- Kannada News Photo gallery PV Sindhu knocked out of World Championships lakshya sen advanced to the next round
Badminton: ವಿಶ್ವ ಚಾಂಪಿಯನ್‌ಶಿಪ್‌ನಿಂದ ಪಿವಿ ಸಿಂಧು ಔಟ್! ಮೂರನೇ ಸುತ್ತಿಗೆ ಲಕ್ಷ್ಯ ಸೇನ್
World Championship: ಈ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಅತ್ಯಂತ ಯಶಸ್ವಿ ಆಟಗಾರ್ತಿಯಾಗಿರುವ ಸಿಂಧು ಈ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ತಲುಪದೇ ಇರುವುದು ಇದೇ ಮೊದಲು. 2019ರಲ್ಲಿ ಈ ಪ್ರಶಸ್ತಿ ಗೆದ್ದಿದ್ದ ಸಿಂಧು, ಈ ಚಾಂಪಿಯನ್‌ಶಿಪ್‌ನಲ್ಲಿ ಒಟ್ಟು ಐದು ಪದಕಗಳನ್ನು ಗೆದ್ದಿದ್ದಾರೆ.
Updated on: Aug 23, 2023 | 9:34 AM

ಇತ್ತಿಚಿನ ದಿನಗಳಲ್ಲಿ ಕಳಪೆ ಫಾರ್ಮ್ನಿಂದ ಬಳಲುತ್ತಿರುವ ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಭಾರತದ ಸ್ಟಾರ್ ಮಹಿಳಾ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ವಿಶ್ವ ಚಾಂಪಿಯನ್‌ಶಿಪ್‌ನ ಎರಡನೇ ಸುತ್ತಿನಲ್ಲಿ ಸೋತು ಟೂರ್ನಿಯಿಂದ ಹೊರಬಿದಿದ್ದಾರೆ.

ವಿಶ್ವ ಚಾಂಪಿಯನ್‌ಶಿಪ್‌ನ ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದ ಸಿಂಧು, ಎರಡನೇ ಸುತ್ತಿನಲ್ಲಿ ಜಪಾನ್‌ನ ನಜೋಮಿ ಒಕುಹರಾ ವಿರುದ್ಧ 21-14, 21-14 ನೇರ ಗೇಮ್‌ಗಳಿಂದ ಸೋತು ಟೂರ್ನಿಯಿಂದ ಹೊರ ನಡೆದಿದ್ದಾರೆ.

ಈ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಅತ್ಯಂತ ಯಶಸ್ವಿ ಆಟಗಾರ್ತಿಯಾಗಿರುವ ಸಿಂಧು ಈ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ತಲುಪದೇ ಇರುವುದು ಇದೇ ಮೊದಲು. 2019ರಲ್ಲಿ ಈ ಪ್ರಶಸ್ತಿ ಗೆದ್ದಿದ್ದ ಸಿಂಧು, ಈ ಚಾಂಪಿಯನ್‌ಶಿಪ್‌ನಲ್ಲಿ ಒಟ್ಟು ಐದು ಪದಕಗಳನ್ನು ಗೆದ್ದಿದ್ದಾರೆ.

ಸಿಂಧು ಮತ್ತು ಒಕುಹರಾ ಮೂರು ವರ್ಷಗಳ ನಂತರ ಪರಸ್ಪರ ಮುಖಾಮುಖಿಯಾಗಿದ್ದರು. ಒಕುಹರಾ ನಿಧಾನವಾಗಿ ಪ್ರಾರಂಭಿಸಿ ಆ ನಂತರ ವೇಗವನ್ನು ಹೆಚ್ಚಿಸಿದರು. ಮೊದಲ ಗೇಮ್‌ನಲ್ಲಿ ಸ್ಕೋರ್ 6-6 ರಲ್ಲಿ ಸಮನಾಗಿತ್ತು. ಆದರೆ ವಿರಾಮದ ವೇಳಗೆ ಒಕುಹರಾ 11-9 ಮುನ್ನಡೆ ಕಾಯ್ದುಕೊಂಡರು. ವಿರಾಮದ ನಂತರವೂ ಪ್ರಾಬಲ್ಯ ಮೆರೆದ ಒಕುಹರಾ 16-12 ರಿಂದ ಮುನ್ನಡೆ ಸಾಧಿಸಿದರು.

ಹೀಗಾಗಿ ಮೊದಲ ಗೇಮ್ ಸೋತ ಸಿಂಧು, ಎರಡನೇ ಗೇಮ್‌ನಲ್ಲಿ ಉತ್ತಮ ಆರಂಭ ಪಡೆದು 9-0 ಮುನ್ನಡೆ ಸಾಧಿಸಿದರು. ಆದರೆ ನಂತರ ಒಕುಹರಾ ಪುನರಾಗಮನ ಮಾಡಿದರು. ಆದರೆ ವಿರಾಮದ ವೇಳೆಗೆ ಸಿಂಧು 11-9 ರ ಮುನ್ನಡೆ ಕಾಯ್ದುಕೊಂಡರು. ವಿರಾಮದ ನಂತರ ಪುನರಾಗಮನ ಮಾಡಿದ ಒಕುಹರಾ ಸಿಂಧು ಮಾಡಿದ ತಪ್ಪುಗಳ ಲಾಭ ಪಡೆದು ಗೇಮ್ ಜೊತೆಗೆ ಪಂದ್ಯವನ್ನೂ ಗೆದ್ದರು.

ಯುವ ತಾರೆ ಲಕ್ಷ್ಯ ಸೇನ್ ಪುರುಷರ ಸಿಂಗಲ್ಸ್‌ನ ಮೂರನೇ ಸುತ್ತಿಗೆ ಲಗ್ಗೆ ಇಟ್ಟಿರುವುದು ಭಾರತಕ್ಕೆ ಸಮಾಧಾನದ ಸಂಗತಿಯಾಗಿದೆ. 2021ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಲಕ್ಷ್ಯ, ಈ ಆವೃತ್ತಿಯ ಎರಡನೇ ಸುತ್ತಿನಲ್ಲಿ ವಿಶ್ವದ 51ನೇ ಶ್ರೇಯಾಂಕದ ಕೊರಿಯಾದ ಜಿಯೋನ್ ಹ್ಯೊಕ್ ಜಿನ್ ಅವರನ್ನು 21-11 21-12 ಸೆಟ್‌ಗಳಿಂದ ಸೋಲಿಸಿದರು.

ಈ ಗೆಲುವಿನೊಂದಿಗೆ ಲಕ್ಷ್ಯ ಏಷ್ಯಾ ಟೀಮ್ ಚಾಂಪಿಯನ್‌ಶಿಪ್-2022ರ ಸೋಲಿಗೆ ಸೇಡು ತೀರಿಸಿಕೊಂಡಿದ್ದಾರೆ. ಇದೀಗ ಲಕ್ಷ್ಯ ಮುಂದಿನ ಸುತ್ತಿನಲ್ಲಿ ಥಾಯ್ಲೆಂಡ್‌ನ ಕುನ್ಲಾವುಟ್ ವಿಟಿಡ್ಸರ್ನ್ ಅವರನ್ನು ಎದುರಿಸುವ ಸಾಧ್ಯತೆಗಳಿವೆ.




