Updated on:Feb 15, 2023 | 7:48 AM
ಗದಗ ತಾಲೂಕಿನ ಮುಳಗುಂದ ಪಟ್ಟಣದಲ್ಲಿ ಮೂರು ದಿನಗಳ ಕಾಲ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಮಟ್ಟದ ಕಲಿಕಾ ಹಬ್ಬದಂದು ಮತದಾರರ ಜಾಗೃತಿ ಕುರಿತು ಅರಿವು ಮೂಡಿಸಲಾಯಿತು. ಈ ವೇಳೆ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಡಾ.ಸುಶೀಲಾ ಬಿ ಅವರು ಮತದಾನದ ಪ್ರಕ್ರಿಯೆ ಬಗ್ಗೆ ತಿಳಿಸಿಕೊಟ್ಟರು.
ಕಲಿಕಾ ಹಬ್ಬದಲ್ಲಿ ಮಕ್ಕಳು ವಿವಿಧ ಕಲಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರು. ಹಬ್ಬದಲ್ಲಿ ವಿದ್ಯಾರ್ಥಿನಿಯರು ರಂಗೋಲಿ ಚಿತ್ತಾರದ ಮೂಲಕ ಮತದಾನದ ಜಾಗೃತಿ ಮೂಡಿಸಿದರು. ಮತದಾನದ ಕುರಿತು ರಂಗೋಲಿಯಲ್ಲಿ ಅರಳಿದ ಕಲೆ ಗಮನ ಸೆಳೆಯಿತು.
ಚುನಾವಣಾ ಆಯೋಗದ ಲಾಂಛನ, ಎಲೆಕ್ಟ್ರಾನಿಕ್ಸ ಮತ ಯಂತ್ರ, ಮತದಾನದಂದು ಗುರುತಿನ ಚೀಟಿ, ಮತ ಚಲಾಯಿಸುವ ದೃಶ್ಯ, ಮತದಾನ ನಮ್ಮ ಹಕ್ಕು ಎಂದು ಸಾರುವ ರಂಗೋಲಿ ಆಕರ್ಶಕವಾಗಿದ್ದವು.
ದೇಶದ ಬಾವುಟದಲ್ಲಿ ಮತದಾರರ ಸಂದೇಶ, ದೇಶದ ನಕ್ಷೆಯಲ್ಲಿ ಐಕ್ಯತೆ ಸಾರುವ ಜಾಗೃತಿ, ನಮ್ಮ ಮತ ನಮ್ಮ ಹಕ್ಕು, ಭರವಸೆಯ ನಾಳೆಗಾಗಿ ನಮ್ಮ ಮತ, ನಮ್ಮ ಮತ ನಮ್ಮ ಶಕ್ತಿ ಎಂಬಿತ್ಯಾದಿ ಘೋಷವಾಕ್ಯಗಳನ್ನೊಳಗೊಂಡ ಮತದಾರರ ಜಾಗೃತಿಯ ರಂಗೋಲಿಗಳು ಸಾರ್ವಜನಿಕರ ಗಮನ ಕೇಂದ್ರೀಕರಿಸುವಲ್ಲಿ ಯಶಸ್ವಿಯಾದವು.
ಮುಳಗುಂದದ ಎಸ್.ಜೆ.ಜೆ.ಎಂ. ಪ್ರೌಢಶಾಲೆಯ ಮಕ್ಕಳು ಮತದಾರರ ಜಾಗೃತಿ ಕುರಿತು ಕಿರುನಾಟಕ ಪ್ರದರ್ಶಿಸಿದರು. ನಾಟಕವು ಮತದಾನದ ಅಗತ್ಯತೆಯ ಕುರಿತು ಮತ್ತು ಮತದಾನದಿಂದಾಗುವ ಉಪಯೋಗ, ಮತದಾರರ ಜವಾಬ್ದಾರಿ, ಕರ್ತವ್ಯಗಳ ಕುರಿತು ಅರಿವು ಮೂಡಿಸುವಲ್ಲಿ ಯಶಸ್ವಿಕಂಡಿತು.
ಮತದಾನ ನಮ್ಮ ಹಕ್ಕು. ರಂಗೋಲಿಯಲ್ಲಿ ಅದ್ಭುತವಾಗಿ ಮೂಡಿಬಂದಿದೆ.
ಪ್ರೌಢಶಾಲಾ ಮಕ್ಕಳಿಗೆ ಏರ್ಪಡಿಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ಮತದಾರರ ಜಾಗೃತಿ ಮೂಡಿಸುವ ಚಿತ್ರಕಲೆಗಳು ಮಕ್ಕಳ ಕೈಯಲ್ಲಿ ಅದ್ಭುತವಾಗಿ ಮೂಡಿ ಬಂದವು. ಮತ ಚಲಾಯಿಸುವ ವಿಧಾನ, ಮತಗಟ್ಟೆಯ ಚಿತ್ರಣ, ಮತದಾನದ ಮಹತ್ವ ಸಾರುವ ಸಾಂದರ್ಭಿಕ ಚಿತ್ರಗಳು ಮಕ್ಕಳ ಕಲಾಕುಂಚದಲ್ಲಿ ರಂಗುರಂಗಾಗಿ ಚಿತ್ತಾರಗೊಂಡಿದ್ದು ವಿಶೇಷವಾಗಿತ್ತು.
Published On - 7:45 am, Wed, 15 February 23