ಪ್ರತಿನಿತ್ಯ ನಾವು ಮಾಡುವ ತಪ್ಪುಗಳು ಕಿಡ್ನಿಯ ಆರೋಗ್ಯವನ್ನು ಹಾಳು ಮಾಡಬಹುದು. ಇದರಿಂದ ಮೂತ್ರಪಿಂಡ ಕಿರಿಕಿರಿಗೆ ಒಳಗಾಗುವುದಲ್ಲದೆ ಇದಕ್ಕೆ ಸಂಬಂಧಿಸಿದ ಸಮಸ್ಯೆಗಳು ಆರಂಭವಾಗಬಹುದು. ಹಾಗಾಗಿ ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ.
ಮೂತ್ರ ವಿಸರ್ಜನೆ ಮಾಡಬೇಕು ಎನಿಸಿದರೂ ಅದನ್ನು ಒಂದಲ್ಲಾ ಒಂದು ಕಾರಣದಿಂದ ತಡೆಹಿಡಿಯುವ ಅಭ್ಯಾಸ ನಿಮಗಿದ್ದರೆ ಅದನ್ನು ಕೂಡಲೇ ಬಿಟ್ಟುಬಿಡಿ. ಏಕೆಂದರೆ ಇದು ಕಿಡ್ನಿಯಲ್ಲಿ ಕಲ್ಲುಗಳು ಉಂಟಾಗಲು ಮತ್ತು ಕಿಡ್ನಿ ವೈಫಲ್ಯಕ್ಕೆ ಮುಖ್ಯ ಕಾರಣವಾಗುತ್ತದೆ.
ಕೆಲವರಿಗೆ ನೀರನ್ನು ಕುಡಿಯುವುದು ದೊಡ್ಡ ಕಿರಿಕಿರಿಯಾಗಿರುತ್ತದೆ. ಆದರೆ ಈ ಅಭ್ಯಾಸದಿಂದ ನಿಮ್ಮ ಕಿಡ್ನಿಗಳಿಗೆ ಕಿರಿಕಿರಿಯಾಗಿ ತೊಂದರೆಯಾಗುತ್ತದೆ. ಅಲ್ಲದೆ, ದೇಹದಲ್ಲಿನ ಕೆಟ್ಟ ಅಂಶಗಳು ಹೊರಹೋಗಲು ತೊಂದರೆಯಾಗುತ್ತದೆ. ಹಾಗಾಗಿ ಕಿಡ್ನಿ ಆರೋಗ್ಯವಾಗಿರಲು ನೀರು ಕುಡಿಯುವುದು ಬಹಳ ಮುಖ್ಯ.
ಕೆಲವರಿಗೆ ಹೆಚ್ಚು ಸಕ್ಕರೆ ಅಥವಾ ಇನ್ನಿತರ ಸಿಹಿ ತಿಂಡಿಗಳ ಸೇವನೆ ಮಾಡಲು ಬಹಳ ಇಷ್ಟ. ಆದರೆ ಇಷ್ಟವೆಂದು ಮನಬಂದಂತೆ ತಿಂದರೆ ಅದು ನಿಮ್ಮ ಆರೋಗ್ಯಕ್ಕೆ ಕುತ್ತು ತರುತ್ತದೆ. ಹಾಗಾಗಿ ಸಿಹಿ ತಿಂಡಿಗಳ ಸೇವನೆ ಆದಷ್ಟು ಕಡಿಮೆ ಮಾಡಿ. ಪದೇ ಪದೇ ಸಿಹಿ ತಿನ್ನಬೇಕು ಎನಿಸಿದರೆ ಅದಕ್ಕೆ ಆರೋಗ್ಯಕರ ಪರ್ಯಾಯ ಹುಡುಕಿಕೊಳ್ಳಿ.
ಕೆಂಪು ಮಾಂಸ ಸೇವನೆ ಮಾಡಲು ಕೆಲವರಿಗೆ ತುಂಬಾ ಇಷ್ಟವಿರುತ್ತದೆ. ಕುರಿ, ಮೇಕೆ, ಹೀಗೆ ಮೊದಲಾದ ಪ್ರಾಣಿಗಳ ಮಾಂಸವನ್ನು ಚಪ್ಪರಿಸಿ ತಿನ್ನುತ್ತಾರೆ. ಆದರೆ ಇದನ್ನು ಇಷ್ಟವೆಂದು ಪ್ರತಿನಿತ್ಯ ಸೇವಿಸಲು ಆರಂಭಿಸಿದರೆ ಕಿಡ್ನಿ ಮೇಲಿನ ಒತ್ತಡ ಹೆಚ್ಚಾಗುತ್ತದೆ. ಹಾಗಾಗಿ ಮಾಂಸಾಹಾರ ಸೇವನೆ ಮಿತಿಯಲ್ಲಿದ್ದರೆ ಬಹಳ ಒಳ್ಳೆಯದು. ಅದೇ ರೀತಿ ಅತಿ ಹೆಚ್ಚು ಉಪ್ಪು ಸೇವನೆ ಮತ್ತು ನಿದ್ದೆ ಮಾಡದಿರುವುದು ಕೂಡ ಕಿಡ್ನಿ ಆರೋಗ್ಯವನ್ನು ಹಾಳು ಮಾಡುತ್ತದೆ.