ಫೇಸ್‌ಬುಕ್ ಒಡೆತನದ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸ್ಆ್ಯಪ್ ಜೂನ್ 16 ರಿಂದ ಜುಲೈ 31 ನಡುವೆ 3 ದಶಲಕ್ಷಕ್ಕೂ ಹೆಚ್ಚು ಭಾರತೀಯ ಖಾತೆಗಳನ್ನು ನಿರ್ಬಂಧಿಸಿದೆ ಎಂದು ಘೋಷಿಸಿದೆ. ಅಂದರೆ 46 ದಿನಗಳಲ್ಲಿ ಬರೋಬ್ಬರಿ 3,027,000 ಭಾರತೀಯ ಖಾತೆಗಳನ್ನು ನಿಷೇಧಿಸಿದೆ ಎಂದು ವಾಟ್ಸ್ಆ್ಯಪ್ ಹೇಳಿಕೊಂಡಿದೆ.
ಜೂನ್ 16 ರಿಂದ ಜುಲೈ 31ರ ಅವಧಿಯಲ್ಲಿ 594 ದೂರುಗಳನ್ನು ಸ್ವೀಕರಿಸಲಾಗಿದೆ. ವಾಟ್ಸ್ಆ್ಯಪ್ ಸೇವಾ ಷರತ್ತುಗಳ ಉಲ್ಲಂಘನೆ ಮತ್ತು ಬಳಕೆದಾರರ ದೂರುಗಳನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದ್ದು, ಅದರಂತೆ 30 ಲಕ್ಷಕ್ಕೂ ಅಧಿಕ ವಾಟ್ಸ್ಆ್ಯಪ್ ಖಾತೆಗಳು ಬ್ಯಾನ್ ಮಾಡಲಾಗಿದೆ ಎಂದು ವಾಟ್ಸ್ಆ್ಯಪ್ ತಿಳಿಸಿದೆ.
ಆ ಪೈಕಿ ಶೇ .95 ಕ್ಕಿಂತ ಹೆಚ್ಚು ಖಾತೆಗಳು ಸ್ಪ್ಯಾಮ್ ಸಂದೇಶಗಳನ್ನು ರವಾನಿಸುತ್ತಿತ್ತು. ಮತ್ತೊಂದೆಡೆ, ಜೂನ್ 16 ಮತ್ತು ಜುಲೈ 31 ರ ನಡುವೆ, ಇನ್‌ಸ್ಟಾಗ್ರಾಮ್‌ನಲ್ಲಿ 1,504 ದೂರುಗಳನ್ನು ಸ್ವೀಕರಿಸಲಾಗಿದೆ. ಇನ್ನುಳಿದಂತೆ 265 ದೂರುಗಳು ಬಂದಿದ್ದವು ಎಂದು ಫೇಸ್‌ಬುಕ್ ಕಂಪೆನಿ ಹೇಳಿದೆ.
ಕಳೆದ ತಿಂಗಳು ತನ್ನ ವರದಿಯಲ್ಲಿ ಮೇ 15 ರಿಂದ ಜೂನ್ 15 ರ ನಡುವೆ ಭಾರತದಲ್ಲಿ ಕನಿಷ್ಠ 20 ಲಕ್ಷ ಖಾತೆಗಳನ್ನು ನಿಷೇಧಿಸಿದೆ ಎಂದು ವಾಟ್ಸ್ಆ್ಯಪ್ ಒಡೆತನದ ಫೇಸ್‌ಬುಕ್ ಹೇಳಿತ್ತು. ಮಾಹಿತಿ ತಂತ್ರಜ್ಞಾನ (ಐಟಿ) ನಿಯಮಗಳಿಗೆ ಅನುಸಾರವಾಗಿ ಕಂಪೆನಿಯು ಈ ಕ್ರಮಗೊಳ್ಳುತ್ತಿದೆ ಎಂದು ಸ್ಪಷ್ಟಪಡಿಸಿದೆ.
ಇನ್ನೊಂದೆಡೆ ಗೂಗಲ್ ಸರ್ಚ್ ಇಂಜಿನ್ ಕೂಡ ಜುಲೈನಲ್ಲಿ, ಮೇ ಮತ್ತು ಜೂನ್ ತಿಂಗಳಲ್ಲಿ ಸ್ವೀಕರಿಸಿದ ದೂರುಗಳನ್ನು ಆಧರಿಸಿ 1.5 ಲಕ್ಷಕ್ಕೂ ಹೆಚ್ಚು ವಿಷಯವನ್ನು ತೆಗೆದುಹಾಕಿದೆ ಎಂದು ಹೇಳಿದೆ. ಇವುಗಳಲ್ಲಿ, ಶೇ. 98 ರಷ್ಟು ಕಾಪಿರೈಟ್ ದೂರುಗಳಾಗಿದ್ದವು ಎಂದು ಗೂಗಲ್ ತಿಳಿಸಿದೆ.
ಮೇ 26 ರಂದು ಜಾರಿಗೆ ಬಂದ ಹೊಸ ಐಟಿ ನಿಯಮಗಳ ಪ್ರಕಾರ ದೊಡ್ಡ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು (5 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರು) ಪ್ರತಿ ತಿಂಗಳು ವರದಿಗಳನ್ನು ಪ್ರಕಟಿಸಬೇಕು. ಸ್ವೀಕರಿಸಿದ ದೂರುಗಳ ವಿವರಗಳನ್ನು ಮತ್ತು ಕ್ರಮಗಳನ್ನು ತೆಗೆದುಕೊಳ್ಳಬೇಕು.
Published On - 7:24 pm, Wed, 1 September 21