
ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಅವರು ಪ್ರೀತಿಸಿ ವಿವಾಹ ಆಗಿ ಕೆಲವೇ ವರ್ಷ ಹಾಯಾಗಿ ಸಂಸಾರ ನಡೆಸಿದರು. ಚಿರು ಸರ್ಜಾ ಅವರು ಹೃದಯಾಘಾತದಿಂದ ಮೃತಪಟ್ಟರು. ಆ ಬಳಿಕ ಮೇಘನಾ ಅವರು ಚಿರುವಿನ ನೆನಪಿನಲ್ಲೇ ಬದುಕುತ್ತಿದ್ದಾರೆ.

ಮೇಘನಾ ರಾಜ್ ಅವರು ಎರಡನೇ ಮದುವೆ ಆಗುತ್ತಾರೆ ಎನ್ನುವ ವದಂತಿ ಮೊದಲಿನಿಂದಲೂ ಇದೆ. ಇದಕ್ಕೆ ಅವರು ಫುಲ್ ಸ್ಟಾಪ್ ಇಟ್ಟಿದ್ದಾರೆ. ಇದಕ್ಕೆ ಕಾರಣ ಆಗಿದ್ದು, ಅವರು ಹಂಚಿಕೊಂಡಿರೋ ಮೂರು ಫೋಟೋ ಹಾಗೂ ಅದಕ್ಕೆ ನೀಡಿದ ಕ್ಯಾಪ್ಶನ್.

ಚಿರಂಜೀವಿ ಜೊತೆ ಕಳೆದ ಕ್ಷಣಗಳ ಫೋಟೋಗಳನ್ನು ಮೇಘನಾ ರಾಜ್ ಅವರು ಹಂಚಿಕೊಂಡಿದ್ದಾರೆ. ಇದಕ್ಕೆ ‘ಪ್ರತಿ ಜೀವಿತಾವಧಿಗೂ’ ಎನ್ನುವ ಕ್ಯಾಪ್ಶನ್ ನೀಡಿದ್ದಾರೆ. ಅಂದರೆ ಪ್ರತಿ ಜೀವಿತಾವಧಿಗೂ ಚಿರು ಬೇಕು ಎಂದು ಅವರು ಹೇಳಿದ್ದಾರೆ. ಈ ಕ್ಯಾಪ್ಶನ್ ಮೂಲಕ ಎಲ್ಲ ವದಂತಿಗೂ ಫುಲ್ ಸ್ಟಾಪ್ ಇಟ್ಟಿದ್ದಾರೆ.

ಚಿರಂಜೀವಿ ನಿಧನ ಹೊಂದಿದ ಬಳಿಕ ರಾಯನ್ ಬಂದಿದ್ದಾನೆ. ರಾಯನ್ ಹಾಗೂ ಚಿರು ನಡುವೆ ಸಾಕಷ್ಟು ಹೋಲಿಕೆ ಇದೆ ಎಂದು ಮೇಘನಾ ಅವರು ಅನೇಕ ಬಾರಿ ಹೇಳಿದ್ದು ಇದೆ. ಅವರು ಸದ್ಯಕ್ಕೆ ಎರಡನೇ ಮದುವೆ ಬಗ್ಗೆ ಆಲೋಚನೆ ಮಾಡಿಲ್ಲ.

ಈ ಮೊದಲು ಸಂದರ್ಶನ ಒಂದರಲ್ಲಿ ಮಾತನಾಡಿದ್ದ ಮೇಘನಾ, ‘ಚಿರುಗೆ ಸರಿ ಎನಿಸಿದರೆ ಆತನೇ ನನಗೆ ವ್ಯಕ್ತಿಯೊಬ್ಬನನ್ನು ಕಳುಹಿಸುತ್ತಾನೆ. ಇಲ್ಲವಾದಲ್ಲಿ ನಾನು ಸಿಂಗಲ್ ಆಗಿಯೇ ಇರುತ್ತೇನೆ’ ಎಂದು ಮೇಘನಾ ರಾಜ್ ಅವರು ಹೇಳಿದ್ದರು.