
ಸಿಂಹಗಳು ಸಾಮಾನ್ಯವಾಗಿ ಗುಂಪಾಗಿ ಜೀವಿಸುತ್ತವೆ. ಅವುಗಳ ಸಾಮಾಜಿಕ ಜೀವನದ ಕಾರಣದಿಂದ ಅವುಗಳು ಹಲವು ಸಿಂಹಗಳ ಜೊತೆಯಾಗಿ ಬದುಕಲು ಇಷ್ಟಪಡುತ್ತವೆ. ಸಿಂಹಗಳ ಗುಂಪನ್ನು ಪ್ರೈಡ್ ಎಂದು ಕರೆಯಲಾಗುತ್ತದೆ. ಒಂದು ಪ್ರೈಡ್ನಲ್ಲಿ ಸುಮಾರು 15 ಸಿಂಹಗಳು ಇರುತ್ತವೆ. ಮತ್ತು ಅವುಗಳು ಒಂದು ಕುಟುಂಬದಂತೆ ಕಾಣುತ್ತದೆ.

ಸಿಂಹಗಳ ಪ್ರತಿ ಗುಂಪಿನಲ್ಲಿ ಗಂಡು ಹಾಗೂ ಹೆಣ್ಣು ಸಿಂಹಗಳು ಇರುತ್ತವೆ. ಅದರಲ್ಲಿ ಗಂಡು ಸಿಂಹಗಳು ಗುಂಪನ್ನು ಮುನ್ನಡೆಸುತ್ತವೆ ಹಾಗೂ ಹೆಣ್ಣು ಸಿಂಹಗಳು ತನ್ನ ಬಳಗಕ್ಕಾಗಿ ಬೇಟೆಯಾಡುತ್ತವೆ. ಗುಂಪನ್ನು ಕಾಪಾಡುವ ಜವಾಬ್ದಾರಿ ಗಂಡು ಸಿಂಹದ ಮೇಲೆ ಇದ್ದರೆ, ಬಳಗಕ್ಕೆ ಆಹಾರ ಸಂಪಾದಿಸುವ ಹೊಣೆಗಾರಿಕೆ ಹೆಣ್ಣು ಸಿಂಹಕ್ಕೆ.

ಹೆಣ್ಣು ಸಿಂಹವೇ ಗುಂಪಿಗಾಗಿ ಬೇಟೆ ಆಡುತ್ತದೆ ಎಂದು ತಿಳಿದು ನಿಮಗೆ ಆಶ್ಚರ್ಯ ಆಗಿರಬಹುದು. ಆದರೆ, ಇನ್ನೂ ವಿಶೇಷ ಅಂಶವೊಂದಿದೆ. ಅದು ಏನೆಂದರೆ, ಹೆಣ್ಣು ಸಿಂಹಗಳು ಬೇಟೆ ಆಡಿ ತಂದ ಆಹಾರವನ್ನು ಮೊದಲು ತಿನ್ನುವ ಹಕ್ಕು ಗಂಡು ಸಿಂಹಕ್ಕೆ, ಅಂದರೆ ಗುಂಪನ್ನು ಮುನ್ನಡೆಸುವ ಸಿಂಹಕ್ಕೆ ಇರುತ್ತದೆ.

ಒಂದು ಕಾಲದಲ್ಲಿ ಆಫ್ರಿಕಾ, ಏಷ್ಯಾ ಹಾಗೂ ಯುರೋಪ್ನ ಬಹುತೇಕ ಕಡೆಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಸಿಂಹಗಳು ಇದ್ದವು. ಈಗ ಗುಜರಾತ್ನ ಗಿರ್ ರಾಷ್ಟ್ರೀಯ ಉದ್ಯಾನವನದಲ್ಲಿ ಸಿಂಹಗಳನ್ನು ಕಾಣಬಹುದು. ಈ ಪಾರ್ಕ್ನ್ನು ಸಿಂಹಗಳ ಸಂರಕ್ಷಣೆಗಾಗಿಯೇ ಮೀಸಲಿಡಲಾಗಿದೆ. ಸದ್ಯ ಸುಮಾರು 350ರಿಂದ 400 ಸಿಂಹಗಳು ಇಲ್ಲಿ ಬದುಕುತ್ತಿವೆ.

ಸಿಂಹ ಘರ್ಜನೆಯು ಸುಮಾರು 8 ಕಿಲೋ ಮೀಟರ್ಗಳ ತನಕ ಕೇಳುತ್ತದೆ. ಸಿಂಹವು ಗಂಟೆಗೆ 50 ಮೈಲಿಯ ವೇಗದಲ್ಲಿ ಓಡಬಲ್ಲವು ಹಾಗೂ 36 ಅಡಿಗಳಷ್ಟು ಹಾರಬಲ್ಲವು.

ಸಿಂಹವು ಕಾಡಿನ ರಾಜ ಎಂದು ಕರೆಯಲ್ಪಡುತ್ತದೆ. ವರ್ಲ್ಡ್ ವೈಲ್ಡ್ಲೈಫ್ ಫೆಡರೇಷನ್ ಮಾಹಿತಿಯಂತೆ, ಸಿಂಹಗಳು ಆಪ್ರಿಕಾದ ಕಾಡುಗಳಲ್ಲಿ ಅಲೆದಾಡುತ್ತಿದ್ದವು. ಆದರೆ, ಈಗ ಬಹುತೇಕ ಹುಲ್ಲುಗಾವಲಿನಲ್ಲಿ ಇರಲು ಸಿಂಹಗಳು ಬಯಸುವುದು ಕಂಡುಬಂದಿದೆ.

ಸಿಂಹಕ್ಕೆ ಎಷ್ಟು ವಯಸ್ಸಾಗಿದೆ ಎಂದು ಅದರ ಗಡ್ಡವನ್ನು ನೋಡಿ ಹೇಳಬಹುದಂತೆ. ಸಿಂಹದ ಗಡ್ಡ ಎಷ್ಟು ಗಾಢ ಬಣ್ಣವನ್ನು ಹೊಂದಿರುತ್ತದೋ ಅದಕ್ಕೆ ಅಷ್ಟು ವಯಸ್ಸಾಗಿದೆ ಎಂದು ಹೇಳಲಾಗುತ್ತದೆ.

ಸಿಂಹಗಳ ನಡಿಗೆಯ ಬಗ್ಗೆ ಕುತೂಹಲಕಾರಿ ಮಾಹಿತಿ ಇಲ್ಲಿದೆ. ಅದೇನೆಂದರೆ, ಸಿಂಹಗಳು ನಡೆಯುವಾಗ ಅವುಗಳ ಹಿಮ್ಮಡಿ ನೆಲಕ್ಕೆ ತಾಗುವುದಿಲ್ಲವಂತೆ.

ಇನ್ನೂ ಒಂದು ಅಚ್ಚರಿ ಏನು ಗೊತ್ತೇ? ಸಿಂಹಗಳು ದಿನದಲ್ಲಿ 20 ಗಂಟೆಗಳ ಕಾಲವೂ ನಿದ್ರಿಸಬಲ್ಲವು! ಹಾಗೂ ಸಿಂಹವನ್ನು ಆಲಸಿ ಪ್ರಾಣಿ ಎಂದೂ ಗುರುತಿಸಲಾಗುತ್ತದೆ.
Published On - 8:44 pm, Tue, 10 August 21