
ಕೆಲವೇ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ತಂಡ ಭೇಟಿ ಆಗಿತ್ತು. ಈಗ ಗೃಹ ಸಚಿವ ಅಮಿತ್ ಶಾ ಅವರನ್ನು ಕೂಡ ಭೇಟಿ ಮಾಡಲಾಗಿದೆ. ಈ ವೇಳೆ ಚಿತ್ರತಂಡದವರ ಜೊತೆ ಅನೇಕ ವಿಚಾರಗಳನ್ನು ಅಮಿತ್ ಶಾ ಚರ್ಚೆ ಮಾಡಿದರು ಎನ್ನಲಾಗಿದೆ.

ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದಲ್ಲಿ ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆಯ ಕಥೆಯನ್ನು ತೋರಿಸಿದ್ದಾರೆ. ಅವರಿಗೆ ಅನೇಕರಿಂದ ಮೆಚ್ಚುಗೆ ಕೇಳಿಬಂದಿದೆ. ರಾಜಕೀಯ ಕ್ಷೇತ್ರದ ಹಲವು ಗಣ್ಯರು ಈ ಸಿನಿಮಾ ನೋಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಅಮಿತ್ ಶಾ ಅವರನ್ನು ಭೇಟಿ ಆದಾಗ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಜೊತೆಗೆ ಅವರ ಪತ್ನಿ ಪಲ್ಲವಿ ಜೋಶಿ, ಹಿರಿಯ ನಟ ಅನುಪಮ್ ಖೇರ್ ಕೂಡ ಇದ್ದರು. ಇವರು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದಲ್ಲಿ ಗಮನಾರ್ಹ ಪಾತ್ರಗಳನ್ನು ಮಾಡಿದ್ದಾರೆ. ಅವರ ನಟನೆಗೆ ಮೆಚ್ಚುಗೆ ವ್ಯಕ್ತವಾಗಿದೆ.

‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಹೊಸ ಸಂಚಲನವನ್ನೇ ಸೃಷ್ಟಿ ಮಾಡಿದೆ. ವಿವಾದಗಳ ಕಾರಣದಿಂದಲೂ ಈ ಸಿನಿಮಾ ಸದ್ದು ಮಾಡುತ್ತಿದೆ. ಆ ಕಾರಣದಿಂದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರಿಗೆ ವೈ ಕೆಟಗರಿ ಭದ್ರತೆಯನ್ನು ನೀಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕರು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನೋಡಿದ್ದಾರೆ. ಅನೇಕ ರಾಜ್ಯಗಳಲ್ಲಿ ಈ ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಲಾಗಿದೆ. ಈ ಬಗ್ಗೆ ಪರ-ವಿರೋಧದ ಚರ್ಚೆ ಚಾಲ್ತಿಯಲ್ಲಿದೆ.

ಗಲ್ಲಾಪೆಟ್ಟಿಗೆಯಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಧೂಳೆಬ್ಬಿಸಿದೆ. ಮಾ.11ರಂದು ರಿಲೀಸ್ ಆಗಿದ್ದ ಈ ಚಿತ್ರ ಮೊದಲ ದಿನ ಕೇವಲ 3.55 ಕೋಟಿ ರೂಪಾಯಿ ಗಳಿಸಿತ್ತು. ಆದರೆ ಒಂದು ವಾರ ಕಳೆಯುವುದರೊಳಗೆ ವಿದೇಶಿ ಗಳಿಕೆಯನ್ನೂ ಸೇರಿಸಿ 100 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.