Updated on: Feb 02, 2023 | 3:33 PM
ನಮ್ಮ ದೇಹಕ್ಕೆ ನೀರು ಬಹಳ ಅಗತ್ಯವಾದುದು. ನೀರು ನಮ್ಮ ದೇಹದ ಅಂಗಗಳನ್ನು ಹೈಡ್ರೀಕರಿಸಿ, ಚಾಲನೆಯಲ್ಲಿರುವಂತೆ ನೋಡಿಕೊಳ್ಳುತ್ತದೆ. ಹಾಗೇ, ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಅದರಲ್ಲೂ ಗರ್ಭಾವಸ್ಥೆಯಲ್ಲಿ ದೇಹದಲ್ಲಿ ನೀರಿನಂಶವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ.
Pregnant Health: Check 7 immunity boosters every expecting mother should have Pregnancy Care
ನೀರು ಗರ್ಭಿಣಿ ಮಹಿಳೆಯ ಜೀವಕೋಶಗಳು, ಅಂಗಾಂಶಗಳು ಮತ್ತು ಅಂಗಗಳಿಗೆ ಮತ್ತು ಮಗುವಿಗೆ ಆಮ್ಲಜನಕ ಮತ್ತು ಅಗತ್ಯವಾದ ಪೋಷಕಾಂಶಗಳನ್ನು ಪೂರೈಸುತ್ತದೆ. ಎಲ್ಲಾ ಪ್ರಸವಪೂರ್ವ ಜೀವಸತ್ವಗಳನ್ನು ನೀರಿನ ಮೂಲಕ ಮಗುವಿಗೆ ಸಾಗಿಸಬೇಕು.
ಮಗು ಆರೋಗ್ಯವಾಗಿ ಬೆಳೆಯಬೇಕೆಂದರೆ ಅದರ ಸುತ್ತಲೂ ಇರುವ ಆಮ್ನಿಯೋಟಿಕ್ ದ್ರವ ಬಹಳ ಮುಖ್ಯ. ಗರ್ಭಿಣಿಯರು ಹೆಚ್ಚು ನೀರು ಕುಡಿದಷ್ಟೂ ಆಮ್ನಿಯೋಟಿಕ್ ದ್ರವ ರೀಸೈಕಲ್ ಆಗುತ್ತದೆ. ಅದರಲ್ಲೂ 7 ತಿಂಗಳಾದ ಬಳಿಕ ಗರ್ಭದಲ್ಲಿರುವ ಮಗು ಮೂತ್ರ ವಿಸರ್ಜನೆ ಮಾಡಲು ಕಲಿಯುತ್ತದೆ. ತಾನು ವಿಸರ್ಜಿಸಿದ ಮೂತ್ರವನ್ನು ಮಗು ಮತ್ತೆ ತಾನೇ ಕುಡಿಯುತ್ತದೆ. ಹೀಗಾಗಿ, ಹೆಚ್ಚು ನೀರು ಕುಡಿದು, ತಾಯಿ ಮೂತ್ರ ವಿಸರ್ಜನೆ ಮಾಡಿದಷ್ಟೂ ಮಗುವಿನ ಸುತ್ತಲೂ ಇರುವ ಆಮ್ನಿಯೋಟಿಕ್ ದ್ರವ ಮತ್ತೆ ಹೊಸತಾಗಿ ಶೇಖರಣೆ ಆಗುತ್ತದೆ. ಇಲ್ಲವಾದರೆ, ಹಳೇ ದ್ರವವೇ ಸರ್ಕ್ಯುಲೇಟ್ ಆಗುತ್ತಿರುತ್ತದೆ.
ನೀರು ದೇಹದೊಳಗೆ ಹೆಚ್ಚು ರಕ್ತವನ್ನು ತಯಾರಿಸಲು, ಹೊಸ ಅಂಗಾಂಶವನ್ನು ಅಭಿವೃದ್ಧಿಪಡಿಸಲು, ಪೋಷಕಾಂಶಗಳನ್ನು ಸಾಗಿಸಲು, ಜೀರ್ಣಕ್ರಿಯೆಯನ್ನು ಸುಧಾರಿಸಲು, ತ್ಯಾಜ್ಯ ಮತ್ತು ವಿಷವನ್ನು ಹೊರಹಾಕಲು ಸಹಾಯ ಮಾಡುವುದರಿಂದ ಗರ್ಭಿಣಿಯರಿಗೆ ಇತರರಿಗಿಂತ ಹೆಚ್ಚಿನ ನೀರಿನ ಅಗತ್ಯವಿರುತ್ತದೆ.
ಗರ್ಭಾವಸ್ಥೆಯಲ್ಲಿ ನೀರು ನಿಮ್ಮ ದೇಹವನ್ನು ಹೈಡ್ರೀಕರಿಸುತ್ತದೆ. ದೇಹವು ಹೈಡ್ರೀಕರಿಸದಿದ್ದರೆ ಸೆಳೆತ, ತಲೆನೋವು, ವಾಕರಿಕೆ ಮತ್ತು ಇತರ ಲಕ್ಷಣಗಳು ಕಂಡುಬರಬಹುದು. ಗರ್ಭಿಣಿಯರಲ್ಲಿ ಸಾಮಾನ್ಯವಾದ ಕಾಯಿಲೆಯಾದ ಮಲಬದ್ಧತೆಯನ್ನು ತಪ್ಪಿಸಲು ಪ್ರತಿದಿನ ನೀರನ್ನು ಕುಡಿಯಲೇಬೇಕು.
ಗರ್ಭಾವಸ್ಥೆಯಲ್ಲಿ ನಿರ್ಜಲೀಕರಣದಿಂದ ಆಮ್ನಿಯೋಟಿಕ್ ದ್ರವದ ಕೊರತೆ, ಅಸಮರ್ಪಕ ಎದೆ ಹಾಲು ಉತ್ಪಾದನೆ ಮತ್ತು ಅವಧಿಗೂ ಮೊದಲೇ ಹೆರಿಗೆಯಾಗುವ ಅಪಾಯಗಳು ಎದುರಾಗಬಹುದು. ನಿಮ್ಮ ಮಗುವಿಗೆ ನೀರು ಮತ್ತು ಪೌಷ್ಟಿಕಾಂಶದ ಕೊರತೆಯಿಂದಾಗಿ ಜನ್ಮ ದೋಷಗಳಿಗೆ ಕಾರಣವಾಗಬಹುದು.
ಆಮ್ನಿಯೋಟಿಕ್ ದ್ರವವು ಗರ್ಭಾವಸ್ಥೆಯಲ್ಲಿ ನಿಮ್ಮ ಮಗುವನ್ನು ಗರ್ಭಾಶಯದಲ್ಲಿ ಸುತ್ತುವರೆದಿರುವ ಸ್ಪಷ್ಟ ದ್ರವವಾಗಿದೆ. ಈ ದ್ರವವು ಮಗುವನ್ನು ಗಾಯದಿಂದ ರಕ್ಷಿಸುವ ಕುಶನ್ ಅನ್ನು ಒದಗಿಸುತ್ತದೆ. ಇದು ಮಗುವಿನ ಬೆಳವಣಿಗೆ, ಚಲನೆಗೆ ಅವಕಾಶ ನೀಡುತ್ತದೆ. ಆಮ್ನಿಯೋಟಿಕ್ ದ್ರವವು ಹೊಕ್ಕುಳಬಳ್ಳಿಯನ್ನು ಮಗು ಮತ್ತು ಗರ್ಭಾಶಯದ ಗೋಡೆಯ ನಡುವೆ ಹಿಂಡದಂತೆ ತಡೆಯುತ್ತದೆ.
ಗರ್ಭಿಣಿಯರು ನೀರು ಕುಡಿಯುವುದು ಕಡಿಮೆಯಾದರೆ ಉರಿಮೂತ್ರ, ಯೂರಿನ್ ಇನ್ಫೆಕ್ಷನ್ನಂತಹ ಸಮಸ್ಯೆಗಳನ್ನು ಕೂಡ ಎದುರಿಸಬೇಕಾಗುತ್ತದೆ. ಇದರಿಂದ ಹೊಟ್ಟೆನೋವು, ಮೂತ್ರದ ಸೋಂಕು ಹೆಚ್ಚಾಗಿ ಬೇರೆ ಸಮಸ್ಯೆಗಳು ತಲೆದೋರಬಹುದು.