- Kannada News Photo gallery Siddaramaiah talks with SDRF NDRF at Shiruru hill collapse site amid torrential rains, important notice, Uttara Kannada News
ರಣಭೀಕರ ಮಳೆ ನಡುವೆಯೇ ಶಿರೂರು ಗುಡ್ಡ ಕುಸಿತ ಸ್ಥಳದಲ್ಲಿ SDRF-NDRF ಜೊತೆ ಸಿಎಂ ಚರ್ಚೆ, ಮಹತ್ವದ ಸೂಚನೆ
ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತದ ಸ್ಥಳಕ್ಕೆ ಇಂದು(ಭಾನುವಾರ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡಿ, ಕಾರ್ಯಾಚರಣೆಯ ಪ್ರಗತಿ ಮತ್ತು SDRF ಹಾಗೂ NDRF ಸಿಬ್ಬಂದಿಗೆ ಎದುರಾಗುತ್ತಿರುವ ಸವಾಲುಗಳನ್ನು ಪರಿಶೀಲನೆ ನಡೆಸಿದರು. ಈ ವೇಳೆ ಲಭ್ಯವಿರುವ ಎಲ್ಲಾ ಆಧುನಿಕ ತಂತ್ರಜ್ಞಾನ ಬಳಸಲು, ಉನ್ನತ ಮೆಟಲ್ ಡಿಟೆಕ್ಟರ್ ಮತ್ತು ಜೆಸಿಬಿ ಬಳಸಿ ಕಾರ್ಯಾಚರಣೆಗೆ ಡೆಸಲು ಸಿಎಂ ಸೂಚನೆ ನೀಡಿದರು. ಜೊತೆಗೆ ಜೀವದ ಹಂಗು ತೊರೆದು ಕಾರ್ಯಾಚರಣೆ ನಡೆಸುತ್ತಿರುವ ಸಿಬ್ಬಂದಿಯ ಕಾರ್ಯಕ್ಷಮತೆಗೆ ಸಿಎಂ ಶ್ಲಾಘನೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಶಾಸಕ ಸತೀಶ್ ಸೈಲ್ ಸೇರಿ ಇನ್ನಿತರ ಅಧಿಕಾರಿಗಳು ಹಾಜರಿದ್ದರು.
Updated on: Jul 21, 2024 | 6:14 PM

ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತದ ಸ್ಥಳಕ್ಕೆ ಇಂದು(ಭಾನುವಾರ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡಿ, ಕಾರ್ಯಾಚರಣೆಯ ಪ್ರಗತಿ ಮತ್ತು SDRF ಹಾಗೂ NDRF ಸಿಬ್ಬಂದಿಗೆ ಎದುರಾಗುತ್ತಿರುವ ಸವಾಲುಗಳನ್ನು ಪರಿಶೀಲನೆ ನಡೆಸಿದರು.

ಈ ವೇಳೆ ಲಭ್ಯವಿರುವ ಎಲ್ಲಾ ಆಧುನಿಕ ತಂತ್ರಜ್ಞಾನ ಬಳಸಲು, ಉನ್ನತ ಮೆಟಲ್ ಡಿಟೆಕ್ಟರ್ ಮತ್ತು ಜೆಸಿಬಿ ಬಳಸಿ ಕಾರ್ಯಾಚರಣೆಗೆ ನಡೆಸಲು ಸಿಎಂ ಸೂಚನೆ ನೀಡಿದರು. ಜೊತೆಗೆ ಜೀವದ ಹಂಗು ತೊರೆದು ಕಾರ್ಯಾಚರಣೆ ನಡೆಸುತ್ತಿರುವ ಸಿಬ್ಬಂದಿಯ ಕಾರ್ಯಕ್ಷಮತೆಗೆ ಸಿಎಂ ಶ್ಲಾಘನೆ ವ್ಯಕ್ತಪಡಿಸಿದರು.

ಗುಡ್ಡ ಕುಸಿತದಿಂದ ಮುಚ್ಚಿ ಹೋಗಿರುವ ರಸ್ತೆಯ ಎಡಭಾಗದಲ್ಲಿ ಕುಸಿತದ ಗುಡ್ಡ-ಬಲ ಭಾಗದಲ್ಲಿ ಭೋರ್ಗರೆದು ಹರಿಯುತ್ತಿರುವ ಕಾಳಿ ನದಿ ಇದೆ. ಜೊತೆಗೆ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಲ್ಲಿ ಮಣ್ಣಿನಡಿ ಸಿಲುಕಿರುವ ಜೀವಗಳ ಪತ್ತೆ ಕಾರ್ಯ ಬಹಳ ಸವಾಲಿನದ್ದಾಗಿದೆ ಎಂದು ಮುಖ್ಯಮಂತ್ರಿಗಳು ಸಿಬ್ಬಂದಿಯ ಶ್ರಮಕ್ಕೆ ಮೆಚ್ಚುಗೆ ಸೂಚಿಸಿದರು.

ನಾಲ್ಕು ತಂಡಗಳು ಗುಡ್ಡ ಕುಸಿತದ ಕೆಳಗೆ ಸಿಲುಕಿರಬಹುದಾದವರ ಪತ್ತೆಗೆ ರಾಡಾರ್ ತಂತ್ರಜ್ಞಾನ ಬಳಸಿ ಕಾರ್ಯಾಚರಣೆ ನಡೆಸುತ್ತಿವೆ. ಇನ್ನು ನಾಲ್ಕು ತಂಡಗಳು ಮತ್ತೊಂದು ಬದಿಯ ನದಿಯೊಳಗೆ ಕಾರ್ಯಾಚರಣೆ ನಡೆಸುತ್ತಿವೆ. ಈ ಬಗ್ಗೆ ಹಲವು ದಿನಗಳಿಂದ ತಾಲ್ಲೂಕಿನಲ್ಲೇ ಮೊಕ್ಕಾಂ ಹೂಡಿರುವ ಕಂದಾಯ ಸಚಿವ ಕೃಷ್ಣಬೈರೇಗೌಡರು ಮುಖ್ಯಮಂತ್ರಿಗಳಿಗೆ ವಿವರಿಸಿದರು.

ಕಾರ್ಯಾಚರಣೆ ನಡೆಯುತ್ತಿರುವ ಜಾಗ ಮತ್ತು ಮಣ್ಣು ತುಂಬಿರುವ ರಸ್ತೆಯೂ ಕುಸಿಯುವ ಸಾಧ್ಯತೆಗಳ ಬಗ್ಗೆ ಮುಖ್ಯಮಂತ್ರಿಗಳು ಅಧಿಕಾರಿಗಳಿಂದ ಮಾಹಿತಿ ಪಡೆದು ಈ ಬಗ್ಗೆ ಹೆಚ್ಚು ಜಾಗರೂಕರಾಗಿರುವಂತೆ ಎಚ್ಚರಿಸಿದರು.

ಗುಡ್ಡ ಕುಸಿತದ ಸ್ಥಳ ಒಂದು ರೀತಿ ದ್ವೀಪದಂತಾಗಿದೆ. ಸುತ್ತಲೂ ಕಾಳಿ ನದಿ ಭೋರ್ಗರೆದು ಹರಿಯುತ್ತಿದೆ. ಈ ನಡುವೆ ಅರ್ಧ ಕುಸಿದ ಗುಡ್ಡ ನಿಂತಿದೆ. ಹೀಗಾಗಿ ಕಾರ್ಯಾಚರಣೆ ವೇಳೆ ಎದುರಾಗಬಹುದಾದ ಅಪಾಯಗಳು ಮತ್ತು ಸವಾಲುಗಳ ಬಗ್ಗೆ ಉನ್ನತ ಮಟ್ಟದ ತಜ್ಞರಿಂದ ಮಾಹಿತಿ ಪಡೆದು ತಂತ್ರಜ್ಞಾನದ ನೆರವು ಪಡೆಯುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

ಈ ವೇಳೆ ಕಂದಾಯ ಸಚಿವ ಕೃಷ್ಣಬೈರೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಶಾಸಕ ಸತೀಶ್ ಸೈಲ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ಎಲ್.ಕೆ. ಅತೀಕ್, ಶಾಲಿನಿ ರಜನೀಶ್ ಸೇರಿ ಕಂದಾಯ ಇಲಾಖೆಯ ಹಿರಿಯ ಅಧಿಕಾರಿ ಮತ್ತು ಸಿಬ್ಬಂದಿ ಸ್ಥಳದಲ್ಲಿದ್ದರು.




