ಸ್ಯಾಂಡಲ್ವುಡ್ನ ಖ್ಯಾತ ನಟಿ ರಾಗಿಣಿ ದ್ವಿವೇದಿ ಅವರು ಹೊಸ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾಗೆ ‘ಶೀಲ’ ಎಂದು ಹೆಸರು ಇಡಲಾಗಿದೆ. ಇದಲ್ಲದೇ ಇನ್ನೂ ಹಲವು ಪ್ರಾಜೆಕ್ಟ್ಗಳಲ್ಲಿ ರಾಗಿಣಿ ಅವರು ಬ್ಯುಸಿ ಆಗಿದ್ದಾರೆ.
ರಾಗಿಣಿ ದ್ವಿವೇದಿ ಅಭಿನಯದ ‘ಶೀಲ’ ಚಿತ್ರವು ಕನ್ನಡ, ಮಲಯಾಳಂ ಸೇರಿದಂತೆ ಬಹುಭಾಷೆಯಲ್ಲಿ ಮೂಡಿಬರುತ್ತಿದೆ. ಇದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಇದರ ಫಸ್ಟ್ ಲುಕ್ ಕೂಡ ಬಿಡುಗಡೆ ಆಗಿದೆ.
ಸಸ್ಪೆನ್ಸ್-ಥ್ರಿಲ್ಲರ್ ಶೈಲಿಯಲ್ಲಿ ‘ಶೀಲ’ ಸಿನಿಮಾ ಮೂಡಿಬರುತ್ತಿದೆ. ಇದು ಮಹಿಳಾ ಪ್ರಧಾನ ಚಿತ್ರ ಎಂಬುದು ವಿಶೇಷ. ಡಿ.ಎಂ. ಪಿಳ್ಳೆ ಅವರು ನಿರ್ಮಾಣ ಮಾಡುತ್ತಿರುವ ಈ ಸಿನಿಮಾವನ್ನು ಬಾಲು ನಾರಾಯಣನ್ ನಿರ್ದೇಶಿಸುತ್ತಿದ್ದಾರೆ.
‘ನನ್ನ ಪಾತ್ರ ಚೆನ್ನಾಗಿದೆ. ಹೆಣ್ಣುಮಗಳೊಬ್ಬಳು ತನಗೆ ಎದುರಾಗುವ ಸವಾಲುಗಳನ್ನು ಹೇಗೆ ನಿಭಾಯಿಸುತ್ತಾಳೆ ಎಂಬುದು ಈ ಚಿತ್ರದ ಕಥಾಹಂದರ. ಈ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದೆ’ ಎಂದು ರಾಗಿಣಿ ದ್ವಿವೇದಿ ಹೇಳಿದ್ದಾರೆ.
ಕೇರಳ ಹಾಗೂ ಕರ್ನಾಟಕದಲ್ಲಿ ‘ಶೀಲ’ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ. ಈಗ ಫಸ್ಟ್ ಲುಕ್ ಬಿಡುಗಡೆ ಆಗಿದ್ದು, ಶೀಘ್ರದಲ್ಲೇ ಟ್ರೇಲರ್ ಕೂಡ ಬರಲಿದೆ ಎಂದು ರಾಗಿಣಿ ದ್ವಿವೇದಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
‘ಶೀಲ’ ಸಿನಿಮಾದಲ್ಲಿ ರಾಗಿಣಿ ದ್ವಿವೇದಿ ಮಾತ್ರವಲ್ಲದೇ ಅವಿನಾಶ್, ಶೋಭರಾಜ್, ಆರತಿ ಗೋಪಾಲ್, ಚಿತ್ರಾ ಶೆಣೈ, ಶ್ರೀಪತಿ, ರಿಯಾಜ್ ಖಾನ್, ಮಹೇಶ್ ನಾಯರ್, ಅಬೆ ಡೇವಿಡ್ ಮುಂತಾದ ಕಲಾವಿದರು ನಟಿಸಿದ್ದಾರೆ.