- Kannada News Photo gallery Kundapura Maranakatte Temple Fair: Sevantige Flower's Sacred Role and Future
ಈ ಹೂವು ಇಲ್ಲದೆ ಜಾತ್ರೆಯೇ ಇಲ್ಲ: ಮಾರಣಕಟ್ಟೆ ಬ್ರಹ್ಮಲಿಂಗೇಶ್ವರನಿಗೆ ಈ ಹೂ ಸಮರ್ಪಣೆ ಮಾಡಿದ್ರೆ ಕಷ್ಟ ದೂರ
ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ಜಾತ್ರೆಯಲ್ಲಿ ಸೇವಂತಿಗೆ ಹೂವಿಗೆ ವಿಶೇಷ ಸ್ಥಾನ. ಬ್ರಹ್ಮಲಿಂಗೇಶ್ವರನಿಗೆ ಅತ್ಯಂತ ಪ್ರಿಯವಾದ ಹೂವೆಂದು ನಂಬಲಾಗಿದ್ದು, ಭಕ್ತರು ಹರಕೆಯಾಗಿ ಸಮರ್ಪಿಸುತ್ತಾರೆ. ಹೆಮ್ಮಾಡಿ ಭಾಗದಲ್ಲಿ ಭತ್ತದ ಕಟಾವಿನ ನಂತರ ಸೇವಂತಿಗೆ ಕೃಷಿ ನಡೆಯುತ್ತದೆ. ಆದರೆ, ಹವಾಮಾನ ವೈಪರೀತ್ಯ ಮತ್ತು ಕಾರ್ಮಿಕರ ಕೊರತೆಯಿಂದ ರೈತರು ನಷ್ಟ ಅನುಭವಿಸಿ, ಕೃಷಿಯಿಂದ ವಿಮುಖರಾಗುತ್ತಿದ್ದಾರೆ.
Updated on: Jan 12, 2026 | 3:16 PM

ಕುಂದಾಪುರ ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ಹಾಗೂ ಕೆಂಡ ಮಹೋತ್ಸವ ನಡೆಯಲಿದೆ. ಈ ಕ್ಷೇತ್ರದ ಜಾತ್ರೆಯ ಸಮಯದಲ್ಲಿ ಈ ಹೂವು ಇರಲೇಬೇಕು.ಬ್ರಹ್ಮಲಿಂಗೇಶ್ವರನಿಗೆ ಸೇವಂತಿಗೆ ಹೂ ಸಮರ್ಪಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ.

ಹಳದಿ ಬಣ್ಣದ, ಕಣ್ಮನ ಸೆಳೆಯುವ ಸುವಾಸನೆಯ ಸೇವಂತಿಗೆ ಬ್ರಹ್ಮಲಿಂಗೇಶ್ವರನ ಜಾತ್ರೆ ಬೇಕೇಬೇಕು. ತಲೆ ಮೇಲೆ ಹಣ್ಣು–ಕಾಯಿ ಹಾಗೂ ಹರಕೆ ಹೊತ್ತುಸಾಗುವ ಭಕ್ತರ ಬುಟ್ಟಿಯಲ್ಲಿ ಸೇವಂತಿಗೆಗೆ ವಿಶೇಷ ಸ್ಥಾನವಿದೆ. ಬ್ರಹ್ಮಲಿಂಗೇಶ್ವರನಿಗೆ ಅತ್ಯಂತ ಪ್ರಿಯವಾದ ಹೂ ಎನ್ನಲಾಗುವ ಸೇವಂತಿಗೆ ಇಷ್ಟಾರ್ಥಗಳ ಈಡೇರಿಕೆಗೆ ಭಕ್ತರಿಂದ ಹರಕೆಯಾಗಿ ಸಮರ್ಪಣೆ ಆಗುತ್ತದೆ.

ಮಾರಣಕಟ್ಟೆ ಜಾತ್ರೆಯಂದು ಪ್ರತಿ ವರ್ಷ ಇಲ್ಲಿನ ಈ ಸೇವಂತಿಯನ್ನು ತಮ್ಮ ತೋಟದಲ್ಲಿ ಬೆಳೆಯುತ್ತಾರೆ. ಕರಾವಳಿ ಭಾಗದಲ್ಲಿ ಎರಡು ಕಡೆ ಮಾತ್ರ ದೇವರ ಜಾತ್ರೆಗೆ ಹಣ್ಣು ಹಾಗೂ ಹೂವಿನ ಕೃಷಿ ಮಾಡುವುದು, ಒಂದು ದಕ್ಷಿಣ ಕನ್ನಡ ಪೊಳಲಿ ಶ್ರೀ ರಾಜರಾಜೇಶ್ವರಿ ಕಲ್ಲಂಗಡಿಯನ್ನು ಹಾಗೂ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಸೇವಂತಿಗೆ ಹೂ.

ಕುಂದಾಪುರ ತಾಲ್ಲೂಕಿನ ಹೆಮ್ಮಾಡಿ, ಕಟ್ಟು, ಭಟ್ರ ಬೆಟ್ಟು, ಹೊಸ್ಕಳಿ, ಹರೆಗೋಡು, ಸುಳ್ಸೆ, ಗುಡ್ಡೆಮನೆ, ದೇವಸ್ಥಾನ ಬೆಟ್ಟು ಸೇರಿದಂತೆ ಹಲವು ಗ್ರಾಮಗಳಲ್ಲಿ ಹೆಮ್ಮಾಡಿ ಸೇವಂತಿಗೆ ಕೃಷಿಯನ್ನು ಮಾಡುತ್ತಾರೆ. ಗಾತ್ರದಲ್ಲಿ ಚಿಕ್ಕದಾದರೂ ನೋಡಲು ಆಕರ್ಷಕವಾಗಿರುವ ಹೆಮ್ಮಾಡಿ ಸೇವಂತಿಗೆ ಆಡುಭಾಷೆಯಲ್ಲಿ ‘ಹೆಮ್ಮಾಡಿ ಶ್ಯಾಮಂತಿ’ ಎಂದೇ ಪ್ರಸಿದ್ಧಿಯನ್ನು ಪಡೆದಿದೆ.

ಆಗಸ್ಟ್‌ನಲ್ಲಿ ಭತ್ತದ ಕಟಾವು ಮುಗಿಸಿದ ಬಳಿಕ ಕೃಷಿಕರು ಗದ್ದೆಗಳಲ್ಲಿ ಸೇವಂತಿಗೆ ಗಿಡಗಳನ್ನು ನಾಟಿ ಮಾಡುತ್ತಾರೆ. ಮೂರು ತಿಂಗಳ ಪೋಷಣೆಯ ನಂತರ ಜನವರಿ ಎರಡನೇ ವಾರದಲ್ಲಿ ಹೂ ಕಟಾವು ಆರಂಭವಾಗುತ್ತದೆ. ಸಂಕ್ರಾಂತಿ ಹಬ್ಬದ ಮೊದಲ ದಿನ ಮೊದಲ ಹೂ ಕೊಯ್ಲನ್ನು ಬುಟ್ಟಿಯಲ್ಲಿ ತುಂಬಿಕೊಂಡು ಮಾರಣಕಟ್ಟೆ ಬ್ರಹ್ಮಲಿಂಗೇಶ್ವರನಿಗೆ ಅರ್ಪಿಸಿದ ಬಳಿಕವೇ ಉಳಿದ ಹೂವನ್ನು ಮಾರಾಟ ಮಾಡಬೇಕು.

ಮಾರಣಕಟ್ಟೆ ಜಾತ್ರೆಯ ಬಳಿಕ ಹೆಮ್ಮಾಡಿ ಸೇವಂತಿಗೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ನಡೆಯುವ ಜಾತ್ರೆ, ಉತ್ಸವ, ಕೆಂಡ ಮಹೋತ್ಸವ, ಕೋಲ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳಿಗೆ ಕಳಿಸಲಾಗುತ್ತದೆ. ಆದರೆ ಹವಾಮಾನ ವೈಪರೀತ್ಯ, ಕಾರ್ಮಿಕರ ಕೊರತೆ ಸೇರಿದಂತೆ ಹಲವು ಕಾರಣಗಳಿಂದ ಸೇವಂತಿಗೆ ಬೆಳೆಗಾರರು ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಇದರಿಂದ ಕೆಲ ಕೃಷಿಕರು ಸೇವಂತಿಗೆ ಬೆಳೆಯಿಂದ ಹಿಂದೆ ಸರಿದಿದ್ದಾರೆ.