- Kannada News Photo gallery Nandi Giri Dham Ready for Cabinet Meeting Today: Police Surveillance Tightened, Public Movement Restricted
ಸಚಿವ ಸಂಪುಟ ಸಭೆಗೆ ಸನ್ನದ್ದಗೊಂಡ ನಂದಿಗಿರಿಧಾಮ: ಪೊಲೀಸ್ ಕಣ್ಗಾವಲು, ಸಾರ್ವಜನಿಕರಿಗೆ ನಿರ್ಬಂಧ
ಕರ್ನಾಟಕ ರಾಜ್ಯದ 14ನೇ ಸಚಿವ ಸಂಪುಟ ಸಭೆ ಇಂದು ಚಿಕ್ಕಬಳ್ಳಾಪುರದ ನಂದಿಗಿರಿಧಾಮದಲ್ಲಿ ನಡೆಯಲಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆಯುವ ಈ ಸಭೆಯಲ್ಲಿ ಬಯಲುಸೀಮೆ ಜಿಲ್ಲೆಗಳ ಅಭಿವೃದ್ಧಿಗೆ ಪ್ರಮುಖ ಯೋಜನೆಗಳನ್ನು ಘೋಷಿಸುವ ನಿರೀಕ್ಷೆಯಿದೆ. ನಂದಿಗಿರಿಧಾಮದಲ್ಲಿ ಸಭೆಗೆ ಅಗತ್ಯ ಸಿದ್ಧತೆಗಳು ಪೂರ್ಣಗೊಂಡಿವೆ.
Updated on: Jul 02, 2025 | 9:02 AM

ರಾಜ್ಯ ಸರ್ಕಾರದ 14ನೇ ಸಚಿವ ಸಂಪುಟ ಸಭೆ ಇಂದು ಚಿಕ್ಕಬಳ್ಳಾಪುರ ತಾಲೂಕಿನ ವಿಶ್ವವಿಖ್ಯಾತ ನಂದಿಗಿರಿಧಾಮದಲ್ಲಿ ನಡೆಯಲಿದೆ. ನಂದಿಬೆಟ್ಟದಲ್ಲಿ ಸಚಿವ ಸಂಪುಟ ಸಭೆಗಾಗಿ ಅಂತಿಮ ಹಂತದ ಸಕಲ ಸಿದ್ದತೆಗಳು ಭರದಿಂದ ಜರುಗಿದ್ದು, ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ ಸಿ ಸುಧಾಕರ್ ಅಧಿಕಾರಿಗಳೊಂದಿಗೆ ಅಂತಿಮ ಹಂತದ ಸಿದ್ದತೆಗಳ ಪರಿಶೀಲನೆ ಮಾಡಿದರು. ಸಿಎಂ-ಡಿಸಿಎಂ ಹಾಗೂ ಸಚಿವ ಸಂಪುಟದ ಸಚಿವರ ಆಗಮನಕ್ಕಾಗಿ ನಂದಿಗಿರಿಧಾಮ ಮದುವಣಗಿತ್ತಿಯಂತೆ ಸಿಂಗಾಡಗೊಂಡಿದೆ.

ಚಿಕ್ಕಬಳ್ಳಾಪುರ ತಾಲೂಕಿನ ವಿಶ್ವವಿಖ್ಯಾತ ಪ್ರವಾಸಿ ತಾಣ ನಂದಿಗಿರಿಧಾಮದಲ್ಲಿ ಇಂದು ಸಚಿವ ಸಂಪುಟ ಸಭೆ ನಡೆಯಲಿದೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಉನ್ನತ ಶಿಕ್ಷಣ ಖಾತೆ ಸಚಿವ ಡಾ.ಎಂ.ಸಿ.ಸುಧಾಕರ್ ಸೇರಿದಂತೆ ಸಚಿವ ಸಂಪುಟದ ಸಹೋದ್ಯಗಿಗಳು ಇಂದು ಬೆಳಿಗ್ಗೆ ಬೆಳಿಗ್ಗೆ 11.40ಕ್ಕೆ ರಸ್ತೆ ಮೂಲಕ ಚಿಕ್ಕಬಳ್ಳಾಪುರ ತಾಲೂಕಿನ ನಂದಿಗ್ರಾಮಕ್ಕೆ ಆಗಮಿಸಿ, ಗ್ರಾಮದಲ್ಲಿರುವ ಶ್ರೀ ಭೋಗನಂದೀಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ.

ದೇವರ ದರ್ಶನ ಪಡೆದ ನಂತರ ದೇವಾಲಯದ ವಸಂತ ಮಂಟಪ, ಪುಷ್ಕರಣಿಯಲ್ಲಿ ಸಚಿವ ಸಂಪುಟದ ಸಹೋದ್ಯಗಿಗಳ ಜೊತೆ ಫೋಟೋ ಶೂಟ್ನಲ್ಲಿ ಭಾಗಿಯಾಗಲಿದ್ದಾರೆ. ನಂತರ 11.50ಕ್ಕೆ ನಂದಿಗ್ರಾಮದಿಂದ ನಂದಿ ಬೆಟ್ಟಕ್ಕೆ ಬಸ್ನಲ್ಲಿ ಪ್ರಯಾಣ ಮಾಡಲಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ನಂದಿಗಿರಿ ಧಾಮಕ್ಕೆ ಭೇಟಿ ನೀಡಿ ಪೂರ್ವ ಸಿದ್ದೆತಗಳ ಪರಿಶೀಲನೆ ಮಾಡಿದರು.

ಇನ್ನೂ ನಂದಿಗಿರಿಧಾಮದಲ್ಲಿ ವಿಶೇಷ ಸಚಿವ ಸಂಪುಟ ಸಭೆ ಹಿನ್ನಲೆ ಗಿರಿಧಾಮದಲ್ಲಿರುವ ಕೆ.ಎಸ್.ಟಿ.ಡಿ.ಸಿ ಹೋಟಲ್ ಮಯೂರ ಸಭಾಂಗಣಕ್ಕೆ ಹೊಸ ಲುಕ್ ನೀಡಲಾಗಿದೆ. ಸಭಾಂಗಣವನ್ನು ನವೀಕರಿಸಿ ಸುಣ್ಣ ಬಣ್ಣ ಬಳಿದು ಹೊಸ ಚೇರ್, ಟೇಬಲ್ಗಳನ್ನು ಇರಿಸಲಾಗಿದೆ. ಲಕ್ಷಾಂತರ ರೂ ಖರ್ಚು ಮಾಡಿ ಸಾಮಾನ್ಯ ಹಾಲ್ ನ್ನು ಹವಾನಿಯಂತ್ರಿತ ಸಭಾಂಗಣವನ್ನಾಗಿ ಪರಿವರ್ತಿಸಲಾಗಿದೆ.

ಸಚಿವರ ವಾಸ್ತವ್ಯ ಹಾಗೂ ವಿಶ್ರಾಂತಿಗೆ ಕೊಠಡಿಗಳನ್ನು 7 ಸ್ಟಾರ್ ಕೊಠಡಿಗಳನ್ನಾಗಿ ಆಧುನೀಕರಣಗೊಳಿಸಲಾಗಿದೆ. ಮತ್ತೊಂದೆಡೆ ಪೊಲಿಸರು ಭೋಗನಂದೀಶ್ವರ ದೇವಸ್ಥಾನ ಹಾಗೂ ನಂದಿಗಿರಿಧಾಮದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದಾರೆ.

ಇನ್ನೂ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಸೇರಿದಂತೆ ಬಯಲು ಸೀಮೆ ಜಿಲ್ಲೆಗಳಿಗೆ ಭರಪೂರ ಕೊಡುಗೆ ಘೋಷಣೆ ಮಾಡುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಸಚಿವ ಸಂಪುಟ ಸಭೆ ಹಿನ್ನಲ್ಲೆ ನಂದಿಗಿರಿಧಾಮ, ಸ್ಕಂದಗಿರಿಧಾಮಕ್ಕೆ ಇಂದಿನಿಂದ ನಾಳೆ ಬೆಳಗ್ಗೆ 6ರವರೆಗೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಆದೇಶ ಹೊರಡಿಸಿದ್ದಾರೆ. ಭದ್ರತಾ ದೃಷ್ಟಿಯಿಂದ ನಂದಿಗಿರಿಧಾಮ ಮತ್ತು ಸ್ಕಂದಗಿರಿಧಾಮಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ.




