
ಟೈಟಲ್ ಮೂಲಕ ʻಅನ್‌ಲಾಕ್ ರಾಘವʼ ಸಿನಿಮಾ ಕೌತುಕ ಮೂಡಿಸಿದೆ. ರಾಘವ ಏನು ಅನ್‌ಲಾಕ್ ಮಾಡುತ್ತಾನೆ ಎಂಬುದು ಫೆಬ್ರವರಿ 7ರಂದು ತಿಳಿಯಲಿದೆ. ಅಂದರೆ, ಈ ಸಿನಿಮಾ ಫೆ.7ಕ್ಕೆ ಬಿಡುಗಡೆ ಆಗಲಿದೆ. ಈ ಸಿನಿಮಾದ ಟ್ರೇಲರ್ ಮತ್ತು ಹಾಡುಗಳನ್ನು ನೋಡಿ ಅನೇಕರು ಮೆಚ್ಚಿಕೊಂಡಿದ್ದಾರೆ.

ʻಅನ್‌ಲಾಕ್ ರಾಘವʼ ಟ್ರೇಲರ್ ಮತ್ತು ಹಾಡುಗಳು 20 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ ಎಂಬುದು ಚಿತ್ರತಂಡಕ್ಕೆ ಖುಷಿ ನೀಡಿದೆ. 500ಕ್ಕೂ ಅಧಿಕ ರೀಲ್ಸ್ ಮೂಲಕ ಸೋಶಿಯಲ್ ಮೀಡಿಯಾದಲ್ಲೂ ಹಾಡು ಟ್ರೆಂಡ್ ಆಗಿದೆ. ಮಿಲಿಂದ್ ಗೌತಮ್ ಈ ಸಿನಿಮಾದಲ್ಲಿ ಹೀರೋ ಆಗಿದ್ದಾರೆ.

ಈ ಸಿನಿಮಾದ ಟ್ರೇಲರ್ ನೋಡಿ ಅನೇಕರು ಬೆನ್ನು ತಟ್ಟಿದ್ದಾರೆ. ಅಶ್ವಿನಿ ಪುನೀತ್ ರಾಜ್‌ಕುಮಾರ್, ಡಾಲಿ ಧನಂಜಯ, ಜೋಗಿ ಪ್ರೇಮ್, ಸಪ್ತಮಿ ಗೌಡ, ಸಿಂಪಲ್ ಸುನಿ, ದಿನೇಶ್ ಬಾಬು, ಉಮಾಪತಿ ಶ್ರೀನಿವಾಸ್ ಗೌಡ, ರಾಮಲಿಂಗಾ ರೆಡ್ಡಿ ಸೇರಿದಂತೆ ಅನೇಕರು ಈ ಸಿನಿಮಾಗೆ ಬೆಂಬಲ ನೀಡಿದ್ದಾರೆ.

ಧ್ರುವ ಸರ್ಜಾ, ರಮೇಶ್ ಭಟ್, ಕೋಮಲ್, ಸಂಜನಾ ಗಲ್ರಾನಿ, ತನಿಷಾ ಕುಪ್ಪಂಡ, ಮಣಿಕಾಂತ್ ಕದ್ರಿ, ಸುಪ್ರಿಯಾ ರಾಮ್, ಹಂಸಿಕಾ ಐಯ್ಯರ್ ಕೂಡ ʻಅನ್‌ಲಾಕ್ ರಾಘವʼ ಟ್ರೇಲರ್ ನೋಡಿ ಶುಭ ಹಾರೈಸಿದ್ದಾರೆ. ಚಿತ್ರದ ಹಾಡಿನ ಸಾಹಿತ್ಯ, ಸಂಗೀತಕ್ಕೆ ಸೆಲೆಬ್ರಿಟಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ.

‘ರಾಮಾ ರಾಮಾ ರೇ’ ಖ್ಯಾತಿಯ ಡಿ. ಸತ್ಯಪ್ರಕಾಶ್ ಅವರು ‘ಅನ್‌ಲಾಕ್ ರಾಘವ’ ಸಿನಿಮಾಗೆ ಕಥೆ, ಚಿತ್ರಕಥೆ ಬರೆದಿದ್ದಾರೆ. ದೀಪಕ್ ಮಧುವನಹಳ್ಳಿ ಅವರು ಆ್ಯಕ್ಷನ್-ಕಟ್ ಹೇಳಿದ್ದಾರೆ. ಈ ಸಿನಿಮಾದಲ್ಲಿ ಮೂರು ಹಾಡುಗಳಿವೆ. ಮಂಜುನಾಥ ಡಿ, ಗಿರೀಶ್ ಕುಮಾರ್ ಎನ್ ನಿರ್ಮಾಣ ಮಾಡಿದ್ದಾರೆ.