2024 ರ ಪ್ಯಾರಿಸ್ ಒಲಿಂಪಿಕ್ಸ್ ಮುಗಿದಿರಬಹುದು. ಆದರೆ ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಅವರ ಅನರ್ಹ ಪ್ರಕರಣ ಈಗಲೂ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ವಿನೇಶ್ ಅವರ ಮೇಲ್ಮನವಿಗೆ ಸಂಬಂಧಿಸಿದಂತೆ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ನಾಳೆ ಅಂದರೆ ಆಗಸ್ಟ್ 13 ರಂದು ತೀರ್ಪು ನೀಡಲಿದೆ ಎಂದು ಹೇಳಲಾಗುತ್ತಿದೆ.
ಈ ನಡುವೆ ಒಂದೇ ರಾತ್ರಿಯಲ್ಲಿ ವಿನೇಶ್ ಫೋಗಟ್ ಅವರ ತೂಕ 2 ಕೆಜಿ ಹೆಚ್ಚಾಗಲು ಹೇಗೆ ಸಾಧ್ಯ ಎಂದು ದೇಶದಲ್ಲಿ ಚರ್ಚೆ ನಡೆಯುತ್ತಿದೆ. ಇದರ ಹಿಂದೆ ಭಾರಿ ಪಿತೂರಿ ನಡೆದಿದೆ ಎಂದು ಕೆಲವರು ವಾದಿಸುತ್ತಿದ್ದರೆ, ಇನ್ನು ಕೆಲವರು ವಿನೇಶ್ ಮೇಲೆಯೇ ಬೊಟ್ಟು ಮಾಡುತ್ತಿದ್ದಾರೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಒಲಿಂಪಿಕ್ಸ್ ಸಂಸ್ಥೆ ತನ್ನ ಅಧಿಕೃತ ಹೇಳಿಕೆಯನ್ನು ನೀಡಿದೆ.
ವಾಸ್ತವವಾಗಿ ಕುಸ್ತಿ, ಬಾಕ್ಸಿಂಗ್ ಮತ್ತು ಜೂಡೋದಂತಹ ಕ್ರೀಡೆಗಳಲ್ಲಿ ಸ್ಪರ್ಧಿಗಳು ತನ್ನ ತೂಕವನ್ನು ನಿಗದಿಗಿಂತ ಹೆಚ್ಚಿಸಿಕೊಳ್ಳಲು ಐಒಎ ವೈದ್ಯಕೀಯ ತಂಡ ಕಾರಣ ಎಂಬುದು ಹಲವರ ವಾದವಾಗಿದೆ. ಅದರಲ್ಲೂ ಐಒಎ ವೈದ್ಯಕೀಯ ತಂಡದ ಮುಖ್ಯ ವೈದ್ಯಕೀಯ ಅಧಿಕಾರಿ ಡಾ.ದಿನ್ಶಾ ಪರ್ದಿವಾಲಾ ಅವರ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ.
ಇದೀಗ ಈ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿರುವ ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ (ಐಒಎ) ಅಧ್ಯಕ್ಷೆ ಪಿಟಿ ಉಷಾ ಅವರು, ವಿನೇಶ್ ಫೋಗಟ್ ಕಡೆಗೆ ಬೆರಳು ತೋರಿಸಿದ್ದಾರೆ. ಅಥ್ಲೀಟ್‌ಗಳು ಸ್ಪರ್ಧೆಗೆ ಬೇಕಾದ ತೂಕವನ್ನು ಕಾಪಾಡಿಕೊಳ್ಳುವುದು ಅಥ್ಲೀಟ್ ಮತ್ತು ಅವರ ತರಬೇತುದಾರರ ಜವಾಬ್ದಾರಿಯೇ ಹೊರತು ಐಒಎ ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ದಿನ್ಶಾ ಪರ್ದಿವಾಲಾ ಮತ್ತು ಅವರ ತಂಡವಲ್ಲ.
ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ ವೈದ್ಯಕೀಯ ತಂಡ, ವಿಶೇಷವಾಗಿ ಡಾ. ಪಾರ್ದಿವಾಲಾ ವಿರುದ್ಧ ಟೀಕಾ ಪ್ರಹಾರ ನಡೆಸುವುದು ಸ್ವೀಕಾರಾರ್ಹವಲ್ಲ. ಯಾವುದೇ ತೀರ್ಮಾನಕ್ಕೆ ಬರುವ ಮೊದಲು ಎಲ್ಲಾ ಸಂಗತಿಗಳನ್ನು ಪರಿಗಣಿಸಬೇಕು.
ಐಒಎ ನೇಮಿಸಿದ ಮುಖ್ಯ ವೈದ್ಯಕೀಯ ಅಧಿಕಾರಿ ಡಾ.ದಿನ್ಶಾ ಪರ್ದಿವಾಲಾ ಮತ್ತು ಅವರ ತಂಡವನ್ನು ಒಲಿಂಪಿಕ್ಸ್ ಆರಂಭಕ್ಕೆ ಕೆಲವು ತಿಂಗಳು ಬಾಕಿ ಇರುವಾಗ ನೇಮಿಸಲಾಗಿತ್ತು. ಈವೆಂಟ್‌ನ ಸಮಯದಲ್ಲಿ ಯಾರಾದರೂ ಅಥ್ಲೀಟ್‌ಗಳು ಗಾಯಗೊಂಡರೆ ಅವರಿಗೆ ಚಿಕಿತ್ಸೆ ನೀಡುವ ಮತ್ತು ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಕ್ರೀಡಾಪಟುಗಳಿಗೆ ಸಹಾಯ ಮಾಡುವುದು ಈ ತಂಡದ ಕೆಲಸವಾಗಿತ್ತು.
ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬ ಭಾರತೀಯ ಅಥ್ಲೀಟ್ಗೆ ತನ್ನದೇ ಆದ ಸಹಾಯಕ ಸಿಬ್ಬಂದಿಗಳನ್ನು ನೇಮಿಸಲಾಗಿತ್ತು. ಈ ಸಹಾಯಕ ಸಿಬ್ಬಂದಿ ತಂಡವಗಳೇ ಹಲವು ವರ್ಷಗಳಿಂದ ಕ್ರೀಡಾಪಟುಗಳೊಂದಿಗೆ ಕೆಲಸ ಮಾಡುತ್ತಿವೆ. ಹೀಗಾಗಿ ಅಥ್ಲೀಟ್‌ಗಳು ತೂಕವನ್ನು ನಿಗದಿಗೆ ತಕ್ಕಂತೆ ಕಾಪಾಡಿಕೊಳ್ಳದಿರಲು ಐಒಎ ನೇಮಿಸಿದ ಮುಖ್ಯ ವೈದ್ಯಕೀಯ ತಂಡ ಕಾರಣವಲ್ಲ ಎಂಬುದನ್ನು ಪಿಟಿ ಉಷಾ ಸ್ಪಷ್ಟಪಡಿಸಿದ್ದಾರೆ.
Published On - 4:37 pm, Mon, 12 August 24