Makeup Remover: ನೈಸರ್ಗಿಕ ವಿಧಾನದ ಮೂಲಕ ಮೇಕಪ್ ತೆಗೆಯುವುದು ಹೇಗೆ? ಇಲ್ಲಿದೆ ಸರಳ ಉಪಾಯ
ಪ್ರತಿಯೊಬ್ಬರು ಅದರಲ್ಲೂ ಮಹಿಳೆಯರು ಹೊರಗೆ ಹೋಗುವ ಸಂದರ್ಭದಲ್ಲಿ ಮುಖ ಸುಂದರವಾಗಿ ಕಾಣಲು ಮೇಕಪ್ ಮಾಡುತ್ತಾರೆ. ಆದರೆ ಇದನ್ನು ರಾತ್ರಿ ಮಲಗುವ ಮುನ್ನ ತೆಗೆಯಲೇಬೇಕು ಎಂದು ಬ್ಯೂಟಿಷಿಯನ್ಗಳು ಹೇಳುತ್ತಾರೆ.
Updated on: Jul 10, 2023 | 6:01 AM

ಮಹಿಳೆಯರು ಸಾರ್ವಜನಿಕ ಸ್ಥಳಗಳಿಗೆ ಹೋಗುವ ಸಂದರ್ಭದಲ್ಲಿ ಮುಖ ಸುಂದರವಾಗಿ ಕಾಣಲು ಮೇಕಪ್ ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಕೆಲವು ಪುರುಷರು ಕೂಡ ಕೊಂಚ ಮೇಕಪ್ ಮಾಡುತ್ತಾರೆ. ಯಾರೇ ಮೇಕಪ್ ಮಾಡಿರಲಿ ರಾತ್ರಿ ಮಲಗುವ ಮುನ್ನ ಮೇಕಪ್ ತೆಗೆಯಲೇಬೇಕು ಎನ್ನುತ್ತಾರೆ ಬ್ಯೂಟಿಷಿಯನ್ಗಳು. ಇದಕ್ಕೆ ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್ ಮೇಕಪ್ ರಿಮೂವರ್ಗಳ ಬದಲು ಮನೆಯಲ್ಲಿ ಸಿಗುವ ನೈಸರ್ಗಿಕ ಪದಾರ್ಥಗಳಿಂದ ತ್ವಚೆಗೆ ಹಾನಿಯಾಗದಂತೆ ಮೇಕಪ್ ತೆಗೆಯಬಹುದು ಅಂತಾ ಸಲಹೆ ನೀಡಿದ್ದಾರೆ.

ಮೇಕಪ್ ತೆಗೆಯಲು ಮೇಕಪ್ ರಿಮೂವರ್‌ಗಳನ್ನು ಬಳಸುವುದರಿಂದ ಚರ್ಮವು ಬೇಗನೆ ಒಣಗುತ್ತದೆ ಮತ್ತು ನಿರ್ಜೀವವಾಗುತ್ತದೆ. ಹೀಗಾಗಿ ತೆಂಗಿನ ಎಣ್ಣೆಯನ್ನು ನೈಸರ್ಗಿಕ ರಿಮೂವರ್ ಆಗಿ ಬಳಸಬಹುದು ಎನ್ನುತ್ತಾರೆ ತಜ್ಞರು. ಕೊಬ್ಬರಿ ಎಣ್ಣೆಯನ್ನು ಮುಖ ಮತ್ತು ಕುತ್ತಿಗೆಗೆ ಚೆನ್ನಾಗಿ ಹಚ್ಚಿ 2-3 ನಿಮಿಷಗಳ ನಂತರ ಹತ್ತಿ ಮೂಲಕ ಒರೆಸಬೇಕು.

ಮಾಡಿದ ಮೇಕ್ಅಪ್ ತೆಗೆಯಲು ಪುಣ್ಯಕೋಟಿಯ ಹಾಲು ಬಳಸಬಹುದು. ಚಿಕ್ಕ ಬಟ್ಟಲಿನಲ್ಲಿ ಹಾಲನ್ನು ತೆಗೆದುಕೊಂಡು ಅದರಲ್ಲಿ ಹತ್ತಿ ಉಂಡೆಯನ್ನು ಅದ್ದಿ ಅದರಿಂದ ಮುಖವನ್ನು ಒರೆಸಬಹುದು.

ಜೇನುತುಪ್ಪವನ್ನು ನೈಸರ್ಗಿಕ ಮೇಕಪ್ ರಿಮೂವರ್ ಆಗಿಯೂ ಬಳಸಬಹುದು. ಹತ್ತಿ ಉಂಡೆಗೆ ಸ್ವಲ್ಪ ಜೇನುತುಪ್ಪವನ್ನು ಹಾಕಿ ಮತ್ತು ಅದನ್ನು ನಿಮ್ಮ ಮುಖದ ಮೇಲೆ ಐದು ನಿಮಿಷಗಳ ಕಾಲ ನಿಧಾನವಾಗಿ ಮಸಾಜ್ ಮಾಡಿ ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಹಬೆಯಿಂದ ಮುಖದ ಮೇಲಿನ ಮೇಕಪ್ ಅನ್ನು ನಿಮಿಷಗಳಲ್ಲಿ ತೆಗೆದುಹಾಕಬಹುದು. ಒಂದು ಪಾತ್ರೆಯಲ್ಲಿ ಬಿಸಿ ನೀರನ್ನು ತೆಗೆದುಕೊಂಡು 5-10 ನಿಮಿಷಗಳ ಕಾಲ ಮುಖಕ್ಕೆ ಹಬೆ ನೀಡಿ. ಅದರ ನಂತರ, ಮುಖವನ್ನು ಹತ್ತಿ ಬಟ್ಟೆ ಅಥವಾ ಹತ್ತಿ ಉಂಡೆಯಿಂದ ಒರೆಸಿ ಮತ್ತು ಬೆವರಿನ ಜೊತೆಗೆ ಮೇಕಪ್ ಕೂಡ ಹೋಗುತ್ತದೆ. ಚರ್ಮದ ರಂಧ್ರಗಳು ತೆರೆದುಕೊಳ್ಳುತ್ತವೆ ಮತ್ತು ಇತರ ಕೊಳಕು ಕಣಗಳು ಸಹ ಕಳೆದುಹೋಗುತ್ತವೆ.



















