Kylian Mbappe: ರಿಯಲ್ ಮ್ಯಾಡ್ರಿಡ್ಗೆ ಕಿಲಿಯನ್ ಎಂಬಾಪ್ಪೆ ಎಂಟ್ರಿ
Kylian Mbappe: ಕಿಲಿಯನ್ ಎಂಬಾಪ್ಪೆ 2017 ರಲ್ಲಿ ಫ್ರಾನ್ಸ್ನ ಪ್ಯಾರಿಸ್ ಸೇಂಟ್ ಜರ್ಮೈನ್ ಕ್ಲಬ್ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ಈ ಒಪ್ಪಂದವು ಇದೀಗ ಮುಗಿದಿದ್ದು, ಇದರ ಬೆನ್ನಲ್ಲೇ ಕಿಲಿಯನ್ ಎಂಬಾಪ್ಪೆ ಸ್ಪೇನ್ ಲೀಗ್ನತ್ತ ಮುಖ ಮಾಡಿದ್ದಾರೆ. ಅದರಂತೆ ಇನ್ನು ಮುಂದೆ ಫ್ರಾನ್ಸ್ ತಾರೆ ರಿಯಲ್ ಮ್ಯಾಡ್ರಿಡ್ ಕ್ಲಬ್ ಪರ ಲಾ ಲೀಗಾದಲ್ಲಿ ಕಣಕ್ಕಿಳಿಯಲಿದ್ದಾರೆ.
Updated on:Jul 17, 2024 | 8:39 AM

ಫ್ರಾನ್ಸ್ನ ಖ್ಯಾತ ಕಾಲ್ಚೆಂಡು ಚತುರ ಕಿಲಿಯನ್ ಎಂಬಾಪ್ಪೆ (Kylian Mbappe) ರಿಯಲ್ ಮ್ಯಾಡ್ರಿಡ್ ಕ್ಲಬ್ ಪರ ಕಣಕ್ಕಿಳಿಯುವುದು ಖಚಿತವಾಗಿದೆ. ರಿಯಲ್ ಮ್ಯಾಡ್ರಿಡ್ ಜೊತೆಗಿನ ಒಪ್ಪಂದಕ್ಕೆ ಎಂಬಾಪ್ಪೆ ಸಹಿ ಹಾಕಿದ್ದು, ಅದರಂತೆ ಮುಂದಿನ 5 ವರ್ಷಗಳ ಕಾಲ ಸ್ಪೇನ್ನ ಖ್ಯಾತ ಕ್ಲಬ್ ಆಡಲು ಫ್ರಾನ್ಸ್ ತಾರೆ ಆಡಲಿದ್ದಾರೆ.

ಮಂಗಳವಾರ (ಜು.16) ಸ್ಯಾಂಟಿಯಾಗೊ ಬರ್ನಾಬ್ಯೂನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಎಂಬಾಪ್ಪೆಯ ಅವರ ರಿಯಲ್ ಮ್ಯಾಡ್ರಿಡ್ ಜೆರ್ಸಿಯನ್ನು ಸಹ ಅನಾವರಣಗೊಳಿಸಲಾಗಿದೆ. ಅದರಂತೆ ಮುಂಬರುವ ಲಾ ಲೀಗಾ ಫುಟ್ಬಾಲ್ ಲೀಗ್ನಲ್ಲಿ ಕಿಲಿಯನ್ ಎಂಬಾಪ್ಪೆ 9 ನಂಬರ್ ಜೆರ್ಸಿಯಲ್ಲಿ ರಿಯಲ್ ಮ್ಯಾಡ್ರಿಡ್ ಪರ ಕಣಕ್ಕಿಳಿಯಲಿದ್ದಾರೆ. ಈ ಮೂಲಕ ಸ್ಪೇನ್ ಲೀಗ್ನಲ್ಲಿ ಹೊಸ ಸೀಸನ್ ಆರಂಭಿಸಲು 25 ವರ್ಷದ ಯುವ ತಾರೆ ಸಜ್ಜಾಗಿದ್ದಾರೆ.

ಇದಕ್ಕೂ ಮುನ್ನ ಕಿಲಿಯನ್ ಎಂಬಾಪ್ಪೆ ಫ್ರಾನ್ಸ್ನ ಪ್ಯಾರಿಸ್ ಸೇಂಟ್ ಜರ್ಮೈನ್ (PSG) ಕ್ಲಬ್ ಪರ ಆಡುತ್ತಿದ್ದರು. ಈ ಒಪ್ಪಂದವು ಜೂನ್ ತಿಂಗಳಲ್ಲಿ ಕೊನೆಗೊಂಡಿದ್ದು, ಇದರ ಬೆನ್ನಲ್ಲೇ ಎಂಬಾಪ್ಪೆ ರಿಯಲ್ ಮ್ಯಾಡ್ರಿಡ್ನತ್ತ ಮುಖ ಮಾಡಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಇದೀಗ ಎಂಬಾಪ್ಪೆ ರಿಯಲ್ ಮ್ಯಾಡ್ರಿಡ್ಗೆ ಎಂಟ್ರಿ ಕೊಡುವುದರೊಂದಿಗೆ ಈ ಸುದ್ದಿ ನಿಜವಾಗಿದೆ.

ಏಳು ವರ್ಷಗಳ ಹಿಂದೆ ಪ್ಯಾರಿಸ್ ಸೇಂಟ್ ಜರ್ಮೈನ್ ಕ್ಲಬ್ ಸೇರಿಕೊಂಡಿದ್ದ ಕಿಲಿಯನ್ ಎಂಬಾಪ್ಪೆ ಪಿಎಸ್ಜಿ ಪರ ಒಟ್ಟು 308 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಬರೋಬ್ಬರಿ 256 ಗೋಲುಗಳಿಸಿದ್ದಾರೆ. ಅದರಲ್ಲೂ ಕಳೆದ ಸೀಸನ್ನಲ್ಲಿ ಪ್ಯಾರಿಸ್ ಸೇಂಟ್ ಜರ್ಮೈನ್ (PSG) ಎಂಬಾಪ್ಪೆ 45 ಗೋಲು ಬಾರಿಸಿ ಮಿಂಚಿದ್ದರು.

ಇದಾಗ್ಯೂ ಪ್ಯಾರಿಸ್ ಸೇಂಟ್ ಜರ್ಮೈನ್ ಕ್ಲಬ್ ಪರ ತಮ್ಮ ಒಪ್ಪಂದವನ್ನು ಮುಂದುವರೆಸಲು ಮುಂದಾಗಲಿಲ್ಲ. ಅಲ್ಲದೆ ಲೀಗ್ 1 (ಫ್ರಾನ್ಸ್ ಲೀಗ್) ತೊರೆಯುವ ಮೂಲಕ ಇದೀಗ ಕಿಲಿಯನ್ ಎಂಬಾಪ್ಪೆ ಲಾ ಲೀಗಾ (ಸ್ಪೇನ್ ಲೀಗ್) ಅಂಗಳದಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಅದರಂತೆ ಆಗಸ್ಟ್ 1 ರಂದು ನಡೆಯಲಿರುವ ಮಿಲಾನ್ ವಿರುದ್ಧ ಅಥವಾ ಆಗಸ್ಟ್ 4 ರಂದು ನಡೆಯಲಿರುವ ಬಾರ್ಸಿಲೋನಾ ವಿರುದ್ಧದ ಪಂದ್ಯದ ಮೂಲಕ ಕಿಲಿಯನ್ ಎಂಬಾಪ್ಪೆ ರಿಯಲ್ ಮ್ಯಾಡ್ರಿಡ್ ಪರ ಕಣಕ್ಕಿಳಿಯಲಿದ್ದಾರೆ.
Published On - 8:38 am, Wed, 17 July 24




