Updated on:Aug 21, 2021 | 12:36 PM
ಷೇರು ಮಾರ್ಕೆಟ್ ಅಂದರೆ ಹಣ ಮಾಡುವುದಕ್ಕೆ ಅದ್ಭುತ ಅವಕಾಶ ಎಂದು ಭಾವಿಸುವ ವರ್ಗ ಇರುವಂತೆಯೇ ಅದರ ಸಹವಾಸ ಬೇಡ ಎಂದು ಭಯ ಪಡುವವರೂ ಇದ್ದಾರೆ. ಆದರೆ ಈಗಿನ ಹೊಸ ತಲೆಮಾರಿನ ಆಲೋಚನೆಯೇ ಬೇರೆ ಇದೆ. ಯಾವುದೇ ವಿಚಾರದಲ್ಲಿ ಅವರು ತೆಗೆದುಕೊಳ್ಳುವ ನಿರ್ಧಾರ, ಮುಂದಕ್ಕೆ ಹೆಜ್ಜೆ ಇಡುವ ಬಗೆ ಭಿನ್ನ. ಚೆನ್ನಾಗಿ ಅಧ್ಯಯನ ಮಾಡಿ, ಭವಿಷ್ಯದ ಆಗು-ಹೋಗುಗಗಳನ್ನು ಅಳೆದುತೂಗಿದ ನಂತರವೇ ಹಣವನ್ನು ಹೂಡಿಕೆ ಮಾಡುವ ಯುವ ಹೂಡಿಕೆದಾರರು ಕಾಣಸಿಗುತ್ತಾರೆ. ಕೊರೊನಾದಿಂದ ಜಾಗತಿಕ ಷೇರು ಮಾರುಕಟ್ಟೆ ಕುಸಿಯಿತಲ್ಲಾ, ಆ ಸಂದರ್ಭದಲ್ಲಿ ಭಾರತದ ಷೇರು ಮಾರುಕಟ್ಟೆಯಲ್ಲೂ ಖರೀದಿ ಅವಕಾಶ ಬಂತು. ಅದಕ್ಕೂ ಮುಂಚಿನಿಂದಲೂ ದೀರ್ಘಾವಧಿ ಹೂಡಿಕೆ ಮಾಡಿಕೊಂಡು ಬಂದವರಿಗೆ ಈಗ ಅದ್ಭುತ ರಿಟರ್ನ್ಸ್ ದೊರೆಯುತ್ತಿದೆ. ಅಂಥ ರಿಟರ್ನ್ಸ್ ನೀಡುವುದನ್ನು ಮಲ್ಟಿಬ್ಯಾಗರ್ ಅನ್ನಲಾಗುತ್ತದೆ. ಆ ಮಲ್ಟಿಬ್ಯಾಗರ್ಗಳ ಪಟ್ಟಿಯಲ್ಲಿ ಅವಂತಿ ಫೀಡ್ಸ್ ಕಂಪೆನಿ ಕೂಡ ಒಂದು.
ಕಳೆದ ಮಾರ್ಚ್ನಿಂದ, ಅಂದರೆ 2020ರ ಮಾರ್ಚ್ನಿಂದ ಬಹುತೇಕ ಷೇರುಗಳು ಮಲ್ಟಿಬ್ಯಾಗರ್ಗಳಾಗಿವೆ. ಹಾಗಂದರೆ, ಹಾಕಿದ ಹೂಡಿಕೆ ಮೊತ್ತಕ್ಕೆ ಹಲವು ಪಟ್ಟುಗಳ ರಿಟರ್ನ್ಸ್ ನೀಡಿರುವಂಥ ಷೇರುಗಳು ಅಂತ ಅರ್ಥ. ಅಂಥವುಗಳ ಸಾಲಿಗೆ ಸೇರುವಂಥದ್ದರಲ್ಲಿ ಅವಂತಿ ಫೀಡ್ಸ್ ಕೂಡ ಒಂದು. ಈ ಕಂಪೆನಿ ಷೇರುಗಳು ಹೂಡಿಕೆದಾರರಿಗೆ ಸ್ಥಿರವಾದ ರಿಟರ್ನ್ಸ್ ನೀಡುತ್ತಲೇ ಬರುತ್ತಿದೆ. ಆದರೆ ಹೈದರಾಬಾದ್ ಮೂಲದ ಈ ಎಲೆಕ್ಟ್ರಿಕ್ ಸರ್ವೀಸ್ ಕಂಪೆನಿಯ ಷೇರು ದರವು ಕಳೆದ ಕೆಲವು ಟ್ರೇಡಿಂಗ್ ಸೆಷನ್ನಲ್ಲಿ ಕುಸಿತ ಕಂಡಿದೆ. ಮಾರುಕಟ್ಟೆಯು ಏರಿಕೆ ಮೂಡ್ನಲ್ಲಿ ಇದ್ದರೆ, ಅವಂತಿ ಫೀಡ್ಸ್ ಅದರ ವಿರುದ್ಧ ಸಾಗುತ್ತಿದೆ.
ಆದರೆ, ಈ ಸ್ಟಾಕ್ ಮಲ್ಟಿಬ್ಯಾಗರ್ಗಳಲ್ಲಿ ಒಂದು. ಯಾರು ಬಹಳ ದೀರ್ಘಾವಧಿಯಿಂದ ಈ ಕಂಪೆನಿಯ ಷೇರುಗಳನ್ನು ಇಟ್ಟುಕೊಂಡಿರುತ್ತಾರೋ ಅವರಿಗೆ ಭರ್ಜರಿ ಫಸಲನ್ನೇ ನೀಡಿದೆ. ಆಗಸ್ಟ್ 26, 2011ರಂದು ಎನ್ಎಸ್ಇಯಲ್ಲಿ ಈ ಕಂಪೆನಿಯ ಷೇರು ಬೆಲೆ ಒಂದಕ್ಕೆ 3.40 ರೂಪಾಯಿ (3 ರೂಪಾಯಿ 40 ಪೈಸೆ) ಇತ್ತು. ಅಲ್ಲಿಂದ 10 ವರ್ಷಗಳ ನಂತರ ಒಂದು ಷೇರಿಗೆ 548 ರೂಪಾಯಿಗೆ ಏರಿಕೆ ಆಗಿದೆ. ಅಂದರೆ 161 ಪಟ್ಟು ಬೆಲೆ ಹೆಚ್ಚಳ ಆಗಿದೆ.
ಕಳೆದ 5 ಟ್ರೇಡ್ ಸೆಷನ್ನಲ್ಲಿ ಅವಂತಿ ಫೀಡ್ಸ್ ಷೇರಿನ ದರವು ಶೇ 7ರಷ್ಟು ಇಳಿಕೆ ಕಂಡಿದೆ. ಅಂದಹಾಗೆ ಕಳೆದ ಇಂದು ತಿಂಗಳಿಂದಲೇ ಈ ಷೇರಿಗೆ ಹಣ ಹೂಡಿದ್ದವರು ಲಾಭದ ನಗದು ಮಾಡಿಕೊಳ್ಳುವುದಕ್ಕೆ ಆರಂಭಿಸಿದ್ದಾರೆ. ಆದ್ದರಿಂದ ಕಳೆದ ಒಂದು ತಿಂಗಳಿಂದ ಶೇ 11.61ರಷ್ಟು ಇಳಿಕೆ ಕಂಡಿದೆ. ಆದರೆ ಹಣಕಾಸು ವರ್ಷವಾದ 2021-22ರಲ್ಲಿ (ಮಾರ್ಚ್ 31ರಿಂದ ಈಚೆಗೆ) ಅವಂತಿ ಫೀಡ್ಸ್ 414.45ರಿಂದ ಇವತ್ತಿಗೆ 548 ರೂಪಾಯಿಗೆ ಬಂದಿದೆ. ಅಂದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 32ರಷ್ಟು ಮೇಲೇರಿದೆ.
ಕಳೆದ 5 ವರ್ಷಗಳ ಲೆಕ್ಕಾಚಾರವನ್ನು ಗಮನಿಸುವುದಾದರೆ, ಇದೇ ಅವಧಿಯಲ್ಲಿ ಈ ಷೇರು ಮಲ್ಟಿಬ್ಯಾಗರ್ ರಿಟರ್ನ್ಸ್ ಆದ ಶೇ 206ರಷ್ಟು ನೀಡಿದೆ. ಆದರೆ ಕಳೆದ ಹತ್ತು ವರ್ಷಗಳ ಲೆಕ್ಕಾಚಾರ ಅಂತ ನೋಡುವುದಾದರೆ ಈ ಸ್ಟಾಕ್ ರೂ. 3.40 ಇದ್ದದ್ದು 548 ರೂಪಾಯಿ ಮಟ್ಟಕ್ಕೆ ಬಂದಿದೆ. ಆ ಮೂಲಕವಾಗಿ ಶೇ 16,000ದಷ್ಟು ಏರಿಕೆ ಆಗಿದೆ.
ಹೂಡಿಕೆದಾರರು ಪ್ರಸಕ್ತ ಹಣಕಾಸು ವರ್ಷದಲ್ಲೇನಾದರೂ ಈ ಷೇರಿನ ಮೇಲೆ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ ಇವತ್ತಿಗೆ ಅದು 1.32 ಲಕ್ಷ ಆಗಿರುತ್ತದೆ. ಅದೇ ರೀತಿ 5 ವರ್ಷದ ಹಿಂದೆ 1 ಲಕ್ಷ ಹೂಡಿಕೆ ಮಾಡಿದ್ದಲ್ಲಿ ಇವತ್ತಿಗೆ 3.06 ಲಕ್ಷ ಆಗಿರುತ್ತದೆ. ಇನ್ನು 10 ವರ್ಷದ ಹಿಂದೆ ಅವಂತಿ ಫೀಡ್ಸ್ನಲ್ಲಿ ಹೂಡಿಕೆ ಮಾಡಿ, ಆ ಷೇರುಗಳನ್ನು ಹಾಗೇ ಇರಿಸಿಕೊಂಡಿದ್ದಲ್ಲಿ ಇವತ್ತಿಗೆ 1.61 ಕೋಟಿ ರೂಪಾಯಿ ಆಗಿರುತ್ತದೆ.
Published On - 12:29 pm, Sat, 21 August 21