
ಕೊಪ್ಪಳ ನಗರಕ್ಕೆ ಹೊಂದಿಕೊಂಡು ಬಲ್ಡೋಟಾ ಕಂಪನಿ ಬೃಹತ್ ಸ್ಟೀಲ್ ಫ್ಯಾಕ್ಟರಿ ಆರಂಭಕ್ಕೆ ಮುಂದಾಗಿತ್ತು. ಆದರೆ ಬಲ್ಡೋಟಾ ಫ್ಯಾಕ್ಟರಿ ವಿರೋಧಿಸಿ ಇಂದು ಕೊಪ್ಪಳ ಬಂದ್ಗೆ ಕರೆ ನೀಡಲಾಗಿತ್ತು. ಕೊಪ್ಪಳ ಬಂದ್ ಸಂಪೂರ್ಣವಾಗಿ ಯಶಸ್ವಿಯಾಗಿದ್ದು, ಸಾವಿರಾರು ಜನರು ಭಾಗಿಯಾದ್ದರು. ಇನ್ನು ಇದೇ ವೇಳೆ ಗವಿಮಠದ ಸ್ವಾಮೀಜಿ ಕಣ್ಣೀರು ಹಾಕಿದ್ದಾರೆ.

ಇಂದು ಕೊಪ್ಪಳ ನಗರದ ಬಹುತೇಕ ರಸ್ತೆಗಳು ಬಿಕೋ ಅಂತಿದ್ದವು. ವ್ಯಾಪಾರ, ವಹಿವಾಟು ಸಂಪೂರ್ಣವಾಗಿ ಸ್ಥಗಿತವಾಗಿತ್ತು. ನಗರದಲ್ಲಿ ಇಂದು ಜನರು, ತಮ್ಮ ಜಾತಿ, ಧರ್ಮ ಗಳನ್ನು ಬಿಟ್ಟು ಹೋರಾಟದಲ್ಲಿ ಭಾಗಿಯಾಗಿದ್ದರು. ರಾಜಕೀಯ ನಾಯಕರು, ತಮ್ಮ ಪಕ್ಷದ ಗೊಡವೆ ಬಿಟ್ಟು ಬಂದಿದ್ದರು. ಸ್ವಾಮೀಜಿಗಳು, ಮೌಲ್ವಿಗಳು, ಪಾದ್ರಿಗಳು ಕೂಡ ಭಾಗಿಯಾಗಿದ್ದರು. ಇವರೆಲ್ಲರ ಆಕ್ರೋಶ, ಹೋರಾಟಕ್ಕೆ ಕಾರಣವಾಗಿದ್ದು, ಕೊಪ್ಪಳ ನಗರಕ್ಕೆ ಹೊಂದಿಕೊಂಡು ಆರಂಭವಾಗ್ತಿರೋ ಬೃಹತ್ ಬಲ್ಡೋಟಾ ಸ್ಟೀಲ್ ಮತ್ತು ಪವರ್ ಪ್ಲಾಂಟ್.

ಗವಿಮಠದಿಂದ ಆರಂಭವಾದ ಮೆರವಣಿಗೆ, ಗಡಿಯಾರ ಕಂಬ, ಅಶೋಕ ಸರ್ಕಲ್ ಮೂಲಕ ಹಾದು, ಕೊಪ್ಪಳ ತಾಲೂಕು ಕ್ರೀಡಾಂಗಣವರೆಗೆ ನಡೆಯಿತು. ನಂತರ ತಾಲೂಕು ಕ್ರೀಂಡಾಗಣದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಕೂಡ ಸಾವಿರಾರು ಜನ ಭಾಗಿಯಾಗಿದ್ದರು. ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ್, ಬಿಜೆಪಿ ಶಾಸಕ ಜನಾರ್ಧನ ರೆಡ್ಡಿ, ಸಂಸದ ರಾಜಶೇಖರ ಹಿಟ್ನಾಳ್ ಸೇರಿ, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದ ನಾಯಕರು ಭಾಗಿಯಾಗಿದ್ದರು.

ತಾಲೂಕು ಕ್ರೀಂಡಾಗಣದಲ್ಲಿ ನಡೆದ ಸಭೆಯಲ್ಲಿ ಭಾಗಿಯಾಗಿದ್ದ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಕಣ್ಣೀರು ಹಾಕಿದರು. ಫ್ಯಾಕ್ಟರಿಯಿಂದ ಆಗ್ತಿರೋ ದುಷ್ಪರಿಣಾಮಗಳ ವಿಡಿಯೋ ಪ್ರದರ್ಶನ ಮಾಡಲಾಯಿತು. ಮಕ್ಕಳು, ಮಹಿಳೆಯರು, ವೃದ್ದರು, ಫ್ಯಾಕ್ಟರಿಯಿಂದಾಗೋ ಧೂಳು, ಹೊಗೆಯಿಂದ ತಮ್ಮ ಜೀವನ ಹೇಗೆ ಹಾಳಾಗುತ್ತಿದೆ. ಆರೋಗ್ಯ ಹೇಗೆಲ್ಲಾ ಕೆಡುತ್ತಿದೆ ಅನ್ನೋ ನೋವಿನ ನುಡಿಗಳನ್ನು ಕೇಳಿ, ಸ್ವಾಮೀಜಿ ಭಾವುಕರಾದರು.

ಬಳಿಕ ಮಾತನಾಡುವಾಗ ಕೂಡ ಭಾವುಕರಾದ ಸ್ವಾಮೀಜಿ, ಸರ್ಕಾರ ಈ ಭಾಗದ ಜನರಿಗೆ ವಿಷ ನೀಡದೇ ಬದುಕಲು ಅವಕಾಶ ಕೊಡಬೇಕು. ಕೊಪ್ಪಳ ತಾಲೂಕಿನಲ್ಲೇ ಸುಮಾರು 202 ಕಾರ್ಖಾನೆಗಳಿವೆ. ನಗರದ ಸುತ್ತಲೂ ಫ್ಯಾಕ್ಟರಿಗಳಾದ್ರೆ ಜನ ಇರೋದಾದ್ರು ಎಲ್ಲಿ? ಇದೇ ರೀತಿ ಕಾರ್ಖಾನೆಗಳು ಸ್ಥಾಪಿಸಿದ್ರೆ ಕೊಪ್ಪಳ ನರಕವಾಗುತ್ತದೆ. ತೊಟ್ಟಿಲಲ್ಲಿ ಹೋಗೋರಕ್ಕಿಂತ ನರಕಕ್ಕೆ ಹೋಗೋರ ಸಂಖ್ಯೆ ಹೆಚ್ಚಾಗುತ್ತೆ. ಹೀಗಾಗಿ ಕೊಪ್ಪಳದಲ್ಲಿ ಯಾವುದೇ ಕಾರ್ಖಾನೆ ಆರಂಭಕ್ಕೆ ನನ್ನ ವಿರೋಧವಿದೆ. ಇರುವ ಕಾರ್ಖಾನೆಗಳ ವಿಸ್ತರಣೆಗೆ ಅವಕಾಶ ಕೊಡಬಾರದು ಎಂದಿದ್ದಾರೆ.

ಯಾವುದೇ ಸರ್ಕಾರ ಬಂಡವಾಳಶಾಹಿಗಳ ಪರವಾಗಿ ಇರಬಾರದು. ಸರ್ಕಾರ ಬಡವರ ಪರವಾಗಿರಬೇಕು. ಸರ್ಕಾರ ತಾಯಿಯಿದ್ದಂತೆ, ಜನರನ್ನು ಜೋಪಾನ ಮಾಡಬೇಕಿದೆ. ಈಗ ವಿಷ ಹಾಕ್ತಿರೋ ಅಥವಾ ಅಮೃತ ಹಾಕ್ತಿರೋ ನಿಮಗೆ ಬಿಟ್ಟಿದ್ದು. ಕೊಪ್ಪಳ ಜನರಿಗೆ ಆರೋಗ್ಯದ ಜೊತೆಗೆ ಬದುಕಲು ಅವಕಾಶ ನೀಡಿ ಎಂದು ಹೇಳಿದ್ದಾರೆ.

ಈಗಾಗಲೇ ಇರುವ ಫ್ಯಾಕ್ಟರಿಗಳಿಂದ ಸುತ್ತಮುತ್ತಲು ಧೂಳು ಮತ್ತು ಹೊಗೆಯಿಂದ ಜನರ ಆರೋಗ್ಯ ಹಾಳಾಗಿದೆ. ಜನರು ಅಸ್ತಮಾ, ಕ್ಯಾನ್ಸರ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದೀಗ ದೊಡ್ಡ ಘಟಕದಿಂದ ಇಡೀ ಕೊಪ್ಪಳ ಮತ್ತಷ್ಟು ತೊಂದರೆಗೆ ಸಿಲುಕುತ್ತದೆ. ಹೀಗಾಗಿ ಫ್ಯಾಕ್ಟರಿ ಬೇಡ ಅಂತ ಜನರು ಆಗ್ರಹಿಸುತ್ತಿದ್ದಾರೆ.