- Kannada News Photo gallery Republic Day Yadgir: Grand Horticulture Depts Fruit and Flower Exhibition at Lumbini
ಯಾದಗಿರಿ: ಗಣರಾಜ್ಯೋತ್ಸವ ಅಂಗವಾಗಿ ಲುಂಬಿಣಿ ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ; ಇಲ್ಲಿವೆ ಫೋಟೋಸ್
ಯಾದಗಿರಿ ಲುಂಬಿಣಿ ಉದ್ಯಾನವನದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ತೋಟಗಾರಿಕೆ ಇಲಾಖೆ ಮೂರು ದಿನಗಳ ಫಲಪುಷ್ಪ ಪ್ರದರ್ಶನ ಆಯೋಜಿಸಿದೆ. ಕಲ್ಲಂಗಡಿ, ಕುಂಬಳಕಾಯಿ, ಹೂವು ಮತ್ತು ಧಾನ್ಯಗಳಿಂದ ಮಹನೀಯರ, ಪ್ರಾಣಿಗಳ ಕಲಾತ್ಮಕ ಕೆತ್ತನೆಗಳು ಗಮನ ಸೆಳೆದಿವೆ. ಸ್ಥಳೀಯ ರೈತರ ಹಣ್ಣು-ಹೂವುಗಳ ಪ್ರದರ್ಶನಕ್ಕೆ ಜನಸಾಗರವೇ ಹರಿದುಬಂದಿದೆ. ಇಲ್ಲಿವೆ ನೋಡಿ ಫೋಟೋಸ್.
Updated on: Jan 27, 2026 | 8:32 PM

ಗಣರಾಜ್ಯೋತ್ಸವ ದಿನಾಚರಣೆ ಹಿನ್ನಲೆ ಯಾದಗಿರಿ ನಗರದ ಲುಂಬಿನಿ ಉದ್ಯಾನವನದಲ್ಲಿ ತೋಟಗಾರಿಕೆ ಇಲಾಖೆಯಿಂದ ಮೂರು ದಿನದ ಫಲಪುಷ್ಪ ಪ್ರದರ್ಶನ ನಡೆಯುತ್ತಿದೆ. ನಿನ್ನೆ ಆರಂಭವಾದ ಫಲಪುಷ್ಪ ದರ್ಶನಕ್ಕೆ ನೋಡಲು ಇಂದು ಜನಸಾಗರವೇ ಹರಿದುಬಂದಿತ್ತು.

ಯಾದಗಿರಿ ಜಿಲ್ಲೆಯ ರೈತರು ಬೆಳೆದಿರುವ ಹೂವು ಮತ್ತು ಹಣ್ಣುಗಳನ್ನ ಪ್ರದರ್ಶನಕ್ಕೆ ಇಡಲಾಗಿತ್ತು. ಜಿಲ್ಲೆಯ ನಾನಾ ಭಾಗದಲ್ಲಿ ರೈತರು ಬೆಳೆದಿರುವ ವಿವಿಧ ಹಣ್ಣುಗಳು ಹಾಗೂ ಹೂವುಗಳನ್ನ ಪ್ರದರ್ಶನಕ್ಕೆ ಇಡಲಾಗಿತ್ತು.

ಕಲ್ಲಂಗಡಿ ಹಣ್ಣಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರ ಭಾವಚಿತ್ರಗಳನ್ನ ಬಿಡಿಸಲಾಗಿದೆ. ಅಷ್ಟೇ ಅಲ್ಲದೆ ಜಿಲ್ಲೆಯ ಪ್ರಮುಖ ಅಧಿಕಾರಿಗಳಾದ ಜಿಲ್ಲಾಧಿಕಾರಿ, ಎಸ್ಪಿ, ಜಿಲ್ಲಾ ಪಂಚಾಯತಿ ಸಿಇಒ ಹಾಗೂ ಅಪರ ಜಿಲ್ಲಾಧಿಕಾರಿಗಳ ಭಾವಚಿತ್ರಗಳನ್ನೂ ಸಹ ಕೆತ್ತಲಾಗಿದೆ. ಇದರ ಜೊತೆಗೆ ಸ್ವಾತಂತ್ರ್ಯ ಹೋರಾಟಗಾರಾದ ಮಹಾತ್ಮ ಗಾಂಧಿ, ಸುಭಾಷ್ ಚಂದ್ರ ಬೋಸ್, ಜವಾಹರಲಾಲ್ ನೆಹರು, ಭಗತ್ ಸಿಂಗ್, ಬಸವೇಶ್ವರ ಚಿತ್ರಗಳನ್ನ ಕಲ್ಲಂಗಡಿ ಮತ್ತು ಕುಂಬಳಕಾಯಿಯಲ್ಲಿ ಕೆತ್ತನೆ ಮಾಡಲಾಗಿದೆ.

ಇದು ಒಂದು ಕಡೆಯಾದರೆ ಇನ್ನೊಂದು ಕಡೆ ಕೇವಲ ಹೂವುಗಳಿಂದ ನಾನಾ ರೀತಿಯ ಪಕ್ಷಿ ಪ್ರಾಣಿಗಳನ್ನ ನಿರ್ಮಾಣ ಮಾಡಲಾಗಿತ್ತು. ಅದರಲ್ಲೂ ಡಾಲ್ಫಿನ್ ಹಾಗೂ ಬಾತಕೋಳಿಯ ಪ್ರತಿಮೆ ಎಲ್ಲರನ್ನ ಸೆಳೆಯುತ್ತಿದೆ. ಜನರ ಇವುಗಳ ಮುಂದೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡರು.

ಇನ್ನು ರೈತರು ಬೆಳೆದ ತರಕಾರಿಗಳಲ್ಲಿ ನವಿಲನ್ನು ತಯಾರಿಸಲಾಗಿದೆ. ಥರ್ಮಾಕೋಲ್ನಿಂದ ಬುದ್ಧ, ಬಸವ ಅಂಬೇಡ್ಕರ್ ಹಾಗೂ ಸಾಲು ಮರದ ತಿಮ್ಮಕ್ಕನ ಮೂರ್ತಿಗಳನ್ನ ನಿರ್ಮಾಣ ಮಾಡಲಾಗಿದೆ. ಸಿರಿ ಧಾನ್ಯಗಳಾದ ರಾಗಿ, ಅಕ್ಕಿ, ಜೋಳ, ಸಜ್ಜೆ ಸೇರಿದಂತೆ ಇನ್ನಿತರ ಧಾನ್ಯಗಳನ್ನ ಬಳಕೆ ಮಾಡಿ ಮೂರ್ತಿಗಳನ್ನು ಸಿದ್ಧಪಡಿಸಲಾಗಿದೆ. ಇದರ ಜೊತೆಗೆ ತೋಟಗಾರಿಕೆ ಪಿತಾಮಹ ಮರಿಗೌಡರ ಚಿತ್ರವನ್ನ ರಂಗೋಲಿಯಲ್ಲಿ ಅದ್ಬುತವಾಗಿ ಬಿಡಿಸಲಾಗಿದೆ.

ಒಟ್ಟಿನಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಯಾದಗಿರಿ ನಗರದ ಲುಂಬಿನಿ ವನದಲ್ಲಿ ಫಲ ಪುಷ್ಪ ಲೋಕವೇ ಅನಾವರಣಗೊಂಡಿದೆ. ಪ್ರತಿ ವರ್ಷ ಇಂತಹ ಕಾರ್ಯಕ್ರಮ ಆಯೋಜನೆ ಮಾಡುತ್ತಿರುವ ಕಾರಣಕ್ಕೆ ಜನರು ಮತ್ತಷ್ಟು ಉತ್ಸಾಹ, ಸಂತೋಷದಲ್ಲಿ ಭಾಗವಹಿಸುತ್ತಿದ್ದಾರೆ.