- Kannada News Photo gallery Anekal: 100% Insured Village: Marasooru Panchayat Achieves Remarkable feat, Karnataka news in kannada
ಗ್ರಾಮದ ಎಲ್ಲರಿಗೂ ವಿಮೆ: ಮರಸೂರು ಕರ್ನಾಟಕದ ಮೊದಲ ಸಂಪೂರ್ಣ ವಿಮಾ ಪಂಚಾಯ್ತಿ
ಮರಸೂರು ಗ್ರಾಮ ಪಂಚಾಯಿತಿಯು ಪ್ರಧಾನಮಂತ್ರಿ ಜೀವನ್ ಜ್ಯೋತಿ ಭೀಮಾ ಮತ್ತು ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆಗಳ ಅಡಿಯಲ್ಲಿ ಎಲ್ಲಾ ಗ್ರಾಮಸ್ಥರಿಗೆ ವಿಮಾ ಸೌಲಭ್ಯ ಒದಗಿಸುವ ಮೂಲಕ ರಾಜ್ಯದ ಮೊದಲ ಸಂಪೂರ್ಣ ವಿಮಾ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಯೋಜನೆಯಿಂದ 15,531 ಜನರಿಗೆ ಪ್ರಯೋಜನವಾಗಿದೆ.
Updated on: Mar 13, 2025 | 7:15 PM

ಪ್ರತಿಯೊಂದು ಕುಟುಂಬಕ್ಕೂ ಕೂಡ ವಿಮೆ ಅನ್ನೋದು ಅತ್ಯವಶ್ಯಕ ಹಾಗೂ ಅನಿವಾರ್ಯ. ಹೀಗಾಗಿ ಜನರಿಗೆ ವಿಮೆ ಬಗ್ಗೆ ಜಾಗೃತಿಯನ್ನ ಮೂಡಿಸುವ ಮೂಲಕ ಗ್ರಾಮದ ಎಲ್ಲಾ ಗ್ರಾಮಸ್ಥರಿಗೆ ವಿಮೆ ಮಾಡಿಸಿದ್ದು, ರಾಜ್ಯದ ಮೊದಲ ಸಂಪೂರ್ಣ ವಿಮಾ ಪಂಚಾಯತಿ ಎಂಬ ಹೆಗ್ಗಳಿಕೆಗೆ ಇಲ್ಲೊಂದು ಗ್ರಾಮಪಂಚಾಯಿತಿ ಪಾತ್ರವಾಗಿದೆ. ಅಲ್ಲದೆ ಈ ಸಾಧನೆ ಮಾಡಿದ ಗ್ರಾಮ ಪಂಚಾಯಿತಿಗೆ ಪ್ರಶಸ್ತಿ ಒಲಿದು ಬಂದಿದೆ.

ಹೌದು! ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಮರಸೂರು ಗ್ರಾಮ ಪಂಚಾಯಿತಿ ರಾಜ್ಯದಲ್ಲೇ ಮೊದಲ ಸಂಪೂರ್ಣ ವಿಮಾ ಗ್ರಾಮ ಪಂಚಾಯಿತಿಯಾಗಿ ಆಯ್ಕೆಯಾಗುವ ಮೂಲಕ ಪ್ರಶಸ್ತಿ ಪಡೆದುಕೊಂಡಿದೆ. ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ ಹಾಗೂ ಪ್ರಧಾನಮಂತ್ರಿ ಸುರಕ್ಷಾ ಭಿಮಾ ಯೋಜನೆ ಅಡಿಯಲ್ಲಿ ಗ್ರಾಮದ ಎಲ್ಲಾ ಗ್ರಾಮಸ್ಥರಿಗೆ ವಿಮೆ ಮಾಡಿಸುವ ಮೂಲಕ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.

ಮರಸೂರು ಗ್ರಾಮದಲ್ಲಿ 3550 ಕುಟುಂಬಗಳಿದ್ದು 15,531 ಗ್ರಾಮಸ್ಥರು ವಾಸವಾಗಿದ್ದಾರೆ, ಇವರಲ್ಲಿ 7242 ಜನ ಈಗಾಗಲೇ ಒಂದಿಲ್ಲೊಂದು ವಿಮೆ ಪಡೆದುಕೊಂಡಿದ್ದಾರೆ. ಇನ್ನುಳಿದ ಗ್ರಾಮಸ್ಥರಿಗೆ ವಿಮೆ ಮಾಡಿಸಿಕೊಡುವ ಉದ್ದೇಶದಿಂದ ಗ್ರಾಮ ಪಂಚಾಯಿತಿ ಹಾಗೂ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಸರ್ವೆ ಕಾರ್ಯ ನಡೆಸಿ ವಿಮೆ ಹೊಂದಿಲ್ಲದ ಗ್ರಾಮಸ್ಥರ ಪಟ್ಟಿ ಸಿದ್ಧಪಡಿಸಿ ಅವರಿಗೆ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭಿಮಾ ಯೋಜನೆ ಅಡಿಯಲ್ಲಿ ವಿಮೆ ಮಾಡಿಸಲಾಗಿದೆ.

ಆ ಮೂಲಕ ಶೇ 100% ಸಂಪೂರ್ಣ ವಿಮಾ ಗ್ರಾಮ ಪಂಚಾಯಿತಿಯಾಗಿ ಮರಸೂರು ಪಂಚಾಯಿತಿ ಆಯ್ಕೆಯಾಗಿದೆ. ಹೀಗಾಗಿ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಸಿಇಒ ಲತಾ ಕುಮಾರಿ ಸಂಪೂರ್ಣ ವಿಮಾ ಗ್ರಾಮ ಪಂಚಾಯಿತಿ ಪ್ರಶಸ್ತಿ ನೀಡುವ ಮೂಲಕ ಅಭಿನಂದಿಸಿದ್ದಾರೆ.

ಇನ್ನೂ ಗ್ರಾಮ ಪಂಚಾಯಿತಿಯಿಂದ ವಿಮೆ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ಕರಪತ್ರ ಹಂಚಿ, ಆಟೋ ಅನೌನ್ಸ್ ಮುಖಾಂತರ ಜನರಿಗೆ ವಿಮೆ ಪಡೆಯುವುದರಿಂದ ಯಾವೆಲ್ಲ ಪ್ರಯೋಜನಗಳಿವೆ ಎಂಬ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಗ್ರಾಮಪಂಚಾಯಿತಿ ಸಿಬ್ಬಂದಿಗಳು, ಅಧಿಕಾರಿಗಳ ವರ್ಗ ಜೊತೆಗೆ ಜನಪ್ರತಿನಿಧಿಗಳು ಈವೊಂದು ಕಾರ್ಯಕ್ಕೆ ಕೈಜೋಡಿಸಿದ್ದಾರೆ.

ಕ್ರೈಸ್ಟ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ವಿಮಾ ಯೋಜನೆ ಉಪಯೋಗಳನ್ನ ಜನರಿಗೆ ಮನದಟ್ಟು ಮಾಡಿಕೊಟ್ಟು, ಗ್ರಾಮಗಳಲ್ಲಿ ಕ್ಯಾಂಪ್ ನಡೆಸಿ ವಿಮೆ ಹೊಂದಿಲ್ಲದ ಗ್ರಾಮಸ್ಥರಿಗೆ ವಿಮೆ ಮಾಡಿಸಿ ಕೊಡಲಾಗಿದೆ. 18 ರಿಂದ 70 ವರ್ಷದ ಎಲ್ಲಾ ಗ್ರಾಮಸ್ಥರು ವಿಮೆ ಮಾಡಿಸುವ ಮೂಲಕ ಮರಸೂರು ಪಂಚಾಯಿತಿ ಸಂಪೂರ್ಣ ವಿಮಾ ಪಂಚಾಯಿತಿಯಾಗಿ ಆಯ್ಕೆಯಾಗಿದೆ.

ಒಟ್ಟಿನಲ್ಲಿ ಕೇಂದ್ರ ಸರ್ಕಾರದ ಮಹತ್ವದ ವಿಮಾ ಯೋಜನೆಗಳನ್ನ ಅನುಷ್ಟಾನಗೊಳಿಸುವ ಮೂಲಕ ಮರಸೂರು ಗ್ರಾಮ ಪಂಚಾಯಿತಿ ಸಂಪೂರ್ಣ ವಿಮಾ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ಸ್ವಾಗತಾರ್ಹ. ಇದೇ ರೀತಿ ಬೇರೆ ಗ್ರಾಮ ಪಂಚಾಯಿತಿಗಳು ಸರ್ಕಾರದ ಯೋಜನೆಗಳನ್ನ ಅನುಷ್ಠಾನ ಮಾಡಿದ್ದಲ್ಲಿ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗಲಿದೆ ಎಂಬುದು ನಮ್ಮ ಆಶಯ.



















