ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿ ಸಂಪನ್ನ: ಏನಿದು ಚಂಪಾ ಷಷ್ಠಿ? ಇದರ ವಿಶೇಷತೆ ತಿಳಿಯಿರಿ
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಠಿ ಉತ್ಸವ ಅದ್ದೂರಿಯಾಗಿ ನಡೆದಿದೆ. ಬ್ರಹ್ಮರಥೋತ್ಸವದಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಂಡು ಸುಬ್ರಹ್ಮಣ್ಯನ ದರ್ಶನ ಪಡೆದರು. ಉಮಾಮಹೇಶ್ವರ ಮತ್ತು ಸುಬ್ರಹ್ಮಣ್ಯ ದೇವರು ಒಂದೇ ಪಲ್ಲಕ್ಕಿಯಲ್ಲಿ ಬಂದು ಭಕ್ತರನ್ನು ಅನುಗ್ರಹಿಸಿದರು. ರಥೋತ್ಸವದಲ್ಲಿ ಭಕ್ತರು ತಮ್ಮ ಹರಕೆಗಳನ್ನು ಸಲ್ಲಿಸಿ ಕೃತಾರ್ಥರಾದರು. ಕ್ಷೇತ್ರದಲ್ಲಿ ಉತ್ತಮ ವ್ಯವಸ್ಥೆ ಕಲ್ಪಿಸಲಾಗಿತ್ತು.
1 / 7
ಅದು ಪ್ರಾಕೃತಿಕ ಸೌಂದರ್ಯದ ನೆಲೆವೀಡು. ಪುರಾಣ ಪ್ರಸಿದ್ದ ಹಿನ್ನೆಲೆಯ ಸ್ವಯಂ ವ್ಯಕ್ತ ಪುಣ್ಯ ಭೂಮಿ. ನಾಗದೋಷ ಪರಿಹಾರಕ್ಕೆ ಜಾಗತಿಕವಾಗಿ ಮನ್ನಣೆ ಗಳಿಸಿದ ರಾಜ್ಯದ ಇತಿಹಾಸ ಪ್ರಸಿದ್ಧ ನಾಗ ಕ್ಷೇತ್ರ. ಇಂತಹ ಪಾವನ ಪುಣ್ಯ ಕ್ಷೇತ್ರದಲ್ಲಿಂದು ಅತ್ಯಂತ ಶ್ರದ್ಧಾ ಭಕ್ತಿಯ ಚಂಪಾಷಷ್ಠಿ ಉತ್ಸವ ನಿನ್ನೆ ಸಂಪನ್ನಗೊಂಡಿದೆ. ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮ ರಥೋತ್ಸವವನ್ನ ಲಕ್ಷಾಂತರ ಭಕ್ತ ಸಮುದಾಯ ಕಣ್ಮುಂಬಿಕೊಂಡಿದ್ದಾರೆ.
2 / 7
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿರುವ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಂಭ್ರಮದ ಚಂಪಾಷಷ್ಠಿ ಆಚರಣೆ ನಡೆದಿದ್ದು, ನಿನ್ನೆ ಬೆಳಿಗ್ಗೆ ಸುಬ್ರಹ್ಮಣ್ಯನ ಬ್ರಹ್ಮರಥೋತ್ಸವ ನಡೆಯುವ ಮೂಲಕ ಚಂಪಾಷಷ್ಠಿ ಸಂಪನ್ನಗೊಡಿದೆ. ಪರುಶುರಾಮ ಸೃಷ್ಟಿಯ ಸಪ್ತ ಮಹಾ ಕ್ಷೇತ್ರಗಳಲ್ಲಿ ಒಂದಾಗಿರುವ ಕುಕ್ಕೆ ಸುಬ್ರಹ್ಮಣ್ಯ ಈ ರಾಜ್ಯದ ಅತ್ಯಂತ ಶ್ರೀಮಂತ ದೇಗುಲ. ಹೀಗಾಗಿಯೇ ಕುಕ್ಕೆಯ ಪವಿತ್ರ ಮಣ್ಣಿನಲ್ಲಿ ನಡೆಯುವ ಚಂಪಾಷಷ್ಠಿ ಉತ್ಸವಕ್ಕೆ ಹೆಚ್ಚಿನ ವಿಶೇಷತೆಯಿದೆ. ಕಾರ್ತಿಕ ಬಹುಳ ದ್ವಾದಶಿಯಿಂದ ಆರಂಭಗೊಂಡು ಮಾರ್ಗಶಿರ ಶುದ್ದ ಪೌರ್ಣಮಿಯವರೆಗೆ ಕುಕ್ಕೆ ಕ್ಷೇತ್ರದಲ್ಲಿ ಅತ್ಯಂತ ಸಂಭ್ರಮ ಉತ್ಸವ ನಡೆಯುತ್ತೆ.
3 / 7
ಮಾರ್ಗಶಿರ ಶುದ್ದ ಷಷ್ಠಿಯನ್ನ ಚಂಪಾಷಷ್ಠಿ ಅಂತಾನೆ ಕರೆಯಲಾಗುತ್ತೆ. ಈ ದಿನ ಸುಬ್ರಹ್ಮಣ್ಯನಿಗೆ ಅತ್ಯಂತ ಪ್ರಿಯವಾದ ದಿನ. ಹೀಗಾಗಿ ಇಂದು ಉಮಾಮಹೇಶ್ವರ ದೇವರು ಮತ್ತು ಸುಬ್ರಹ್ಮಣ್ಯ ದೇವರು ಒಂದೇ ಪಲ್ಲಕ್ಕಿಯಲ್ಲಿ ಬಂದು ಉಮಾಮಹೇಶ್ವರ ದೇವರು ಪಂಚಮಿ ರಥದಲ್ಲಿ ಮತ್ತು ಸುಬ್ರಹ್ಮಣ್ಯ ದೇವರು ಬ್ರಹ್ಮರಥದಲ್ಲಿ ವಿರಾಜಮಾನರಾಗಿದ್ದರು. ನಂತ್ರ ಎರಡು ರಥಗಳನ್ನ ಎಳೆಯೋ ಮೂಲಕ ಕ್ಷೇತ್ರದ ರಥಬೀದಿಯಲ್ಲಿ ಬ್ರಹ್ಮರೋಥೋತ್ಸವ ಅತ್ಯಂತ ಸಂಭ್ರಮದಿಂದ ನಡೆಯಿತು.
4 / 7
ಮೊದಲಿಗೆ ಪಂಚಮಿ ರಥವನ್ನ ಎಳೆದ್ರೆ, ನಂತ್ರ ಬ್ರಹ್ಮರಥವನ್ನ ಎಳೆಯಲಾಗುತ್ತೆ. ಈ ವೇಳೆ ಭಕ್ತಾಧಿಕಾರಿ ತಮ್ಮ ಹರಕೆಯಂತೆ ಕಾಳಮೆಣಸು, ಹಣ ಮತ್ತು ಏಲಕ್ಕಿಯನ್ನ ರಥಕ್ಕೆ ಎಸೆದು ಕೃತಾರ್ಥರಾದ್ರು. ಅಲ್ಲದೇ ಅನೇಕ ಮಂದಿ ರಥವನ್ನ ಎಳೆದು ಧನ್ಯರಾದ್ರು. ಹೀಗಾಗಿ ಕುಕ್ಕೆ ಸುಬ್ರಹ್ಮಣ್ಯನ ಬ್ರಹ್ಮರಥೋತ್ಸವ ಯಾವುದೇ ವಿಘ್ನಗಳಿಲ್ಲದೇ ನಿರ್ವಿಘ್ನವಾಗಿ ನಡಿಯಿತು. ಊರು-ಪರವೂರಿಗಳಿಂದ ಬಂದ ಲಕ್ಷಾಂತರ ಭಕ್ತರು ಸುಬ್ರಹ್ಮಣ್ಯನ ಭವ್ಯ ರಥೋತ್ಸವವನ್ನ ಕಣ್ತುಂಬಿಕೊಂಡು ಧನ್ಯರಾದರು.
5 / 7
ಇನ್ನು ಕುಕ್ಕೆಯ ಜಾತ್ರಾ ಸಂಭ್ರಮಕ್ಕೆ ಅದರದ್ದೇ ಆದ ವಿಶೇಷತೆಯಿದೆ. ಅದ್ರಲ್ಲೂ ಇಲ್ಲಿ ದೇವರನ್ನ ತಲೆಯಲ್ಲಿ ಹೊತ್ತು ಸಾಗುವ ಬದಲು ಪಲ್ಲಕ್ಕಿಯನ್ನ ಕುಳ್ಳಿರಿಸಿ ಹೊತ್ತು ಸಾಗೋದನ್ನ ನೋಡೋದೇ ಪರಮಾನಂದ. ಇಂದು ಬೆಳಿಗ್ಗೆ ನಡೆದ ಬ್ರಹ್ಮರಥೋತ್ಸವವನ್ನ ಕಣ್ತುಂಬಿಕೊಳ್ಳೋಕೆ ಅಂತಾನೆ ಲಕ್ಷಾಂತರ ಭಕ್ತರು ಕ್ಷೇತ್ರಕ್ಕೆ ಆಗಮಿಸಿದ್ದರು. ಹೀಗಾಗಿ ಕ್ಷೇತ್ರದ ರಥಬೀದಿ ಭಕ್ತಗಣದಿಂದ ತುಂಬಿ ತುಳುಕ್ತಾ ಇತ್ತು. ರಥೋತ್ಸವವನ್ನ ಕಣ್ತುಂಬಿಕೊಳ್ಳೋಕೆ ಭಕ್ತರು ಮುಗಿಬಿದಿದ್ದರು.
6 / 7
ಇನ್ನು ನಿನ್ನೆ ರಾತ್ರಿ ರಥಬೀದಿಯಿಂದ ಕಾಶಿಕಟ್ಟೆವರೆಗೂ ಪಂಚಮಿ ರಥವನ್ನು ಎಳೆಯಲಾಗಿದೆ. ಇನ್ನು ಪಟಾಕಿ ಸಂಭ್ರಮ ನೆರೆದಿದ್ದ ಭಕ್ತರಿಗೆ ಪುಳಕ ಉಂಟು ಮಾಡಿತ್ತು. ಇನ್ನು ಈ ಬಾರಿ ಕೂಡ ಎಡೆ ಸ್ನಾನ, ಮಡೆ ಸ್ನಾನಗಳು ನಡೆದವು. ಪೊಲೀಸ್ ಬಂದೋಬಸ್ತ್ ಹಾಗೂ ಜಿಲ್ಲಾಡಳಿತದಿಂದ ಉತ್ತಮ ರೀತಿಯ ವ್ಯವಸ್ಥೆ ಕಂಡುಬಂದಿತ್ತು.
7 / 7
ಒಟ್ಟಾರೆ ರಾಜ್ಯದ ಧಾರ್ಮಿಕ ಶ್ರದ್ದಾ ಭಕ್ತಿಯ ತಾಣವಾದ ಕುಕ್ಕೆಯಲ್ಲಿ ಚಂಪಾಷಷ್ಠಿ ಸಂಭ್ರಮಕ್ಕೆ ತೆರೆಬಿದ್ದಿದೆ. ಆದರೆ ವರ್ಷವಧಿ ಉತ್ಸವ ಮುಂದಿನ ಪೌರ್ಣಮಿ ಪರ್ಯಂತೆ ಕ್ಷೇತ್ರದಲ್ಲಿ ನಡೆಯುತ್ತೆ. ಅಂತಿಮ ದಿನ ಮಹಾ ಸಂಪ್ರೋಕ್ಷಣೆ ನಡೆದು ಕ್ಷೇತ್ರದ ಅದ್ದೂರಿ ಸಂಭ್ರಮಕ್ಕೆ ಅಧಿಕೃತ ತೆರೆಬೀಳಲಿದೆ.