಗಿ ಕುಟುಂಬಕ್ಕೆ ಅನುಕಂಪದ ಸರ್ಕಾರಿ ನೌಕರಿ ನೀಡಬೇಕೆಂಬ ಹಲವರ ಕೂಗಿಗೆ ರಾಜ್ಯ ಸರ್ಕಾರ ಸ್ಪಂದಿಸಿದ್ದು, ಇದೀಗ ಮಹಾಂತೇಶ್ ಪುತ್ರಿ ಚೈತನ್ಯಾ ಬೀಳಗಿ ಅವರಿಗೆ ಅನುಕಂಪದ ಮೇರೆಗೆ ಸರ್ಕಾರಿ ಹುದ್ದೆ ನೀಡಲಾಗಿದೆ. ಇಂದು (ಜನವರಿ 28) ಸ್ವತಃ ಸಿಎಂ ಸಿದ್ದರಾಮಯ್ಯನವರೇ ನೇಮಕಾತಿ ಆದೇಶ ಪ್ರತಿಯನ್ನು ಹಸ್ತಾಂತರ ಮಾಡಿದರು. ಇನ್ನು ಚೈತನ್ಯಾ ಅವರಿಗೆ ಯಾವ ಇಲಾಖೆಯಲ್ಲಿ ಕೆಲಸ ನೀಡಲಾಗಿದೆ. ವೇತನ ಎಷ್ಟು ಎನ್ನುವ ಮಾಹಿತಿ ಈ ಕೆಳಗಿನಂತಿದೆ.
Updated on: Jan 28, 2026 | 2:36 PM

ದಕ್ಷ ಹಾಗೂ ಜನಸ್ನೇಹಿ ಆಡಳಿತಕ್ಕೆ ಹೆಸರಾಗಿದ್ದ ದಿವಂಗತ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರ ಕುಟುಂಬಕ್ಕೆ ಅನುಕಂಪದ ಕೆಲಸ ನೀಡಬೇಕೆಂಬ ಕೂಗು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಇತ್ತೀಚೆಗೆ ಮಹಾಂತೇಶ್ ಅವರ ಪುತ್ರಿ ಚೈತನ್ಯ ಮಹಾಂತೇಶ್ ಬೀಳಗಿ ಅವರಿಗೆ ಸರ್ಕಾರಿ ನೌಕರಿ ನೀಡಲು ಸಚಿವ ಸಂಪುಟ ಮಹತ್ವದ ತೀರ್ಮಾನ ಕೈಗೊಂಡಿತ್ತು. ಅದರಂತೆ ಇದೀಗ ಮಹಾಂತೇಶ್ ಪುತ್ರಿಗೆ ಅಧಿಕೃತವಾಗಿ ನೇಮಕಾತಿ ಆದೇಶವನ್ನು ನೀಡಲಾಗಿದೆ.

ಭಾರತೀಯ ಆಡಳಿತ ಸೇವೆಗೆ ಸೇರಿದ ದಕ್ಷ ಅಧಿಕಾರಿಯಾಗಿದ್ದ ಮಹಾಂತೇಶ್ ಬೀಳಗಿ ಅವರು ಸೇವೆಯಲ್ಲಿದ್ದಾಗಲೇ ದಿನಾಂಕ 25.11.2025 ರಂದು ನಿಧನರಾಗಿದ್ದರು. ಅವರ ಕುಟುಂಬದ ಆಧಾರಸ್ತಂಭವಾಗಿದ್ದ ಅಧಿಕಾರಿಯ ಅಗಲಿಕೆಯ ನಂತರ, ಅವರ ಅವಲಂಬಿತರಿಗೆ ನೆರವಾಗಲು ಸರ್ಕಾರವು ಕರ್ನಾಟಕ ನಾಗರೀಕ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು, 1996ರ ನಿಯಮ 6(1)ರನ್ವಯ ಈ ಕ್ರಮ ಕೈಗೊಂಡಿದೆ.

ದಿವಂಗತ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರ ಪುತ್ರಿ ಕುಮಾರಿ ಚೈತನ್ಯಾ ಎಂ. ಬೀಳಗಿ ಅವರಿಗೆ ಕರ್ನಾಟಕ ಸರ್ಕಾರವು ಅನುಕಂಪದ ಆಧಾರದ ಮೇಲೆ ಸಚಿವಾಲಯದಲ್ಲಿ ಸಹಾಯಕ ಹುದ್ದೆ ನೀಡಲಾಗಿದೆ. ಇಂದು (ಜನವರಿ 29) ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಚೈತನ್ಯಾ ಅವರಿಗೆ ನೇಮಕಾತಿ ಆದೇಶ ಪತ್ರವನ್ನು ಹಸ್ತಾಂತರಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚೈತನ್ಯಾ ಬೀಳಗಿ ಅವರಿಗೆ ನೇಮಕಾತಿ ಆದೇಶ ಪತ್ರವನ್ನು ಅಧಿಕೃತವಾಗಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಹೆಚ್.ಕೆ. ಪಾಟೀಲ್, ಎಂ.ಬಿ. ಪಾಟೀಲ್, ಮತ್ತು ಶಿವಾನಂದ ಪಾಟೀಲ್ ಅವರು ಉಪಸ್ಥಿತರಿದ್ದರು. ಅಲ್ಲದೆ ಸರ್ಕಾರದ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಈ ವೇಳೆ ಹಾಜರಿದ್ದು, ಕುಟುಂಬಕ್ಕೆ ಧೈರ್ಯ ತುಂಬಿದರು.

ಕುಮಾರಿ ಚೈತನ್ಯಾ ಅವರನ್ನು 49,050 - 92,500 ರೂ. ಗಳ ವೇತನ ಶ್ರೇಣಿಯಲ್ಲಿ ಸಹಾಯಕ ಹುದ್ದೆಗೆ ಎರಡು ವರ್ಷಗಳ ಪರೀಕ್ಷಾರ್ಥಾವಧಿಯ ಮೇರೆಗೆ ನೇಮಕ ಮಾಡಲಾಗಿದ್ದು, ನೇಮಕಾತಿ ಆದೇಶ ಹೊರಡಿಸಿದ 15 ದಿನಗಳ ಒಳಗಾಗಿ ಅಭ್ಯರ್ಥಿಯು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (ಆಡಳಿತ-1), ಬಹುಮಹಡಿ ಕಟ್ಟಡದ ಕೊಠಡಿ ಸಂಖ್ಯೆ 428ರಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕು.

ಅಭ್ಯರ್ಥಿಯು ತಾನು ವ್ಯಾಸಂಗ ಮಾಡಿದ ಸಂಸ್ಥೆಗೆ ಸಂಬಂಧಪಡದ ಇಬ್ಬರು ಗಣ್ಯ ವ್ಯಕ್ತಿಗಳಿಂದ ಪಡೆದ ನಡತೆ ಪ್ರಮಾಣಪತ್ರವನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಇನ್ನು ಮೃತ ಮಹಾಂತೇಶ್ ಕುಟುಂಬಕ್ಕೆ ಅನುಕಂಪದ ಕೆಲಸ ನೀಡುವ ಮೂಲಕ ಒಬ್ಬ ದಕ್ಷ ಅಧಿಕಾರಿಯ ಕುಟುಂಬಕ್ಕೆ ಸರ್ಕಾರವು ಈ ಮೂಲಕ ನೈತಿಕ ಬೆಂಬಲವನ್ನು ನೀಡಿದಂತಾಗಿದೆ.

ದಿವಂಗತ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರು ದಕ್ಷ, ಜನಸ್ನೇಹಿ ಆಡಳಿತಕ್ಕೆ ಹೆಸರಾಗಿದ್ದರು. ತಂದೆ ಇದೀಗ ಮಗಳು ಸಹ ಸಾರ್ವಜನಿಕರ ಸೇವೆ ಮಾಡಲಿ. ಚೈತನ್ಯಾ ಅವರು ತಮ್ಮ ತಂದೆಯ ಹಾದಿಯಲ್ಲೇ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಳ್ಳಲಿ ಎಂಬುದು ಎಲ್ಲರ ಆಶಯವಾಗಿದೆ.

2025ರ ನವೆಂಬರ್ 25ರಂದು ವಿಜಯಪುರದಿಂದ ಕಲಬುರಗಿಗೆ ತೆರಳುತ್ತಿದ್ದ ವೇಳೆ ಜೇವರ್ಗಿ ತಾಲೂಕಿನ ಗೌನಳ್ಳಿ ಕ್ರಾಸ್ ಬಳಿ ಕಾರು ಅಪಘಾತದಲ್ಲಿ ಮಹಾಂತೇಶ ಬೀಳಗಿ ಮೃತಪಟ್ಟಿದ್ದರು. ಏಕಾಏಕಿ ಅಡ್ಡ ಬಂದ ಶ್ವಾನವನ್ನು ಉಳಿಸಲು ಹೋಗಿ ಇನ್ನೋವಾ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ಯ ಪಕ್ಕಕ್ಕೆ ಪಲ್ಟಿಯಾಗಿತ್ತು. ಈ ದುರ್ಘಟನೆಯಲ್ಲಿ ಮಹಾಂತೇಶ್ ಬಿಳಗಿ ಸೇರಿದಂತೆ ಸೋದರರಾದ ಶಂಕರ ಬೀಳಗಿ ಹಾಗೂ ಈರಣ್ಣ ಶಿರಸಂಗಿ ಕೂಡ ಮೃತಪಟ್ಟಿದ್ದರು.
