Updated on:Aug 20, 2024 | 10:55 AM
ಕೋಟೆನಾಡು ಚಿತ್ರದುರ್ಗದಲ್ಲಿ ಕಳೆದೊಂದು ತಿಂಗಳಿಂದ ಉತ್ತಮ ಮಳೆಯಾಗುತ್ತಿದೆ. ಪರಿಣಾಮ ಜೋಗಿಮಟ್ಟಿ ವನ್ಯಧಾಮದ ಸೊಬಗು ಮಲೆನಾಡನ್ನೇ ನಾಚಿಸುವಂತಿದೆ. ಬಯಲು ಸೀಮೆಯ ಊಟಿ ಎಂದೇ ಖ್ಯಾತಿಯ ಜೋಗಿಮಟ್ಟಿ ಪ್ರವಾಸಿಗರನ್ನು ಬರಸೆಳೆಯುತ್ತಿದ್ದು, ಕಣ್ಮನಕ್ಕೆ ಆನಂದ ನೀಡುತ್ತಿದೆ.
ಚಿತ್ರದುರ್ಗದಿಂದ ಜೋಗಿಮಟ್ಟಿ ವೀವ್ ಪಾಯಿಂಟ್ ಕೇವಲ 15 ಕಿಮೀ ದೂರದಲ್ಲಿದೆ. ಹತ್ತು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹರಡಿಕೊಂಡಿರುವ ಜೋಗಿಮಟ್ಟಿ ಸಮುದ್ರಮಟ್ಟದಿಂದ 1323 ಮೀಟರ್ ಎತ್ತರ ಪ್ರದೇಶದಲ್ಲಿದೆ. ಏಷ್ಯಾದಲ್ಲೇ ಅತಿ ಹೆಚ್ಚು ಗಾಳಿ ಬೀಸುವ ಪ್ರದೇಶದಲ್ಲೊಂದಾಗಿದೆ. ಜೋಗಿಮಟ್ಟಿ ಗಿರಿಧಾಮ ವ್ಯಾಪ್ತಿಯಲ್ಲಿ ನೂರಾರು ವಿಂಡ್ ಫ್ಯಾನ್ ಅಳವಡಿಸಲಾಗಿದೆ.
ಕಳೆದ ಎರಡು ವರ್ಷದಲ್ಲಿ ಮಳೆ ಇಲ್ಲದ ಕಾರಣ ಜೋಗಿಮಟ್ಟಿಯಲ್ಲಿನ ಗಿಡ ಮರಗಳು ಒಣಗಿ ಕಪ್ಪುಗಟ್ಟಿದ್ದವು. ಕಳೆದ ಒಂದು ತಿಂಗಳಿಂದ ಉತ್ತಮ ಮಳೆ ಸುರಿದಿದ್ದು ಜೋಗಿಮಟ್ಟಿ ಮರುಜೀವ ಪಡೆದಿದೆ.
ಹಸಿರೊದಿಕೆ ಹೊದ್ದು ನವವಧುವಿನಂತೆ ಸಿಂಗಾರಗೊಂಡಿದೆ. ಸದಾ ಮೋಡ, ಮಂಜು ಆವರಿಸಿಕೊಂಡಿದ್ದು ತುಂತುರು ಮಳೆ ಸುರಿಯುತ್ತಿರುತ್ತದೆ. ತಣ್ಣನೆ ಗಾಳಿ, ಇಬ್ಬನಿ, ತುಂತುರು ಮಳೆಗೆ ಮೈಯೊಡ್ಡುವ ಪರಿಸರ ಪ್ರಿಯರು ಸಖತ್ ಏಂಜಾಯ್ ಮಾಡುತ್ತಿದ್ದಾರೆ.
ಜೋಗಿಮಟ್ಟಿ ವನ್ಯಧಾಮ ವ್ಯಾಪ್ತಿಯಲ್ಲಿ ವಿವಿಧ ಟ್ರಕ್ಕಿಂಗ್ ತಾಣಗಳಿವೆ. ಸಣ್ಣ ಸಣ್ಣ ಜಲಪಾತಗಳು, ದೋಣಿ, ಪುಷ್ಕರಣಿಗಳಿವೆ. ಚಿರತೆ, ಕರಡಿ ಮತ್ತು ಅಪಾರ ಪ್ರಮಾಣದ ನವಿಲುಗಳಿವೆ. ಔಷಧೀಯ ಸಸ್ಯಗಳು ಈ ಅರಣ್ಯ ವ್ಯಾಪ್ತಿಯಲ್ಲಿವೆ. ಹೀಗಾಗಿ, ಈ ಅರಣ್ಯದಲ್ಲಿ ವಿಹರಿಸುವುದು ಆಹ್ಲಾದಕರ ಮಾತ್ರವಲ್ಲ ಆರೋಗ್ಯಕ್ಕೆ ಅನುಕೂಲಕರವಾಗಿದೆ.
ವೀಕೆಂಡ್ ಮತ್ತು ರಜೆ ದಿನಗಳಲ್ಲಂತೂ ಪರಿಸರ ಪ್ರಿಯರು ಜೋಗಿಮಟ್ಟಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಹೀಗಾಗಿ ಜೋಗಿಮಟ್ಟಿ ರಸ್ತೆಗಳನ್ನು ಅಭಿವೃದ್ಧಿ ಪಡಿಸಬೇಕು, ಮೂಲ ಸೌಕರ್ಯಗಳನ್ನು ಕಲ್ಪಿಸಿ ಪ್ರಮುಖ ಪ್ರವಾಸಿ ತಾಣವನ್ನಾಗಿಸಬೇಕೆಂಬುದು ಸ್ಥಳೀಯರು ಆಗ್ರಹಿಸಿದ್ದಾರೆ.
ಒಟ್ಟಾರೆಯಾಗಿ ಭೀಕರ ಬರಗಾಲದಿಂದಾಗಿ ಸೊರಗಿ ಹೋಗಿದ್ದ ಕೋಟೆನಾಡು ಚಿತ್ರದುರ್ಗ ನಗರ ಬಳಿಯ ಜೋಗಿಮಟ್ಟಿ ಉತ್ತಮ ಮಳೆಯಿಂದಾಗಿ ಮರುಜೀವ ಪಡೆದುಕೊಂಡಿದೆ. ಬಯಲುಸೀಮೆಯ ಊಟಿ ಖ್ಯಾತಿಯ ಜೋಗಿಮಟ್ಟಿ ಮತ್ತೆ ಗತವೈಭವಕ್ಕೆ ಮರಳಿದ್ದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.
Published On - 10:52 am, Tue, 20 August 24