WPLನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಎಲ್ಲಿಸ್ ಪೆರ್ರಿ
WPL 2025: ವುಮೆನ್ಸ್ ಪ್ರೀಮಿಯರ್ ಲೀಗ್‌ನ 9ನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡ ಜಯ ಸಾಧಿಸಿದೆ. ಬೆಂಗಳೂರಿನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ ಸಿಬಿ 180 ರನ್ ಗಳಿಸಿದರೆ, ಯುಪಿ ವಾರಿಯರ್ಸ್ ತಂಡ ಕೂಡ 180 ರನ್ ಕಲೆಹಾಕಿತು. ಆ ಬಳಿಕ ನಡೆದ ಸೂಪರ್ ಓವರ್ ನಲ್ಲಿ ಯುಪಿ ವಾರಿಯರ್ಸ್ 8 ರನ್ ಗಳಿಸಿದರೆ, ಆರ್ ಸಿಬಿ 4 ರನ್ ಗಳಿಸಲಷ್ಟೇ ಶಕ್ತರಾದರು.
Updated on: Feb 25, 2025 | 7:32 AM

ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ (WPL) ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಆಟಗಾರ್ತಿ ಎಲ್ಲಿಸ್ ಪೆರ್ರಿ ಹೊಸ ಇತಿಹಾಸ ಬರೆದಿದ್ದಾರೆ. ಅದು ಸಹ ಬರೋಬ್ಬರಿ 800+ ರನ್ ಗಳನ್ನು ಕಲೆಹಾಕುವ ಮೂಲಕ ಎಂಬುದು ವಿಶೇಷ.

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ಪರ ಎಲ್ಲಿಸ್ ಪೆರ್ರಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಪೆರ್ರಿ 56 ಎಸೆತಗಳನ್ನು ಎದುರಿಸಿ 3 ಸಿಕ್ಸ್ ಹಾಗೂ 9 ಫೋರ್ ಗಳೊಂದಿಗೆ 90 ರನ್ ಸಿಡಿಸಿದ್ದರು.

ಈ 90 ರನ್ ಗಳೊಂದಿಗೆ ಎಲ್ಲಿಸ್ ಪೆರ್ರಿ ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ 800 ರನ್ ಗಳನ್ನು ಪೂರೈಸಿದ್ದಾರೆ. ಈ ಮೂಲಕ WPL ಇತಿಹಾಸದಲ್ಲೇ 800+ ರನ್ ಗಳಿಸಿದ ಮೊದಲ ಆಟಗಾರ್ತಿ ಎನಿಸಿಕೊಂಡಿದ್ದಾರೆ.

ಆರ್ಸಿಬಿ ಪರ ಈವರೆಗೆ 21 ಇನಿಂಗ್ಸ್ ಆಡಿರುವ ಎಲ್ಲಿಸ್ ಪೆರ್ರಿ 7 ಅರ್ಧಶತಕಗಳೊಂದಿಗೆ ಒಟ್ಟು 835 ರನ್ ಕಲೆ ಹಾಕಿದ್ದಾರೆ. ಈ ವೇಳೆ ಪೆರ್ರಿ ಬ್ಯಾಟ್ ನಿಂದ 95 ಫೋರ್ ಹಾಗೂ 21 ಸಿಕ್ಸ್ ಗಳು ಸಹ ಮೂಡಿ ಬಂದಿವೆ.

ಇದೀಗ ವುಮೆನ್ಸ್ ಪ್ರೀಮಿಯರ್ ಲೀಗ್‌ನ ರನ್ ಸರದಾರಿಣಿ ಎನಿಸಿಕೊಂಡಿರುವ ಎಲ್ಲಿಸ್ ಪೆರ್ರಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಕಡೆಯಿಂದ ಉತ್ತಮ ಪೈಪೋಟಿ ಇದೆ. ಲ್ಯಾನಿಂಗ್ ಈವರೆಗೆ 782 ರನ್ ಕಲೆಹಾಕಿದ್ದು, ಈ ಮೂಲಕ ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ.



















