- Kannada News Photo gallery PM Modi Meets Delhi Car Blast Victims At LNJP Hospital After Returning From Bhutan
ಆಸ್ಪತ್ರೆಗೆ ತೆರಳಿ ದೆಹಲಿ ಸ್ಫೋಟದ ಗಾಯಾಳುಗಳನ್ನು ಭೇಟಿಯಾದ ಪ್ರಧಾನಿ ಮೋದಿ
ದೆಹಲಿಯ ಲೋಕ ನಾಯಕ್ ಜೈ ಪ್ರಕಾಶ್ (ಎಲ್‌ಎನ್‌ಜೆಪಿ) ಆಸ್ಪತ್ರೆಗೆ ತೆರಳಿ ಕೆಂಪು ಕೋಟೆ ಬಳಿಯ ಕಾರು ಸ್ಫೋಟದ ಸಂತ್ರಸ್ತರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿದ್ದಾರೆ. ಭೂತಾನ್ ಪ್ರವಾಸಕ್ಕೆ ತೆರಳಿದ್ದ ಮೋದಿ ಇಂದು ದೆಹಲಿಗೆ ವಾಪಾಸ್ ಬರುತ್ತಿದ್ದಂತೆ ಆಸ್ಪತ್ರೆಗೆ ತೆರಳಿ ಗಾಯಾಳುಗಳನ್ನು ಭೇಟಿಯಾಗಿದ್ದಾರೆ. ಕೆಂಪು ಕೋಟೆ ಬಳಿಯ ಮೆಟ್ರೋ ನಿಲ್ದಾಣದ ಬಳಿ ಸೋಮವಾರ ಸಂಭವಿಸಿತ್ತು. ಈ ಘಟನೆಯಲ್ಲಿ 10 ಜನರು ಮೃತಪಟ್ಟಿದ್ದಾರೆ.
Updated on:Nov 12, 2025 | 5:34 PM

ಭೂತಾನ್‌ಗೆ 2 ದಿನಗಳ ಪ್ರವಾಸಕ್ಕೆ ತೆರಳಿದ್ದ ಪ್ರಧಾನಿ ಮೋದಿ ಇಂದು ದೆಹಲಿಯಲ್ಲಿ ಇಳಿದ ನಂತರ ನೇರವಾಗಿ ಎಲ್‌ಎನ್‌ಜೆಪಿ ಆಸ್ಪತ್ರೆಗೆ ಹೋಗಿದ್ದಾರೆ. ಪ್ರಧಾನಿ ಮೋದಿ ಅಲ್ಲಿದ್ದ ಎಲ್ಲ ಗಾಯಾಳುಗಳನ್ನು ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಧಾನಿ ಮೋದಿ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಆಸ್ಪತ್ರೆಯ ಅಧಿಕಾರಿಗಳು ಮತ್ತು ವೈದ್ಯರು ಸಹ ಗಾಯಾಳುಗಳ ಆರೋಗ್ಯ ಸ್ಥಿತಿಯ ಬಗ್ಗೆ ಮೋದಿಯವರಿಗೆ ಮಾಹಿತಿ ನೀಡಿದರು. ಈ ಹಿಂದೆ ಅಮಿತ್ ಶಾ ಕೂಡ ಆಸ್ಪತ್ರೆಯಲ್ಲಿ ಗಾಯಾಳುಗಳನ್ನು ಭೇಟಿಯಾಗಿದ್ದರು.

ಸೋಮವಾರ ಸಂಜೆ ಕೆಂಪು ಕೋಟೆ ಪ್ರದೇಶವನ್ನು ಬೆಚ್ಚಿಬೀಳಿಸಿದ ದಾಳಿಗೆ ಕಾರಣರಾದವರನ್ನು ಪತ್ತೆಹಚ್ಚಲು ಸರ್ಕಾರ ಪ್ರತಿಜ್ಞೆ ಮಾಡಿದೆ. ದೆಹಲಿಯಲ್ಲಿ ಬಿಳಿ ಹುಂಡೈ ಐ20 ಕಾರಿನಲ್ಲಿ ಸಂಭವಿಸಿದ ಪ್ರಬಲ ಸ್ಫೋಟದ ಸಾವಿನ ಸಂಖ್ಯೆ 10ಕ್ಕೆ ಏರಿದೆ.

ಸ್ಫೋಟಗೊಂಡ ಕಾರನ್ನು ಚಲಾಯಿಸಿದ್ದ ಡಾ. ಉಮರ್ ಉನ್ ನಬಿ ಅವರ ಪೋಷಕರ ಡಿಎನ್‌ಎಯನ್ನು ವಿಧಿವಿಜ್ಞಾನ ತಂಡಗಳು ಸಂಗ್ರಹಿಸಿ ಪರಿಶೀಲನೆಗಾಗಿ ಏಮ್ಸ್ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇದರಿಂದ ಆ ಕಾರಿನಲ್ಲಿದ್ದುದು ಯಾರೆಂಬುದರ ನಿಖರ ಮಾಹಿತಿ ಲಭ್ಯವಾಗಲಿದೆ ಎಂದು ಮೂಲಗಳು ದೃಢಪಡಿಸಿವೆ.

ಪ್ರಾಥಮಿಕ ಮರಣೋತ್ತರ ಪರೀಕ್ಷೆಯ ಸಂಶೋಧನೆಗಳು ಮೂಳೆ ಮುರಿತ, ತಲೆಗೆ ಗಾಯ ಮತ್ತು ಶ್ವಾಸಕೋಶ ಮತ್ತು ಕರುಳು ಛಿದ್ರಗೊಂಡಿರುವುದು ಸೇರಿದಂತೆ ದೇಹದ ಮೇಲ್ಭಾಗದ ತೀವ್ರವಾದ ಗಾಯಗಳನ್ನು ಬಹಿರಂಗಪಡಿಸಿವೆ. ಇವೆಲ್ಲವೂ ಹೆಚ್ಚಿನ ತೀವ್ರತೆಯ ಸ್ಫೋಟದ ಪರಿಣಾಮದಿಂದ ಆಗಿದೆ.

ಉಮರ್ ಅವರ ಕಾರು ದೆಹಲಿಗೆ ಪ್ರವೇಶಿಸುವ ಮೊದಲು ಮುಂಬೈ ಎಕ್ಸ್‌ಪ್ರೆಸ್‌ವೇ ಮತ್ತು ಕುಂಡ್ಲಿ-ಮನೇಸರ್-ಪಲ್ವಾಲ್ (ಕೆಎಂಪಿ) ಎಕ್ಸ್‌ಪ್ರೆಸ್‌ವೇಯಲ್ಲಿ ಪತ್ತೆಯಾಗಿದೆ ಎಂದು ತನಿಖೆಗಳು ಬಹಿರಂಗಪಡಿಸಿವೆ. ಅದರೊಂದಿಗೆ ಬಂದಿರಬಹುದಾದ ಇತರೆ ವಾಹನಗಳನ್ನು ಗುರುತಿಸಲು ಭದ್ರತಾ ಸಂಸ್ಥೆಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿವೆ.

ಈ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕೈಗೆತ್ತಿಕೊಂಡಿದೆ. ಎನ್‌ಐಎ, ದೆಹಲಿ ಪೊಲೀಸ್ ವಿಶೇಷ ಕೋಶ ಮತ್ತು ರಾಜ್ಯ ಭಯೋತ್ಪಾದನಾ ನಿಗ್ರಹ ಘಟಕಗಳು ಸೇರಿದಂತೆ ಬಹು ಸಂಸ್ಥೆಗಳು ದೆಹಲಿ-ಎನ್‌ಸಿಆರ್, ಜಮ್ಮು ಮತ್ತು ಕಾಶ್ಮೀರ, ಹರಿಯಾಣ ಮತ್ತು ಉತ್ತರ ಪ್ರದೇಶದಾದ್ಯಂತ ದಾಳಿ ನಡೆಸುತ್ತಿವೆ.
Published On - 4:34 pm, Wed, 12 November 25




