
ರಾಘವೇದ್ರ ರಾಜ್‌ಕುಮಾರ್ ಅವರು ‘13’ ಸಿನಿಮಾದಲ್ಲಿ ಗುಜರಿ ಅಂಗಡಿ ಮಾಲೀಕ ಮೋಹನ್ ಕುಮಾರ್ ಎಂಬ ಪಾತ್ರ ಮಾಡಿದ್ದಾರೆ. ಅವರ ಜೊತೆ ಹಿರಿಯ ನಟಿ ಶ್ರುತಿ ಅವರು ಸಾಯಿರಾ ಭಾನು ಎಂಬ ಮುಸ್ಲಿಂ ಮಹಿಳೆಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾದ ಪಾತ್ರವರ್ಗದಲ್ಲಿ ಖ್ಯಾತ ನಟ ಪ್ರಮೋದ್ ಶೆಟ್ಟಿ ಕೂಡ ಇದ್ದಾರೆ. ಅವರು ಪೊಲೀಸ್ ಅಧಿಕಾರಿಯ ಪಾತ್ರವನ್ನು ಮಾಡಿದ್ದಾರೆ.

‘ಪಲ್ಲಕ್ಕಿ’ ಸಿನಿಮಾ ಖ್ಯಾತಿಯ ನಿರ್ದೇಶಕ ನರೇಂದ್ರ ಬಾಬು ಅವರ ‘13’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾಗೆ ಅವರೇ ಕಥೆ, ಚಿತ್ರಕಥೆ ಬರೆದಿದ್ದಾರೆ. ಸಮಾಜಸೇವಕ ಅನಿಲ್ ಕುಮಾರ್ ಅವರು ಅರ್ಪಿಸುವ ಈ ಸಿನಿಮಾವನ್ನು ‘ಯುವಿ ಪ್ರೊಡಕ್ಷನ್ಸ್’ ಬ್ಯಾನರ್ ಮೂಲಕ ಮಂಜುನಾಥ್ ಗೌಡ, ಕೆ. ಸಂಪತ್ ಕುಮಾರ್, ಹೆಚ್.ಎಸ್. ಮಂಜುನಾಥ್ ಮತ್ತು ಸಿ. ಕೇಶವಮೂರ್ತಿಅವರು ನಿರ್ಮಿಸಿದ್ದಾರೆ.

ಹಿಂದೂ-ಮುಸ್ಲಿಂ ಎಂಬ ತಾರತಮ್ಯ ಇಲ್ಲದೇ ನಾಯಕ ಮತ್ತು ನಾಯಕಿ ಗಂಡ-ಹೆಂಡತಿ ಆಗಿ ಅನ್ಯೋನ್ಯವಾಗಿ ಬದುಕು ನಡೆಸುತ್ತಿರುವಾಗ ಒಂದು ಘಟನೆ ನಡೆಯುತ್ತದೆ. ಅವರ ಜೀವನದಲ್ಲಿ ಅನೇಕ ತಿರುವುಗಳು ಎದರಾಗುತ್ತವೆ. ಅದು ಅಂತಿಮವಾಗಿ ಅವರನ್ನು ಯಾವ ಹಂತಕ್ಕೆ ಕರೆದುಕೊಂಡು ಹೋಗುತ್ತದೆ ಎಂಬುದು ‘13’ ಸಿನಿಮಾದ ಕಥಾಸಾರಾಂಶ.

‘13’ ಸಿನಿಮಾದ ಹಾಡುಗಳು ಮತ್ತು ಟ್ರೇಲರ್ ಈಗಾಗಲೇ ವೈರಲ್ ಆಗಿದೆ. ಸಿನಿಪ್ರಿಯರಿಗೆ ಇದು ಇಷ್ಟವಾಗಿದೆ. ಸಿನಿಮಾದಲ್ಲಿ ಐಟಂ ಸಾಂಗ್, ಮದ್ಯಪಾನದ ದೃಶ್ಯಗಳು ಇರುವುದರಿಂದ ಈ ಚಿತ್ರಕ್ಕೆ ‘ಯು/ಎ’ ಪ್ರಮಾಣ ಪತ್ರ ಸಿಕ್ಕಿದೆ. ಯಾವುದೇ ಕಟ್ಸ್ ನೀಡಿಲ್ಲ. ಈ ಸಿನಿಮಾಗೆ ಶೋಗನ್‌ಬಾಬು ಸಂಗೀತ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಮೂರು ಹಾಡುಗಳಿವೆ.

ಅಜಯ್ ಮಂಜು ಅವರು ‘13’ ಸಿನಿಮಾಗೆ ಛಾಯಾಗ್ರಹಣ ಮಾಡಿದ್ದಾರೆ. ಗಿರೀಶ್ ಕುಮಾರ್ ಅವರ ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ.ಮದನ್ ಹರಿಣಿ, ಶಶಿಕುಮಾರ್ ಅವರು ಡ್ಯಾನ್ಸ್ ಕೊರಿಯೋಗ್ರಫಿ ಮಾಡಿದ್ದಾರೆ. ಜಯಸಿಂಹ ಅವರು ಸಂಭಾಷಣೆ ಬರೆದಿದ್ದಾರೆ. ‘ಕಾಮಿಡಿ ಕಿಲಾಡಿಗಳು’ ಲೋಕೇಶ್, ವಿನಯ ಸೂರ್ಯ, ದಿಲೀಪ್ ಪೈ ಮುಂತಾದವರು ಅಭಿನಯಿಸಿದ್ದಾರೆ. ಜಾಕ್ ಮಂಜು ಅವರ ‘ಶಾಲಿನಿ ಎಂಟರ್ಪ್ರೈಸಸ್’ ಮೂಲಕ ಚಿತ್ರ ಬಿಡುಗಡೆ ಆಗುತ್ತಿದೆ.