Vaikuntha Ekadashi 2023: ಹೊಸ ವರ್ಷದ ಮೊದಲ ವ್ರತ ವೈಕುಂಠ ಏಕಾದಶಿ ಪ್ರಯುಕ್ತ ದೇವಸ್ಥಾನಗಳಲ್ಲಿ ಜನವೋ ಜನ
ಇಂದು ರಾಜ್ಯಾದ್ಯಂತ ವೈಕುಂಠ ಏಕಾದಶಿಯ ಸಂಭ್ರಮ ಮನೆ ಮಾಡಿದೆ. ಭಕ್ತರು ದೇವರ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತಿದ್ದರೆ. ಭಗವಾನ್ ವಿಷ್ಣುವಿನ ದರ್ಶನ ಮಾಡಲು ಬೆಳಗಿನ ಜಾವದಿಂದಲೇ ದೇವಸ್ಥಾನಗಳ ಮುಂದೆ ಭಕ್ತರು ನಿಂತಿದ್ದಾರೆ.
Updated on: Jan 02, 2023 | 10:35 AM

ವೈಕುಂಠ ಏಕಾದಶಿಯ ಪ್ರಯುಕ್ತ ಕಲಾಸಿಪಾಳ್ಯದ ಕೋಟೆ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಆಚರಿಸಲಾಗುತ್ತಿದೆ. ದೇವಸ್ಥಾನದಲ್ಲಿ ವಿಶೇಷ ಹೂವಿನ ಅಲಂಕಾರ ಮಾಡಲಾಗಿದೆ. ದೇವಸ್ಥಾನಕ್ಕೆ ಭಕ್ತ ಸಾಗರವೇ ಹರಿದು ಬಂದಿದೆ.

ಇಂದು ನಾಡಿನಾದ್ಯಂತ ವೈಕುಂಠ ಏಕಾದಶಿಯ ಹಿನ್ನಲೆ ಇಸ್ಕಾನ್ ದೇವಸ್ಥಾನದಲ್ಲಿ ಬೆಳ್ಗೆಯಿಂದಲೇ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಇಸ್ಕಾನ್ಗೆ ಇಂದು ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ಬರುವ ಸಾಧ್ಯತೆ ಇದೆ.

ಬೆಂಗಳೂರಿನ ವಯಾಲಿಕಾವಲ್ ನಲ್ಲಿರುವ ತಿರುಮಲ ತಿರುಪತಿ ದೇವಸ್ಥಾನದ ಆವರಣ ಮಧುವಣಗಿತ್ತಿಯಂತೆ ಸಿಂಗಾರ ಗೊಂಡಿದೆ. ಬಗೆಬಗೆಯ ಹೂವುಗಳಿಂದ ಸಿಂಗಾರಗೊಳಿಸಲಾಗಿದೆ.

ಬೆಂಗಳೂರಿನ ಪೂರ್ಣಪ್ರಜ್ಞಾ ಲೇಔಟ್ ನ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ವಿಶೇಷ ಪೂಜಾ ಕೈಂಕರ್ಯ ನೆರವೇರಿದೆ. ವೆಂಕಟರಮಣ ಸ್ವಾಮಿಯ ದರ್ಶನ ಪಡೆಯಲು ಭಕ್ತರು ಆಗಮಿಸುತ್ತಿದ್ದಾರೆ. ಸಂಜೆ ಆರು ಗಂಟೆಗೆ ಶ್ರೀ ನಿವಾಸ ಕಲ್ಯಾಣ ಮಹೋತ್ಸವ ಏರ್ಪಡಿಸಲಾಗಿದೆ. ಮಠಕ್ಕೆ ವಿಶೇಷವಾಗಿ ಏಳು ದ್ವಾರಗಳ ಅಲಂಕಾರ ಮಾಡಲಾಗಿದೆ. ಬೃಂದಾವನದ ಮೇಲಿರುವ ಶ್ರೀನಿವಾಸ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿದೆ. ಬೆಳಿಗ್ಗೆ 4-30 ರಿಂದ ಶ್ರೀನಿವಾಸ ದೇವರಿಗೆ ಅಭಿಷೇಕ ಆರಂಭವಾಗಿದೆ.

ಮೈಸೂರು ನಗರದಲ್ಲಿ ವೈಕುಂಠ ಏಕಾದಶಿ ಸಂಭ್ರಮ ಮನೆ ಮಾಡಿದೆ. ಮೈಸೂರು-ನಂಜನಗೂಡು ರಸ್ತೆಯಲ್ಲಿರುವ ಗಣಪತಿ ಆಶ್ರಮದ ದತ್ತ ವೆಂಕಟೇಶ್ವರ ದೇಗುಲದಲ್ಲಿ ಕಿರಿಯ ಸ್ವಾಮೀಜಿ ಶ್ರೀದತ್ತ ವಿಜಯಾನಂದ ತೀರ್ಥ ಶ್ರೀಗಳು ವಿಶೇಷ ಪೂಜೆ ನೆರವೇರಿಸಿದ್ದಾರೆ. ದತ್ತ ವೆಂಕಟೇಶ್ವರನ ದರ್ಶನ ಪಡೆಯಲು ಸಾವಿರಾರು ಭಕ್ತರು ಆಗಮಿಸಿದ್ದಾರೆ. ದೇವಸ್ಥಾನದಲ್ಲಿ ವೈಕುಂಠ ದ್ವಾರ ನಿರ್ಮಾಣ ಮಾಡಲಾಗಿದೆ.

ವೈಕುಂಠ ಏಕಾದಶಿ ಹಿನ್ನೆಲೆ ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಚಿಕ್ಕತಿರುಪತಿಯ ಪ್ರಸನ್ನ ವೆಂಕಟೇಶ್ವರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಲಾಗಿದೆ. ಮುಂಜಾನೆಯಿಂದಲೇ ಭಕ್ತರು ದೇವರ ದರ್ಶನ ಪಡೆಯುತ್ತಿದ್ದಾರೆ. ತಮಿಳುನಾಡು, ಆಂಧ್ರ, ಬೆಂಗಳೂರು ಭಾಗದಿಂದ ಭಕ್ತರು ಆಗಮಿಸುತ್ತಿದ್ದಾರೆ.




