ತನ್ನ ಅಚ್ಚರಿಯ ಫೀಚರ್ ಹಾಗೂ ಯೂಸರ್ ಫ್ರೆಂಡ್ಲಿ ಮೂಲಕ ಮನಗೆದ್ದಿರುವ ವಾಟ್ಸ್ಆ್ಯಪ್ ಅನ್ನು ಇಂದು ಬಳಸುತ್ತಿರುವವರ ಸಂಖ್ಯೆ 2 ಬಿಲಿಯನ್ ದಾಟಿದೆ. ಭಾರತದಲ್ಲೇ ಸುಮಾರು 550 ಮಿಲಿಯನ್ ಜನರು ಉಪಯೋಗಿಸುತ್ತಿದ್ದಾರೆ. ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ ಈ ವರ್ಷ ಪರಿಚಯಿಸಿರುವ ಒಂದೊಂದು ಫೀಚರ್ ಕೂಡ ಬಹಳಷ್ಟು ಪ್ರಯೋಜನಕಾರಿಯಾಗಿದೆ.
ಅತಿ ಹೆಚ್ಚು ನೂತನ ಫೀಚರ್ಗಳನ್ನು 2022 ರಲ್ಲಿ ಬಿಡುಗಡೆ ಮಾಡಿರುವ ವಾಟ್ಸ್ಆ್ಯಪ್ನಲ್ಲಿ ಇನ್ನೂ 10-15 ಅಪ್ಡೇಟ್ಗಳು ಪರೀಕ್ಷಾ ಹಂತದಲ್ಲಿದೆ. ಹೊಸ ವರ್ಷ ಆಗುಮಿಸುತ್ತಿದ್ದಂತೆ ಒಂದರ ಹಿಂದೆ ಒಂದರಂತೆ ಹೊಸ ಅಪ್ಡೇಟ್ಗಳನ್ನು ಘೋಷಿಸುವ ವಾಟ್ಸ್ಆ್ಯಪ್ ಇದೀಗ ಬಳಕೆದಾರರು ಪ್ರಮುಖ ಐದು ಚಾಟ್ಗಳನ್ನು ಪಿನ್ ಮಾಡುವಂತಹ ಆಯ್ಕೆ ನೀಡಲು ಮುಂದಾಗಿದೆ.
ಈ ಫೀಚರ್ ಮೂಲಕ ನೀವು ದಿನನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಚಾಟ್ ಮಾಡುವ ಪ್ರಮುಖ ಐದು ಚಾಟ್ಗಳನ್ನು ಪಿನ್ ಮಾಡಬಹುದಾಗಿದೆ. ಈ ಚಾಟ್ಗಳು ನಿಮ್ಮ ವಾಟ್ಸ್ಆ್ಯಪ್ ಚಾಟ್ನ ಮೇಲ್ಭಾಗದಲ್ಲಿ ಗೋಚರಿಸುತ್ತದೆ. ಸದ್ಯದಲ್ಲೇ ಈ ಆಯ್ಕೆ ಆಂಡ್ರಾಯ್ಡ್, ಐಒಎಸ್ ಮತ್ತು ವೆಬ್ ಬಳಕೆದಾರರಿಗೆ ಸಿಗಲಿದೆಯಂತೆ.
ಸದ್ಯ ಈ ಹೊಸ ಫೀಚರ್ಸ್ ಬಗ್ಗೆ ವಾಬೇಟಾಇನ್ಫೋ ವೆಬ್ಸೈಟ್ ವರದಿ ಮಾಡಿದೆ. ಪ್ರಸ್ತುತ, ವಾಟ್ಸ್ಆ್ಯಪ್ ಬಳಕೆದಾರರು ತಮ್ಮ ಚಾಟ್ ವಿಂಡೋದ ಮೇಲೆ ಕೇವಲ ಮೂರು ಚಾಟ್ಗಳನ್ನು ಮಾತ್ರ ಪಿನ್ ಮಾಡಬಹುದು. ಆದರೆ ಹೊಸ ಆಯ್ಕೆಯಲ್ಲಿ ನೀವು ಐದು ಚಾಟ್ಗಳನ್ನು ಪಿನ್ ಮಾಡುವುದಕ್ಕೆ ಅವಕಾಶ ಸಿಗಲಿದೆ.
ಇದರ ಜೊತೆಗೆ ವಾಟ್ಸ್ಆ್ಯಪ್ ತನ್ನ ಡೆಸ್ಕ್ಟಾಪ್ ಬಳಕೆದಾರರಿಗೆ ಸ್ಟೇಟಸ್ ಬಗ್ಗೆ ರಿಪೋರ್ಟ್ ಮಾಡುವ ಆಯ್ಕೆಯನ್ನು ನೀಡಲು ಮುಂದಾಗಿದೆ. ಈಗಾಗಲೇ ಬಳಕೆದಾರರು ಮೆಸೇಜ್ ಮಾಡುವುದರಲ್ಲಿ ಈ ಫೀಚರ್ ನೀಡಿದೆ.
ನಿಮ್ಮ ಕಾಂಟೆಕ್ಟ್ನಲ್ಲಿರುವ ವ್ಯಕ್ತಿಯು ಅಶ್ಲೀಲ ವಿಡಿಯೊವನ್ನು ಸ್ಟೇಟಸ್ನಲ್ಲಿ ಹಂಚಿಕೊಂಡಿದ್ದರೆ ಅಥವಾ ಜನರ ಭಾವನೆಗಳಿಗೆ ಹಾನಿ ಮಾಡುವ ಅಥವಾ ಹಿಂಸೆಯನ್ನು ಪ್ರಚೋದಿಸುವ ಯಾವುದೇ ವಿಷಯಗಳಲ್ಲಿ ಸ್ಟೇಟಸ್ನಲ್ಲಿ ಶೇರ್ ಮಾಡಿದ್ದರೆ ಈ ಕುರಿತು ರಿಪೋರ್ಟ್ ಮಾಡಬಹುದು.
ಹೊಸ ಡಿವೈಸ್ಗಳಿಗೆ ಲಾಗಿನ್ ಮಾಡುವಾಗ ಉತ್ತಮ ಭದ್ರತೆಯನ್ನು ನೀಡಲು ವಾಟ್ಸ್ಆ್ಯಪ್ ಮುಂದಾಗಿದ್ದು, ಹೊಸ ಪರಿಶೀಲನಾ ಕೋಡ್ ಅನ್ನು ನಮೂದಿಸುವ ಮೂಲಕವೇ ಹೊಸ ಡಿವೈಸ್ನಲ್ಲಿ ಲಾಗ್ ಇನ್ ಪ್ರಕ್ರಿಯೆಯಲ್ಲಿ ತೊಡಗಬಹುದು ಎಂದು ತಿಳಿಸಿದೆ.