- Kannada News Photo gallery Mahindra XUV400 EV launched in India at Rs 15.99 lakh, check powertrain, range, and charging
Mahindra XUV400 EV: ಆಕರ್ಷಕ ಬೆಲೆಯಲ್ಲಿ ಮಹೀಂದ್ರಾ ಎಕ್ಸ್‌ಯುವಿ400 ಎಲೆಕ್ಟ್ರಿಕ್ ಬಿಡುಗಡೆ
ಮಹೀಂದ್ರಾ ತನ್ನ ಬಹುನೀರಿಕ್ಷಿತ ಎಕ್ಸ್‌ಯುವಿ400 ಎಲೆಕ್ಟ್ರಿಕ್ ಆವೃತ್ತಿಯನ್ನ ಬಿಡುಗಡೆ ಮಾಡಿದ್ದು, ಹೊಸ ಕಾರು ಪ್ರಮುಖ ವೆರಿಯೆಂಟ್ ಗಳೊಂದಿಗೆ ಆಕರ್ಷಕ ಬೆಲೆಯಲ್ಲಿ ಮಾರುಕಟ್ಟೆ ಪ್ರವೇಶಿಸಿದೆ. ಹೊಸ ಕಾರು ಪ್ರತಿಸ್ಪರ್ಧಿ ಟಾಟಾ ನೆಕ್ಸಾನ್ ಇವಿ ಕಾರಿಗಿಂತಲೂ ಕಡಿಮೆ ಬೆಲೆಯಲ್ಲಿ ಬಿಡುಗಡೆಗೊಂಡಿದ್ದು, ಹೊಸ ಕಾರಿನ ಮತ್ತಷ್ಟು ಮಾಹಿತಿ ಇಲ್ಲಿದೆ.
Updated on:Jan 16, 2023 | 8:48 PM

ಮಹೀಂದ್ರಾ ಹೊಸ ಎಕ್ಸ್‌ಯುವಿ400 ಎಲೆಕ್ಟ್ರಿಕ್ ಕಾರು ಮಾದರಿಯು ಇಸಿ 3.3 ಕೆವಿ, ಇಸಿ 7.2 ಕೆವಿ ಮತ್ತು ಇಎಲ್ 7.2 ಕೆವಿ ಎನ್ನುವ ಮೂರು ವೆರಿಯೆಂಟ್ ಹೊಂದಿದ್ದು, ದೆಹಲಿ ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 15.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು 18.99 ಲಕ್ಷ ಬೆಲೆ ಹೊಂದಿದೆ.

ಹೊಸ ಎಕ್ಸ್‌ಯುವಿ400 ಎಲೆಕ್ಟ್ರಿಕ್ ಕಾರಿನ ಮೊದಲ ಐದು ಸಾವಿರ ಯುನಿಟ್ ಗಳಿಗೆ ಮಾತ್ರ ರೂ. 15.99 ಲಕ್ಷ ಆರಂಭಿಕ ಬೆಲೆ ಅನ್ವಯಿಸಲಿದ್ದು, 5 ಸಾವಿರ ಯುನಿಟ್ ನಂತರ ಬುಕಿಂಗ್ ಸಲ್ಲಿಸುವ ಗ್ರಾಹಕರಿಗೆ ದರ ಹೆಚ್ಚಿಸುವುದಾಗಿ ಮಹೀಂದ್ರಾ ಕಂಪನಿಯು ಹೇಳಿಕೊಂಡಿದೆ.

ಭಾರತದಲ್ಲಿ ಹೊಸ ಕಾರು ಖರೀದಿಗಾಗಿ ಇದೇ ತಿಂಗಳು ಜನವರಿ 26ರಿಂದ ಅಧಿಕೃತ ಬುಕಿಂಗ್ ಆರಂಭಿಸಲಾಗುತ್ತಿದ್ದು, ಹೊಸ ಕಾರಿನ ವಿತರಣೆಯನ್ನ ಮುಂಬರುವ ಮಾರ್ಚ್ ವೇಳೆಗೆ ಆರಂಭಿಸುವುದಾಗಿ ಕಂಪನಿಯು ಭರವಸೆ ನೀಡಿದೆ.

ಎಕ್ಸ್‌ಯುವಿ400 ಎಲೆಕ್ಟ್ರಿಕ್ ಕಾರಿನಲ್ಲಿ ಮಹೀಂದ್ರಾ ಕಂಪನಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 34.5 ಕೆವಿಹೆಚ್ ಮತ್ತು 39.4 ಕೆವಿಹೆಚ್ ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ನೀಡುತ್ತಿದ್ದು, ಇದರಲ್ಲಿ 39.4 ಕೆವಿಹೆಚ್ ಬ್ಯಾಟರಿ ಪ್ಯಾಕ್ ಹೊಂದಿರುವ ಮಾದರಿಯು ಪ್ರತಿ ಚಾರ್ಜ್ ಗೆ ಗರಿಷ್ಠ 456 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಫ್ರಂಟ್ ಆಕ್ಸೆಲ್ ಮೌಂಟೆಡ್ ಎಲೆಕ್ಟ್ರಿಕ್ ಮೋಟಾರ್ ಹೊಂದಿರುವ ಹೊಸ ಕಾರಿನಲ್ಲಿ ಫನ್, ಫಾಸ್ಟ್ ಮತ್ತು ಫಿಯರ್ ಲೆಸ್ ಎನ್ನುವ ಮೂರು ಡ್ರೈವ್ ಮೋಡ್ ನೀಡಲಾಗಿದ್ದು, ಇದು 150 ಹಾರ್ಸ್ ಪವರ್ ಮತ್ತು 310 ಎನ್ಎಂ ಟಾರ್ಕ್ ಉತ್ಪಾದನೆ ಮೂಲಕ ಅತ್ಯುತ್ತಮ ಪರ್ಫಾಮೆನ್ಸ್ ಹಿಂದಿರುಗಿಸುತ್ತದೆ.

ಹೊಸ ಕಾರಿನಲ್ಲಿ ರೀಜನರೇಟಿವ್ ಬ್ರೇಕಿಂಗ್ ಸಿಸ್ಟಂ ನೀಡಲಾಗಿದ್ದು, 34.5 ಕೆವಿಹೆಚ್ ಬ್ಯಾಟರಿ ಪ್ಯಾಕ್ ಹೊಂದಿರುವ ಮಾದರಿಯು ಪ್ರತಿ ಚಾರ್ಜ್ ಗೆ 375 ಕಿ.ಮೀ ಮೈಲೇಜ್ ನೀಡಿದರೆ 39.4 ಕೆವಿಹೆಚ್ ಬ್ಯಾಟರಿ ಪ್ಯಾಕ್ ಹೊಂದಿರುವ ಮಾದರಿಯು ಪ್ರತಿ ಚಾರ್ಜ್ ಗೆ 456 ಕಿ.ಮೀ ಮೈಲೇಜ್ ನೀಡುತ್ತದೆ.

ಅತ್ಯುತ್ತಮ ಮೈಲೇಜ್ ಜೊತೆಗೆ ಪರ್ಫಾಮೆನ್ಸ್ ನಲ್ಲೂ ಗಮನಸೆಳೆಯುವ ಹೊಸ ಕಾರು ಕೇವಲ 8.3 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗ ಪಡೆದುಕೊಳ್ಳಲಿದ್ದು, ಇದು ಪ್ರತಿ ಗಂಟೆಗೆ 150 ಕಿ.ಮೀ ಟಾಪ್ ಸ್ಪೀಡ್ ಪಡೆದುಕೊಂಡಿದೆ.

ಚಾರ್ಜಿಂಗ್ ಸೌಲಭ್ಯಕ್ಕಾಗಿ ಹೊಸ ಕಾರಿನಲ್ಲಿ 3.3 ಕೆವಿ ಮತ್ತು 7.2 ಕೆವಿ ಸ್ಟ್ಯಾಂಡರ್ಡ್ ಚಾರ್ಜಿಂಗ್ ಸೌಲಭ್ಯ ನೀಡಲಾಗಿದ್ದು, 3.3 ಕೆವಿ ಚಾರ್ಜರ್ ಮೂಲಕ ಚಾರ್ಜ್ ಮಾಡಿದ್ದಲ್ಲಿ 13 ಗಂಟೆಗಳು ಮತ್ತು 7.2 ಕೆವಿ ಚಾರ್ಜರ್ ಮೂಲಕ ಚಾರ್ಜ್ ಮಾಡಿದ್ದಲ್ಲಿ 6 ಗಂಟೆ 30 ನಿಮಿಷ ಕಾಲ ಸಮಯಾವಕಾಶ ತೆಗೆದುಕೊಳ್ಳುತ್ತದೆ.

50 ಕೆವಿ ಫಾಸ್ಟ್ ಚಾರ್ಜರ್ ಸೌಲಭ್ಯದ ಮೂಲಕ ಚಾರ್ಜ್ ಮಾಡಿದ್ದಲ್ಲಿ ಕೇವಲ 50 ನಿಮಿಷಗಳಲ್ಲಿ ಸೊನ್ನೆಯಿಂದ ಶೇ. 80 ರಷ್ಟು ಚಾರ್ಜ್ ಮಾಡಬಹುದಾಗಿದ್ದು, ಐಪಿ67 ರೇಟಿಂಗ್ ಹೊಂದಿರುವ ಬ್ಯಾಟರಿ ಪ್ಯಾಕ್ ಗರಿಷ್ಠ ಸುರಕ್ಷತೆ ಹೊಂದಿದೆ.

ಹೊಸ ಕಾರಿನಲ್ಲಿ ಆ್ಯಂಡ್ರಿನೊಎಕ್ಸ್ ಸಾಫ್ಟ್ ವೇರ್ ಪ್ರೇರಿತ 7 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್ ಮೆಂಟ್ ಸಿಸ್ಟಂ, ಸಿಂಗಲ್ ಪೇನ್ ಸನ್ ರೂಫ್ ಸೇರಿದಂತೆ ಸುರಕ್ಷತೆಗಾಗಿ 6 ಏರ್ ಬ್ಯಾಗ್ ಗಳು, ಆಲ್ ವ್ಹೀಲ್ ಡಿಸ್ಕ್ ಬ್ರೇಕ್ ಸೇರಿದಂತೆ ಹಲವಾರು ಸುರಕ್ಷಾ ಸೌಲಭ್ಯಗಳಿವೆ.
Published On - 8:21 pm, Mon, 16 January 23




