
‘ಕೆಜಿಎಫ್ ಚಾಪ್ಟರ್ 2’ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಬೆಂಗಳೂರಿನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಟ್ರೇಲರ್ ರಿಲೀಸ್ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ಸಂಜಯ್ ದತ್ ಕೂಡ ಆಗಮಿಸಿದ್ದರು.

ಸಂಜಯ್ ದತ್ ಹಾಗೂ ಯಶ್ ನಡುವೆ ಒಳ್ಳೆಯ ಬಾಂಧವ್ಯ ಇದೆ. ಇದು ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಸಾಬೀತಾಗಿದೆ. ಇಬ್ಬರೂ ಹಗ್ ಮಾಡುವ ಮೂಲಕ ಒಬ್ಬರನ್ನೊಬ್ಬರು ಎದುರುಗೊಂಡರು.

ಏಪ್ರಿಲ್ 14ರಂದು ಐದು ಭಾಷೆಗಳಲ್ಲಿ ‘ಕೆಜಿಎಫ್ 2’ ಸಿನಿಮಾ ತೆರೆಗೆ ಬರುತ್ತಿದೆ. ಭಾನುವಾರ ನಡೆದ ಗ್ರ್ಯಾಂಡ್ ಇವೆಂಟ್ನಲ್ಲಿ ಐದೂ ಭಾಷೆಗಳಲ್ಲಿ ಟ್ರೇಲರ್ ಲಾಂಚ್ ಆಗಿದೆ.

‘ರಕ್ತದಿಂದ ಬರೆದ ಕಥೆ ಇದು, ಶಾಹಿಯಿಂದ ಮುಂದುವರಿಸೋಕೆ ಆಗಲ್ಲ. ಮುಂದುವರಿಸಬೇಕು ಎಂದರೆ ಮತ್ತೆ ರಕ್ತವನ್ನೇ ಕೇಳತ್ತೆ’, ‘ಅಲ್ಲಿ ಬೀಳುವ ಹೆಣಗಳೂ ಉಪಯೋಗಕ್ಕೆ ಬರುತ್ತದೆ, ಬೇಕಿದ್ದರೆ ರಣಹದ್ದುಗಳನ್ನು ಕೇಳು’ ಎಂಬಿತ್ಯಾದಿ ಡೈಲಾಗ್ಗಳು ಟ್ರೇಲರ್ನಲ್ಲಿ ಹೈಲೈಟ್ ಆಗಿದೆ. ಸಿನಿಮಾದ ಹಿನ್ನೆಲೆ ಸಂಗೀತ ಟ್ರೇಲರ್ನ ತೂಕವನ್ನು ಹೆಚ್ಚಿಸಿದೆ.

‘ಕೆಜಿಎಫ್’ ಸಿನಿಮಾ ಸೃಷ್ಟಿಸಿದ ಹೈಪ್ ತುಂಬಾನೇ ದೊಡ್ಡಮಟ್ಟದ್ದು. ಈ ಕಾರಣಕ್ಕೆ ‘ಕೆಜಿಎಫ್ 2’ ಕಣ್ತುಂಬಿಕೊಳ್ಳೋಕೆ ಅಭಿಮಾನಿಗಳು ಕಾದು ಕೂತಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈ ಮೊದಲೇ ಸಿನಿಮಾ ತೆರೆಗೆ ಬಂದು ಅಬ್ಬರಿಸಬೇಕಿತ್ತು.

ಮೊದಲ ಚಾಪ್ಟರ್ ಪೂರ್ಣಗೊಳ್ಳುತ್ತಿದ್ದಂತೆ ಎರಡನೇ ಚಾಪ್ಟರ್ ಕೆಲಸಗಳು ಆರಂಭಗೊಂಡಿದ್ದವು. ಆದರೆ, ಕೊವಿಡ್ ಮೂರು ಅಲೆಗಳಿಂದ ಸಿನಿಮಾ ಕೆಲಸಗಳು ವಿಳಂಬ ಆದವು.