17ನೇ ಆವೃತ್ತಿಯ ಐಪಿಎಲ್ಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಈಗಾಗಲೇ ಲೀಗ್ನಲ್ಲಿ ಐದು ಪಂದ್ಯಗಳು ನಡೆದಿದ್ದು, ಈ ಐದೂ ಪಂದ್ಯಗಳು ಅಭಿಮಾನಿಗಳನ್ನು ರಂಜಿಸುವಲ್ಲಿ ಯಶಸ್ವಿಯಾಗಿವೆ. ಆದರೆ ಆಡಿದ ಐದು ಪಂದ್ಯಗಳಲ್ಲಿ ತವರು ತಂಡಗಳೇ ಗೆಲುವು ಸಾಧಿಸಿರುವುದು ಪ್ರವಾಸಿ ತಂಡದ ಅಭಿಮಾನಿಗಳಿಗೆ ಕೊಂಚ ನಿರಾಸೆಯನ್ನುಂಟು ಮಾಡಿದೆ.
ವಾಸ್ತವವಾಗಿ ಐಪಿಎಲ್ನಲ್ಲಿ ಇದುವರೆಗೆ ಆಡಿರುವ ಐದೂ ಪಂದ್ಯಗಳಲ್ಲಿ ಆತಿಥೇಯ ತಂಡವೇ ಗೆಲುವು ಸಾಧಿಸಿದೆ. ಅಲ್ಲದೆ ಗುರಿ ಬೆನ್ನಟ್ಟಿದ ತಂಡಗಳಿಗಿಂತ ಮೊದಲು ಬ್ಯಾಟಿಂಗ್ ಮಾಡಿದ ತಂಡಗಳೆ ಹೆಚ್ಚು ಗೆಲುವು ಸಾಧಿಸಿವೆ. ಅದರ ಸಂಪೂರ್ಣ ಅಂಕಿಅಂಶಗಳು ಹೀಗಿವೆ.
ಲೀಗ್ನ ಉದ್ಘಾಟನಾ ಪಂದ್ಯ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ಚೆನ್ನೈನ ಎಂ ಚಿದಂಬರಂ ಮೈದಾನದಲ್ಲಿ ನಡೆದಿತ್ತು. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ 176 ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ಸಿಎಸ್ಕೆ ತವರಿನ ಲಾಭ ಪಡೆದು 6 ವಿಕೆಟ್ಗಳಿಂದ ಗೆದ್ದುಬೀಗಿತ್ತು.
ಎರಡನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ 174 ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ಆತಿಥೇಯ ಪಂಜಾಬ್ 4 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತ್ತು.
ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ನಡುವೆ ನಡೆದ ಮೂರನೇ ಪಂದ್ಯದಲ್ಲೂ ಆತಿಥೇಯ ಕೋಲ್ಕತ್ತಾ, ಪ್ರವಾಸಿ ಹೈದರಾಬಾದ್ ತಂಡವನ್ನು 4 ರನ್ಗಳಿಂದ ಮಣಿಸಿತು.
ನಾಲ್ಕನೇ ಪಂದ್ಯದಲ್ಲೂ ತವರು ತಂಡವೇ ಗೆಲುವು ಸಾಧಿಸಿತು. ರಾಜಸ್ಥಾನದಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಪಂದ್ಯದಲ್ಲಿ ಆತಿಥೇಯ ರಾಜಸ್ಥಾನ ತಂಡ 20 ರನ್ಗಳ ಗೆಲುವು ದಾಖಲಿಸಿತು.
ನಿನ್ನೆ ಅಹಮದಾಬಾದ್ನಲ್ಲಿ ನಡೆದ ಐಪಿಎಲ್ ಐದನೇ ಪಂದ್ಯದಲ್ಲಿ ಆತಿಥೇಯ ಗುಜರಾತ್ ತಂಡ ಮುಂಬೈ ಇಂಡಿಯನ್ಸ್ ತಂಡವನ್ನು 6 ರನ್ಗಳಿಂದ ಮಣಿಸಿ ತವರು ನೆಲದ ಲಾಭ ಪಡೆದುಕೊಂಡಿದೆ.
ಇನ್ನು ಇಂದಿನ ಪಂದ್ಯದಲ್ಲಿ ಆರ್ಸಿಬಿ ತನ್ನ ತವರು ನೆಲದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸುತ್ತಿದೆ. ಹೀಗಾಗಿ ಈ ಹಿಂದಿನ ಐದು ಪಂದ್ಯಗಳ ಫಲಿತಾಂಶದಂತೆ ಇಂದಿನ ಪಂದ್ಯದ ಫಲಿತಾಂಶವೂ ತವರು ತಂಡದ ಪರ ವಾಲುತ್ತಾ ಎಂಬುದನ್ನು ಕಾದುನೋಡಬೇಕಿದೆ.
Published On - 4:35 pm, Mon, 25 March 24