
ಗಲಭೆ ನಡೆದಿದ್ದ ಜಾಗಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ, ಸುಟ್ಟುಹೋಗಿರುವ ಅಂಗಡಿಗಳ ಬಳಿ ಪರಿಶೀಲಿಸಿದರು. ನಂತರ ಅಂಗಡಿ ಮಾಲೀಕರ ಜೊತೆ ಚರ್ಚಿಸಿ ಮಾಹಿತಿ ಪಡೆದರು. ವಿವಿಧ ಕಡೆ ಹಾನಿಯಾಗಿರುವುದನ್ನು, ವಾಹನಗಳನ್ನು ಸುಟ್ಟುಹೋಗಿರುವುದನ್ನು ಪರಿಶೀಲಿಸಿದರು. ಬಳಿಕ ಪರಿಹಾರದ ಮೊತ್ತವನ್ನು ವಿತರಣೆ ಮಾಡಿದರು.

ಆಸ್ತಿಪಾಸ್ತಿ ಕಳೆದುಕೊಂಡವರಿಗೆ ತಲಾ 25 ಸಾವಿರ ರೂಪಾಯಿಯಿಂದ 2 ಲಕ್ಷ ರೂಪಾಯಿ ವರೆಗೂ ಪರಿಹಾರ ವಿತರಣೆ ಮಾಡಿದರು. ನಷ್ಟ ಆಧರಿಸಿ ಪರಿಹಾರ ವಿತರಣೆ ಮಾಡಿದರು. ಮಾಜಿ ಶಾಸಕ ಸುರೇಶ್ ಗೌಡರ ಮನೆಗೆ ಕರೆಸಿ ಪರಿಹಾರ ವಿತರಣೆ ಮಾಡಿದರು. ಇದೇ ವೇಳೆ ಕಷ್ಟ ಹೇಳಿಕೊಂಡು ಬಂದವರಿಗೂ ಹೆಚ್ಡಿಕೆ ಆರ್ಥಿಕ ನೆರವು ನೀಡಿದರು.

ನಾಗಮಂಗಲ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಗಲಾಟೆಯಲ್ಲಿ ಹಾನಿಯಾದ ಅಂಗಡಿ ಮಾಲೀಕರಿಗೆ ಪರಿಹಾರ ನೀಡುತ್ತಿದ್ದೇನೆ. ವೈಯಕ್ತಿಕವಾಗಿ ಆರ್ಥಿಕ ನೆರವು ನೀಡುತ್ತೇನೆ ಎಂದಿದ್ದಾರೆ. ಅಲ್ಲದೇ, ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಮಧ್ಯೆ, ಬಂಧನಕೊಳಗಾದವರ ಕುಟುಂಬಸ್ಥರು ಕೇಂದ್ರ ಸಚಿವರನ್ನು ಭೇಟಿ ಮಾಡಿ ಅಳಲು ತೋಡಿಕೊಂಡರು. ಪೊಲೀಸರು ಅಮಾಯಕರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ವಿಡಿಯೋದಲ್ಲಿ ಇಲ್ಲ ಅಂದರೆ ವಾಪಸ್ ಕಳುಹುಸುತ್ತೇವೆ ಎಂದಿದ್ದರು. ಈಗ ಜೈಲಿಗೆ ಕಳುಹಿಸಿ ಸಮಸ್ಯೆಗೆ ಸಿಲುಕಿಸಿದ್ದಾರೆ ಎಂದು ಮಹಿಳೆಯರು ಅಹವಾಲು ಸಲ್ಲಿಸಿದರು.

ಘಟನಾ ಸ್ಥಣದಲ್ಲಿ ಪರಿಶೀಲನೆ ನಡೆಸಿದ ನಂತರ ಮಾತನಾಡಿದ್ದ ಕುಮಾರಸ್ವಾಮಿ, ವೈಯಕ್ತಿಕವಾಗಿ ಆರ್ಥಿಕ ನೆರವು ನೀಡುತ್ತೇನೆ. ಎರಡು ಧರ್ಮದವರಿಗೂ ಸಮಾನವಾಗಿ ಪರಿಹಾರ ಕೊಡುತ್ತೇನೆ ಎಂದಿದ್ದರು. ಇದಾದ ಕೆಲವೇ ಹೊತ್ತಿನಲ್ಲಿ ಪರಿಹಾರದ ಮೊತ್ತ ವಿತರಣೆ ಮಾಡಿದ್ದಾರೆ.