- Kannada News Photo gallery Cricket photos Shreyas Iyer's Record-Breaking 50+: A Stellar Performance Against Pakistan
IND vs PAK: ಕೊಹ್ಲಿ ಶತಕದ ಭರಾಟೆಯಲ್ಲಿ ಮರೆಯಾದ ಶ್ರೇಯಸ್ ಅಯ್ಯರ್ ದಾಖಲೆ
Shreyas Iyer: ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನದ ವಿರುದ್ಧ ಶ್ರೇಯಸ್ ಅಯ್ಯರ್ ಅವರು ಅದ್ಭುತ ಅರ್ಧಶತಕ ಸಿಡಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ. 62 ಏಕದಿನ ಇನ್ನಿಂಗ್ಸ್‌ಗಳಲ್ಲಿ ಅತಿ ಹೆಚ್ಚು 50+ ಸ್ಕೋರ್ ಗಳಿಸಿದ ಆರಂಭಿಕರಲ್ಲದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಕೇನ್ ವಿಲಿಯಮ್ಸನ್, ವಿವಿಯನ್ ರಿಚರ್ಡ್ಸ್ ಮತ್ತು ಕೆವಿನ್ ಪೀಟರ್ಸನ್ ಅವರ ದಾಖಲೆಗಳನ್ನು ಅವರು ಮುರಿದಿದ್ದಾರೆ.
Updated on:Mar 02, 2025 | 2:18 PM

ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಟೀಂ ಇಂಡಿಯಾ ನಿರೀಕ್ಷಿಸಿದ ರೀತಿಯಲ್ಲಿ ಗೆದ್ದುಕೊಂಡಿದೆ. ಮಾಜಿ ನಾಯಕ ವಿರಾಟ್ ಕೊಹ್ಲಿ ದಾಖಲೆಯ ಶತಕ ಸಿಡಿಸುವುದರೊಂದಿಗೆ ತಂಡಕ್ಕೆ ಸುಲಭ ಜಯ ತಂದುಕೊಟ್ಟರು. ಇದೀಗ ಕಿಂಗ್ ಕೊಹ್ಲಿಯ ಶತಕದ ಬಗ್ಗೆಯೇ ಎಲ್ಲೆಡೆ ಮಾತನಾಡಲಾಗುತ್ತಿದೆ. ಆದರೆ ಕೊಹ್ಲಿ ಜೊತೆಗೆ ಗೆಲುವಿನ ಅರ್ಧಶತಕ ಸಿಡಿಸಿದ ಅಯ್ಯರ್ ಅವರ ದಾಖಲೆಯ ಬಗ್ಗೆ ಚರ್ಚೆಯೇ ಇಲ್ಲವಾಗಿದೆ.

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬಂದ ಶ್ರೇಯಸ್ ಅಯ್ಯರ್ ಪಾಕಿಸ್ತಾನ ವಿರುದ್ಧವೂ ಅದ್ಭುತವಾಗಿ ಆಡಿ ಅರ್ಧಶತಕದ ಇನ್ನಿಂಗ್ಸ್ನೊಂದಿಗೆ ಹೊಸ ದಾಖಲೆಯನ್ನು ಸೃಷ್ಟಿಸಿದರು. ಪಾಕ್ ವಿರುದ್ಧದ ಅರ್ಧಶತಕದೊಂದಿಗೆ ಇದೀಗ ಅಯ್ಯರ್ 62 ಏಕದಿನ ಇನ್ನಿಂಗ್ಸ್‌ಗಳ ನಂತರ ಅತಿ ಹೆಚ್ಚು 50 ಪ್ಲಸ್ ಸ್ಕೋರ್‌ಗಳನ್ನು ಗಳಿಸಿದ ಆರಂಭಿಕರಲ್ಲದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.

ಅಯ್ಯರ್ ಪಾಕಿಸ್ತಾನ ವಿರುದ್ಧ 67 ಎಸೆತಗಳನ್ನು ಎದುರಿಸಿ 56 ರನ್ ಗಳಿಸಿದರು. ಈ ಇನ್ನಿಂಗ್ಸ್‌ನಲ್ಲಿ 1 ಸಿಕ್ಸರ್ ಮತ್ತು 5 ಬೌಂಡರಿಗಳು ಸೇರಿದ್ದವು. ಈ ಅದ್ಭುತ ಇನ್ನಿಂಗ್ಸ್ ನಂತರ, ಅಯ್ಯರ್ 62 ಏಕದಿನ ಇನ್ನಿಂಗ್ಸ್‌ಗಳಲ್ಲಿ ಅತಿ ಹೆಚ್ಚು 50+ ಸ್ಕೋರ್‌ಗಳನ್ನು ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ (ಆರಂಭಿಕರಲ್ಲದವರು) ಅಗ್ರಸ್ಥಾನವನ್ನು ಅಲಂಕರಿಸಿದ್ದಾರೆ.

ಪಾಕಿಸ್ತಾನ ವಿರುದ್ಧ ಅರ್ಧಶತಕ ದಾಖಲಿಸುವ ಮೂಲಕ ಅಯ್ಯರ್, ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ಕೇನ್ ವಿಲಿಯಮ್ಸನ್, ವೆಸ್ಟ್ ಇಂಡೀಸ್‌ನ ವಿವಿಯನ್ ರಿಚರ್ಡ್ಸ್ ಮತ್ತು ಇಂಗ್ಲೆಂಡ್‌ನ ಕೆವಿನ್ ಪೀಟರ್ಸನ್ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಈ ಮೂವರು ಬ್ಯಾಟ್ಸ್‌ಮನ್‌ಗಳು 62 ಏಕದಿನ ಇನ್ನಿಂಗ್ಸ್‌ಗಳಲ್ಲಿ 22 ಬಾರಿ 50+ ಸ್ಕೋರ್ ಕಲೆಹಾಕಿದ್ದರು.

ಅಯ್ಯರ್ ಟೀಂ ಇಂಡಿಯಾ ಪರ ಮಧ್ಯಮ ಕ್ರಮಾಂಕದಲ್ಲಿ ನಿರಂತರವಾಗಿ ಕಲೆಹಾಕುತ್ತಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಚಾಂಪಿಯನ್ಸ್ ಟ್ರೋಫಿಯ ಮೊದಲ ಪಂದ್ಯದಲ್ಲಿ 15 ರನ್‌ಗಳಿಗೆ ಔಟಾಗಿದ್ದ ಅಯ್ಯರ್, ಅದಕ್ಕೂ ಮೊದಲು ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದರು.

ಮೊದಲ ಏಕದಿನ ಪಂದ್ಯದಲ್ಲಿ 59 ರನ್, ಎರಡನೇ ಪಂದ್ಯದಲ್ಲಿ 44 ಮತ್ತು ಮೂರನೇ ಪಂದ್ಯದಲ್ಲಿ 78 ರನ್ ಗಳಿಸಿದ್ದರು. 30 ವರ್ಷದ ಅಯ್ಯರ್ ಇದುವರೆಗೆ 67 ಏಕದಿನ ಪಂದ್ಯಗಳ 62 ಇನ್ನಿಂಗ್ಸ್‌ಗಳಲ್ಲಿ 2673 ರನ್ ಗಳಿಸಿದ್ದಾರೆ. 50 ಓವರ್‌ಗಳ ಮಾದರಿಯಲ್ಲಿ ಅವರು 21 ಅರ್ಧ ಶತಕಗಳು ಮತ್ತು 5 ಶತಕಗಳನ್ನು ಗಳಿಸಿದ್ದಾರೆ.
Published On - 7:12 pm, Mon, 24 February 25
























