
ಅಂದು ‘ರಣರಂಗ’ ಚಿತ್ರದಲ್ಲಿ ಮುದ್ದಾಗಿ ನಟಿಸಿದ್ದ ಈ ಬೆಂಗಳೂರು ಬೆಡಗಿ, ಕೇವಲ ಬಾಲನಟಿಯಾಗಿ ಮಾತ್ರವಲ್ಲದೆ ನಾಯಕಿಯಾಗಿಯೂ ಬೆಳೆದರು. ‘ದೇವತಾ ಮನುಷ್ಯ’ ಚಿತ್ರದಲ್ಲೂ ಇವರು ಪ್ರಮುಖ ಪಾತ್ರ ಮಾಡಿದ್ದರು. ಸ್ಯಾಂಡಲ್‌ವುಡ್‌ನ ಸ್ಟಾರ್ ನಟರ ಚಿತ್ರಗಳಲ್ಲಿ ನಟಿಸಿದ ಹೆಗ್ಗಳಿಕೆ ಇವರದ್ದಾಗಿದ್ದು, ಇಂದಿಗೂ ಸಿನಿರಂಗದಲ್ಲಿ ಸಕ್ರಿಯರಾಗಲು ಸಜ್ಜಾಗಿದ್ದಾರೆ.

ಅಖಿಲಾ ಕೇವಲ ಬೆಳ್ಳಿಪರದೆಗೆ ಸೀಮಿತವಾಗದೆ, ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲೂ ನಟಿಸಿ ಮನೆಮಾತಾಗಿದ್ದಾರೆ. ತಮ್ಮ ಬಹುಮುಖ ಪ್ರತಿಭೆಯಿಂದ ಹಿಂದಿ ಭಾಷೆಯ ಸಾಕ್ಷ್ಯಚಿತ್ರ ಮತ್ತು ತಮಿಳಿನ ಪ್ರಸಿದ್ಧ ಜಾಹೀರಾತುಗಳಲ್ಲೂ ಕಾಣಿಸಿಕೊಂಡಿದ್ದಾರೆ. ವಿವಿಧ ಭಾಷೆಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ಇವರು, ಕಲೆಯ ಎಲ್ಲಾ ಮಾಧ್ಯಮಗಳಲ್ಲೂ ತಮ್ಮ ಸೃಜನಶೀಲ ಛಾಪು ಮೂಡಿಸಿದ್ದಾರೆ.

ಇತ್ತೀಚೆಗೆ ಅವರು ಶಿವರಾಜ್‌ಕುಮಾರ್ ಅವರನ್ನು ಭೇಟಿ ಮಾಡಿದ್ದರು. ತಾವು ಒಂದು ಕಾಲದಲ್ಲಿ ಅವರ ಸಿನಿಮಾದಲ್ಲಿ ನಟಿಸಿದ್ದಾಗಿ ಮಾಹಿತಿ ಹಂಚಿಕೊಂಡಿದ್ದರು. ಈ ಸಂದರ್ಭದ ಫೋಟೋ ಹಾಗೂ ವಿಡಿಯೋ ವೈರಲ್ ಆಗಿತ್ತು.

ನಟನೆಯ ಆಚೆಗೂ ಅಖಿಲಾ ಅವರು ಸಮಾಜಮುಖಿ ಕೆಲಸಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕಲೆ ಮತ್ತು ಸಂಸ್ಕೃತಿಯನ್ನು ಪ್ರೀತಿಸುವ ಇವರು, ಕಾಲೇಜು ವಿದ್ಯಾರ್ಥಿಗಳಿಗೆ ಸಂವಹನ ಕೌಶಲ್ಯದ ವರ್ಕ್‌ಶಾಪ್‌ಗಳನ್ನು ನಡೆಸುತ್ತಿದ್ದಾರೆ. ತಮ್ಮ ರಂಗಭೂಮಿಯ ಸುದೀರ್ಘ ಅನುಭವವನ್ನು ಬಳಸಿಕೊಂಡು ಯುವ ಪೀಳಿಗೆಗೆ ಉತ್ತಮ ಮಾರ್ಗದರ್ಶಕರಾಗಿ, ಪ್ರೇರಣೆಯಾಗಿ ದೇಶದ ಯುವಶಕ್ತಿಯನ್ನು ಸಬಲೀಕರಣಗೊಳಿಸುವಲ್ಲಿ ಬ್ಯುಸಿಯಾಗಿದ್ದಾರೆ.

ಅಖಿಲಾ ಅವರ ಬದುಕಿನ ತತ್ವ ತುಂಬಾ ಸರಳ ಮತ್ತು ಸ್ಪೂರ್ತಿದಾಯಕವಾಗಿದೆ. ‘ಜೀವನದಲ್ಲಿ ಬಿರುಗಾಳಿ ಹಾದುಹೋಗುವವರೆಗೆ ಕಾಯಬೇಡಿ, ಮಳೆಯಲ್ಲೇ ನೃತ್ಯ ಮಾಡುವುದನ್ನು ಕಲಿಯಿರಿ’ ಎಂಬ ತತ್ವವನ್ನು ಇವರು ದೃಢವಾಗಿ ನಂಬಿದ್ದಾರೆ. ಅಂದು ಶಿವಣ್ಣನ ಸಿನಿಮಾದಲ್ಲಿದ್ದ ಬಾಲನಟಿ, ಇಂದು ಒಬ್ಬ ಪರಿಪೂರ್ಣ ನಟಿಯಾಗಿ ಮತ್ತು ಯುವಕರಿಗೆ ಆದರ್ಶ ಮಾರ್ಗದರ್ಶಕಿಯಾಗಿ ಸಮಾಜದಲ್ಲಿ ಸಕಾರಾತ್ಮಕವಾಗಿ ಮುನ್ನಡೆಯುತ್ತಿದ್ದಾರೆ.
Published On - 1:31 pm, Sat, 4 July 26