
ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟ ನಿಹಾಲ್ ಹಾಗೂ ನಿರ್ದೇಶಕಿ ರಿಷಿಕಾ ಶರ್ಮಾ ಅವರು ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಶೀಘ್ರದಲ್ಲೇ ಈ ಜೋಡಿಯ ಮದುವೆ ನೆರವೇರಲಿದೆ.

ನಿಹಾಲ್ ಮತ್ತು ರಿಷಿಕಾ ಶರ್ಮಾ ಅವರು ಗುಡ್ ನ್ಯೂಸ್ ನೀಡಿದ್ದಾರೆ. ‘ವಿಜಯಾನಂದ’ ಸಿನಿಮಾದಲ್ಲಿ ಇವರಿಬ್ಬರು ಜೊತೆಯಾಗಿ ಕೆಲಸ ಮಾಡಿದ್ದರು. ಈಗ ಪತಿ-ಪತ್ನಿ ಆಗುತ್ತಿದ್ದಾರೆ. ಫೆಬ್ರವರಿ 15ರಂದು ಮದುವೆ ಆಗುತ್ತಿರುವುದಾಗಿ ಈ ಜೋಡಿ ತಿಳಿಸಿದೆ.

ಕಳೆದ 9 ವರ್ಷಗಳಿಂದಲೂ ನಿಹಾಲ್ ಮತ್ತು ರಿಷಿಕಾ ಶರ್ಮಾ ಪರಸ್ಪರ ಪ್ರೀತಿಸುತ್ತಿದ್ದರು. ಈಗ ಇಬ್ಬರ ಪ್ರೀತಿಗೆ ಮದುವೆ ಮುದ್ರೆ ಬೀಳುತ್ತಿದೆ. ಇಬ್ಬರಿಗೂ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು, ಆಪ್ತರು ಹಾಗೂ ಅಭಿಮಾನಿಗಳು ಅಭಿನಂದನೆ ತಿಳಿಸುತ್ತಿದ್ದಾರೆ.

ಫೆಬ್ರವರಿ 15ರಂದು ಬೆಂಗಳೂರಿನ ಮಲ್ಲೇಶ್ವರದ ಟಿಟಿಡಿ ಕಲ್ಯಾಣ ಮಂಟಪದಲ್ಲಿ ನಿಹಾಲ್ ಮತ್ತು ರಿಷಿಕಾ ಶರ್ಮಾ ಅವರು ಸಪ್ತಪದಿ ತುಳಿಯಲಿದ್ದಾರೆ. ಈ ಸಮಾರಂಭಕ್ಕೆ ಕನ್ನಡ ಚಿತ್ರರಂಗದ ಹಲವರು ಸಾಕ್ಷಿ ಆಗಲಿದ್ದಾರೆ.

ಮದುವೆ ಬಳಿಕ, ಅಂದರೆ ಫೆಬ್ರವರಿ 17ರಂದು ಮಧ್ಯಾಹ್ನ 12 ಗಂಟೆ ನಂತರ ಧಾರವಾಡದ ಶ್ರೀ ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ರಿಸೆಪ್ಷನ್ ನಡೆಸಲಾಗುವುದು. ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡು ನಿಹಾಲ್ ಮತ್ತು ರಿಷಿಕಾ ಶರ್ಮಾ ಅವರು ಸಿಹಿ ಸುದ್ದಿ ನೀಡಿದ್ದಾರೆ.
Published On - 10:27 pm, Thu, 2 February 23