LIC New Jeevan Shanti Plan 858: ಎಲ್ಐಸಿ ಜೀವನ್ ಶಾಂತಿ ಪಾಲಿಸಿ; ತಿಂಗಳಿಗೆ ಒಂದು ಲಕ್ಷ ರೂ. ಪಿಂಚಣಿ ಪಡೆಯುವುದು ಹೇಗೆ?
ಭಾರತೀಯ ಜೀವ ವಿಮಾ ನಿಗಮವು ‘ಎಲ್ಐಸಿ ನ್ಯೂ ಜೀವನ್ ಶಾಂತಿ ಪಾಲಿಸಿ’ಯ ವರ್ಷಾಶನ (Annuity) ದರ ಮತ್ತು ಪಾಲಿಸಿಯನ್ನು ಪರಿಷ್ಕರಿಸಿದ್ದು, 2023ರ ಜನವರಿ 5ರಿಂದ ಜಾರಿಗೆ ಬಂದಿದೆ. ಈ ಯೋಜನೆಯಡಿ 1 ಲಕ್ಷ ರೂ. ಮಾಸಿಕ ಪಿಂಚಣಿ ಪಡೆಯುವುದು ಹೇಗೆಂಬ ಲೆಕ್ಕಾಚಾರ ಇಲ್ಲಿದೆ.
Updated on: Jan 18, 2023 | 6:55 PM

‘ನ್ಯೂ ಜೀವನ್ ಶಾಂತಿ ಪಾಲಿಸಿ’ಯ ವರ್ಷಾಶನ (Annuity) ದರ ಮತ್ತು ಪಾಲಿಸಿಯನ್ನು ಎಲ್ಐಸಿ ಪರಿಷ್ಕರಣೆ ಮಾಡಿದ್ದು, 2023ರ ಜನವರಿ 5ರಿಂದ ಅಸ್ತಿತ್ವಕ್ಕೆ ಬಂದಿದೆ. ಪರ್ಚೇಸ್ ಪ್ರೈಸ್ ಮೇಲಿನ ಭತ್ಯೆಯನ್ನೂ ಹೆಚ್ಚಿಸಲಾಗಿದೆ. 1000 ರೂ. ಪರ್ಚೇಸ್ ದರಕ್ಕೆ 3 ರೂ.ನಿಂದ 9.75 ರೂ.ವರೆಗೆ ಭತ್ಯೆ ನೀಡಲಾಗುತ್ತಿದೆ.

‘ಎಲ್ಐಸಿ ನ್ಯೂ ಜೀವನ್ ಶಾಂತಿ ಪಾಲಿಸಿ’ ಏಕ ಪ್ರೀಮಿಯಂ ಆಗಿದ್ದು, ಏಕ ಅಥವಾ ಜಂಟಿ ಆ್ಯನುಯಿಟಿ ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ.

ಸ್ವಯಂ ಉದ್ಯೋಗಿಗಳಿಗೆ ಮತ್ತು ವೃತ್ತಿಪರರಿಗೆ ನಿವೃತ್ತಿ ಜೀವನಕ್ಕಾಗಿ ಒಂದು ಬಾರಿಯ ಹೂಡಿಕೆ ಮಾಡಲು ಇದೊಂದು ಉತ್ತಮ ಯೋಜನೆಯಾಗಿದೆ. ಡಿಫರ್ಡ್ ಆ್ಯನುಯಿಟಿ ಯೋಜನೆಯಾಗಿರುವುದರಿಂದ ಯುವ ವೃತ್ತಿಪರರು ಆರಂಭಿಕ ಹಂತದಿಂದಲೇ ತಮ್ಮ ನಿವೃತ್ತಿಗಾಗಿ ಈ ಪಾಲಿಸಿಯಲ್ಲಿ ಹೂಡಿಕೆ ಮಾಡಬಹುದು ಎಂದು ಎಲ್ಐಸಿ ಹೇಳಿದೆ.

1,03,30,578 ರೂ. (1,85,950 ರೂ. ಜಿಎಸ್ಟಿ) ಪ್ರೀಮಿಯಂ ಖರೀದಿಸಿದರೆ 12 ವರ್ಷಗಳ ಡಿಫರ್ಡ್ ಆ್ಯನುಯಿಟಿಯೊಂದಿಗೆ ತಿಂಗಳಿಗೆ 1.08 ಲಕ್ಷ ರೂ. ಪಿಂಚಣಿ ಪಡೆಯಬಹುದಾಗಿದೆ. ಕನಿಷ್ಠ 30 ವರ್ಷ ವಯಸ್ಸಿನ ಆಧಾರದಲ್ಲಿ ಈ ಲೆಕ್ಕಾಚಾರ ಹಾಕಲಾಗಿದೆ.

ತಿಂಗಳಿಗೆ 1,08,058 ರೂ, ತ್ರೈಮಾಸಿಕ ಅವಧಿಗಾದರೆ 3,27,550 ರೂ, ಅರ್ಧ ವಾರ್ಷಿಕ ಅವಧಿಗಾದರೆ 6,61,854 ರೂ, ವರ್ಷಕ್ಕಾದರೆ 13,50,723 ರೂ. ಪಿಂಚಣಿ ಪಡೆಯಬಹುದಾಗಿದೆ.

ತಿಂಗಳಿಗೆ ಶೇ 12.33, ತ್ರೈಮಾಸಿಕ ಅವಧಿಗಾದರೆ ಶೇ 12.46, ಅರ್ಧ ವಾರ್ಷಿಕ ಅವಧಿಗಾದರೆ ಶೇ 12.59 ಮತ್ತು ವರ್ಷಕ್ಕೆ ಶೇ 12.84ರ ಬಡ್ಡಿ ‘ಎಲ್ಐಸಿ ನ್ಯೂ ಜೀವನ್ ಶಾಂತಿ ಪಾಲಿಸಿ’ಯಲ್ಲಿ ದೊರೆಯುತ್ತದೆ.

ಈ ಪಾಲಿಸಿಯ ಕನಿಷ್ಠ ಖರೀದಿ ದರ 1,50,000 ರೂ. ಆಗಿದೆ. ಗರಿಷ್ಠ ಖರೀದಿ ದರ ನಿಗದಿಪಡಿಸಿಲ್ಲ. ಈ ಪಾಲಿಸಿ ಹೊಂದಲು ಕನಿಷ್ಠ 30 ವರ್ಷ ವಯಸ್ಸಾಗಿರಬೇಕು. 79 ವರ್ಷ ವಯಸ್ಸಿನ ವರೆಗೆ ಪಾಲಿಸಿ ಹೊಂದಲು ಅವಕಾಶವಿದೆ.



















