
ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ರಾಜ್ಯ ಪ್ರವಾಸಕ್ಕಾಗಿ ಭೂತಾನ್‌ಗೆ ಭೇಟಿ ನೀಡಿದ್ದು ಅಲ್ಲಿ ಅವರು ಭಾರತ-ಭೂತಾನ್ ದ್ವಿಪಕ್ಷೀಯ ಪಾಲುದಾರಿಕೆಯನ್ನು ಮತ್ತಷ್ಟು ಹೆಚ್ಚಿಸಲು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.

ಭೇಟಿಯ ಸಮಯದಲ್ಲಿ, ಪ್ರಧಾನಿ ಮೋದಿಯವರಿಗೆ ಭೂತಾನ್‌ನ ಅತ್ಯುನ್ನತ ನಾಗರಿಕ ಗೌರವವಾದ 'ಆರ್ಡರ್ ಆಫ್ ದಿ ಡ್ರುಕ್ ಗ್ಯಾಲ್ಪೋ' ನೀಡಲಾಯಿತು. ಇದನ್ನು ಮೋದಿ ಭಾರತದ ಜನರಿಗೆ ಸಮರ್ಪಿಸಿದ್ದಾರೆ

ಮಾರ್ಚ್ 22-23 ರಂದು ಭೂತಾನ್‌ಗೆ ಎರಡು ದಿನಗಳ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಭೂತಾನ್ ರಾಜ ಜಿಗ್ಮೆ ಖೇಸರ್ ನಾಮ್ಗ್ಯೆಲ್ ವಾಂಗ್‌ಚುಕ್ ಅವರು ಲಿಂಗಕಾನಾ ಅರಮನೆಯಲ್ಲಿ ಖಾಸಗಿ ಭೋಜನದ ಆತಿಥ್ಯ ವಹಿಸಿದ್ದರು.

ಭೂತಾನ್ ರಾಜ ಜಿಗ್ಮೆ ಖೇಸರ್ ನಾಮ್ಗ್ಯೆಲ್ ವಾಂಗ್‌ಚುಕ್ ಅವರ ಕುಟುಂಬದೊಂದಿಗೆ ಮೋದಿ ಸ್ವಲ್ಪ ಹೊತ್ತು ಕಾಲಕಳೆದಿದ್ದು, ಅವರ ಮಕ್ಕಳೊಡನೆ ಒಂದಾಗಿ ಬೆರೆಯುತ್ತಿರುವ ಫೋಟೋ ವೈರಲ್ ಆಗಿದೆ.

ಪಿಎಂ ಮೋದಿ ಮತ್ತು ಭೂತಾನ್ ಪಿಎಂ ಟೋಬ್ಗೇ ಅವರು ಉನ್ನತ ಮಟ್ಟದ ಸಭೆಯನ್ನು ನಡೆಸಿದ್ದು, ದ್ವಿಪಕ್ಷೀಯ ಇಂಧನ ಸಹಕಾರದ ಎಲ್ಲಾ ಅಂಶಗಳನ್ನು ಪರಿಶೀಲಿಸಿದರು. 1200 ಮೆಗಾವ್ಯಾಟ್ ಪುನಟ್ಸಂಗ್ಚು-I ಹೈಡ್ರೋ-ಎಲೆಕ್ಟ್ರಿಕ್ ಪ್ರಾಜೆಕ್ಟ್ ಕುರಿತು ಉಭಯ ನಾಯಕರು ತಜ್ಞರ ಮಟ್ಟದ ಚರ್ಚೆಗಳನ್ನು ಸ್ವಾಗತಿಸಿದರು.

ಭಾರತ ಮತ್ತು ಭೂತಾನ್ ಪರಸ್ಪರ ನಂಬಿಕೆ, ಸದ್ಭಾವನೆ ಮತ್ತು ತಿಳುವಳಿಕೆಯ ಮೇಲೆ ಸ್ಥಾಪಿಸಲಾದ ಅನನ್ಯ ಮತ್ತು ಅನುಕರಣೀಯ ದ್ವಿಪಕ್ಷೀಯ ಸಂಬಂಧವನ್ನು ಹಂಚಿಕೊಳ್ಳುತ್ತವೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಭೂತಾನ್ ರಾಜ ಜಿಗ್ಮೆ ಖೇಸರ್ ನಮ್ಗ್ಯೆಲ್ ವಾಂಗ್‌ಚುಕ್ ಅವರು ಪ್ರಧಾನಿ ಮೋದಿಯವರನ್ನು ಶ್ಲಾಘಿಸಿದ್ದು, ಭಾರತವು ಭರವಸೆಯ ಮತ್ತು ಸಮೃದ್ಧ ಭವಿಷ್ಯಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಒತ್ತಿಹೇಳಿದ್ದಾರೆ