
ಮೈಸೂರಿನಲ್ಲಿ ನಾಡಹಬ್ಬ ದಸರಾ ಆಚರಣೆ ಸಿದ್ದತೆ ಭರದಿಂದ ಸಾಗಿದೆ. ದಸರಾದ ಪ್ರಮುಖ ಆಕರ್ಷಣೆಯಾದ ಆನೆಗಳು ಮೈಸೂರಿಗೆ ಬಂದಿವೆ. ದಸರಾ ಆನೆಗಳಿಗೆ ರಾಜಾತಿಥ್ಯ ನೀಡಲಾಗತ್ತಿದೆ. ಅತಿಥಿಗಳನ್ನು ಸತ್ಕರಿಸುವುದು ನಮ್ಮ ಸಂಸ್ಕೃತಿ ಸಂಪ್ರದಾಯ. ಇದು ರಾಜ ಮಹಾರಾಜರ ಕಾಲದಿಂದಲೂ ನಡೆದುಕೊಂಡು ಬಂದಿದೆ. ಇದು ಪ್ರಾಣಿಗಳಿಗೂ ಅನ್ವಯಿಸುತ್ತದೆ. ಇದಕ್ಕೆ ಸಾಕ್ಷಿ ದಸರಾ ಗಜಪಡೆಗಳು.

ಇಷ್ಟು ದಿನ ಕಾಡಿನಲ್ಲಿದ್ದ ದಸರಾ ಆನೆಗಳಿಗೆ ನಾಡಿನ ಜೊತೆ ಹೊಂದಾಣಿಕೆ ಮಾಡಿಸುವುದರಲ್ಲಿ ಮಾವುತರು ತೊಡಗಿದ್ದಾರೆ. ಜೊತೆಗೆ ಈ ಆನೆಗಳಿಗೆ ವಿಶೇಷ ಆಹಾರ ನೀಡಲಾಗುತ್ತಿದೆ. ಕಾಡಿನಲ್ಲಿ ಬಿದಿರು, ಸೊಪ್ಪು ಸೆದೆ ಮೇಯುತ್ತಿದ್ದ ಆನೆಗಳಿಗೆ ಹಬ್ಬದೂಟ ನೀಡಲಾಗುತ್ತಿದೆ. ಆನೆ ಶಿಬಿರಗಳಲ್ಲಿ ರಾಗಿ, ಹುರುಳಿ, ಭತ್ತ, ಭತ್ತದ ಹುಲ್ಲನ್ನು ಕೊಡಲಾಗುತಿತ್ತು. ಇದೀಗ ಈ ಆನೆಗಳಿಗೆ ವಿಶೇಷ ಆಹಾರ ನೀಡಲಾಗುತ್ತಿದೆ.

ಇದು ದಸರಾ ಗಜಪಡೆಗೆ ನೀಡುತ್ತಿರುವ ಅದ್ಧೂರಿ ಭೋಜನ. ಹಲವು ಬಗೆ ಕಾಳುಗಳನ್ನು ಬೇಯಿಸಿ, ಬೆಣ್ಣೆ, ತರಕಾರಿ ಜೊತೆಗೆ ಮುದ್ದೆ ಮಾಡಿ ಆನೆಗಳಿಗೆ ಕೊಡಲಾಗುತ್ತಿದೆ. ಇದರ ರುಚಿಗೆ ಆನೆಗಳು ಸಖತ್ ಖುಷಿಯಾಗಿವೆ. ಉದ್ದಿನ ಕಾಳು, ಹೆಸರು ಕಾಳು, ಗೋದಿ, ಕುಸುಬಲಕ್ಕಿಯನ್ನು ಸುಮಾರು ಮೂರರಿಂದ 4 ತಾಸು ಚೆನ್ನಾಗಿ ಬೇಯಿಸಲಾಗುತ್ತದೆ. ಇದನ್ನು ಉಂಡೆ ಮಾಡಿ ಪ್ರತಿದಿನ ಬೆಳಿಗ್ಗೆ ಸಂಜೆ ನೀಡಲಾಗುತ್ತಿದೆ.

ಇದರ ಜೊತೆಗೆ ಸೌತೆಕಾಯಿ, ಬೀಟ್ರೂಟ್, ಗಜ್ಜರಿ, ಕೋಸು, ಮೂಲಂಗಿ ಮೊದಲಾದ ತರಕಾರಿಗಳನ್ನು ಕೊಡಲಾಗುತ್ತದೆ. ಇದೆಲ್ಲವನ್ನೂ ಭತ್ತದ ಹುಲ್ಲಿನಲ್ಲಿ ಕಟ್ಟಿ ಆನೆಗಳ ತೂಕಕ್ಕೆ ತಕ್ಕಂತೆ ನೀಡಬೇಕಾಗಿದ್ದಕ್ಕಿಂತ ಕೊಂಚ ಹೆಚ್ಚೇ ತಿನ್ನಿಸಲಾಗುತ್ತಿದೆ. ಇದು ಆನೆಗಳ ಆರೋಗ್ಯ ಹಾಗೂ ತೂಕ ಹೆಚ್ಚಿಸಲು ಸಹಕಾರಿಯಾಗಲಿದೆ. ಗಂಡು ಆನೆಗೆ ಪ್ರತಿನಿತ್ಯ 750 ಕೆಜಿ, ಹೆಣ್ಣು ಆನೆಗೆ 450 ಕೆಜಿ ಆಹಾರ ನೀಡಲಾಗುತ್ತಿದೆ.

ಪ್ರೋಟಿನ್ಯುಕ್ತ ವಿಶೇಷ ಆಹಾರ ಪ್ರತಿನಿತ್ಯ ಬೆಳಗ್ಗೆ ಹಾಗೂ ಸಂಜೆ 10 ಕೆಜಿ ನೀಡಲಾಗುತ್ತಿದೆ. ಪ್ರತಿದಿನ ವಾಕಿಂಗ್ ಮಾಡಿ ಬಂದ ನಂತರ ಈ ವಿಶೇಷ ಆಹಾರವನ್ನು ಗಜಪಡೆಗೆ ನೀಡಲಾಗುತ್ತಿದೆ. ದಸರಾ ಜಂಬೂಸವಾರಿಗಾಗಿ ಮೈಸೂರಿಗೆ ಬಂದಿರುವ ಆನೆಗಳಿಗೆ ವಿಶೇಷ ಆಹಾರದ ಜೊತೆ ಸಾಂಪ್ರದಾಯಿಕ ಆಹಾರವನ್ನೂ ನೂರಾರು ಕೆಜಿ ನೀಡಲಾಗುತ್ತಿದೆ. ಆನೆಗಳ ಆಹಾರಕ್ಕೆ 55 ರಿಂದ 60 ಲಕ್ಷ ವೆಚ್ಚ ಆಗಲಿದೆ.

ಕಾಡಿಂದ ನಾಡಿಗೆ ಬಂದು ಮೈಸೂರು ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ಗಜಪಡೆಗಳು ಫುಟ್ಬಾಲ್ ಆಟದಲ್ಲಿ ನಿರತರವಾಗಿವೆ. ಪ್ರತಿನಿತ್ಯ ಕಾವಾಡಿಗಳು ಮಾವುತರ ಮಕ್ಕಳ ಜೊತೆ ಫುಟ್ಬಾಲ್ ಆಡುತ್ತಿವೆ. ಕಂಜನ್ ಹಾಗೂ ಇತರ ಆನೆಗಳ ಪುಟ್ಬಾಲ್ ಆಟ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಈ ಮೂಲಕ ದಸರಾ ಗಜಪಡೆಗಳನ್ನು ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗೆ ಸಿದ್ದಪಡಿಸಲಾಗುತ್ತಿದೆ. ನಾಡಿನಲ್ಲಿ ರಾಯಲ್ ಸೇವೆ ಪಡೆಯುತ್ತಿರುವ ಜಂಬೂಸವಾರಿ ಗಜಪಡೆ ಪುಲ್ ಖುಷಿಯಾಗಿವೆ.