ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ, ಮಾಜಿ ಸಚಿವ ಅನಂತ್ ನಾಗ್ (Anant Nag) ಬಿಜೆಪಿ ಪಕ್ಷ ಸೇರ್ಪಡೆ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ. ಅನಂತ್ ನಾಗ್ ಅವರು ಇಂದು(ಫೆ.22) ಸಂಜೆ ಬೆಂಗಳೂರಿನ ಕಚೇರಿಯಲ್ಲಿ ಬಿಜೆಪಿ ಸೇರ್ಪಡೆಗೆ ಮುಹೂರ್ತ ಫಿಕ್ಸ್ ಆಗಿತ್ತು. ಆದ್ರೆ, ಅನಂತ್ ನಾಗ್ ಪಕ್ಷ ಸೇರ್ಪಡೆ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ನಡೆದ ಪಕ್ಷ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರು ಬಿಜೆಪಿ ಸೇರಿದರು. ಇನ್ನು ಅನಂತ್ ನಾಗ್ ಈಗ ಬರ್ತಾರೆ, ಇನ್ನು ಸ್ವಲ್ಪ ಹೊತ್ತಿನಲ್ಲಿ ಬರುತ್ತಾರೆ ಎಂದು ಕಾದು ಕುಳಿತರು. ಕೊನೆ ಕ್ಷಣದಲ್ಲಿ ಅವರು ಪಕ್ಷ ಸೇರ್ಪಡೆಯನ್ನು ಕ್ಯಾನ್ಸಲ್ ಮಾಡಿದ್ದು, ತೀವ್ರ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: Anant Nag: ಇಂದು ಸಂಜೆ ಬಿಜೆಪಿ ಸೇರಲಿದ್ದಾರೆ ಹಿರಿಯ ನಟ ಅನಂತ್ ನಾಗ್
ಹೌದು…ಜನತದಳದಿಂದ ರಾಜಕೀಯ ಪ್ರವೇಶ ಮಾಡಿದ್ದ ಅನಂತ್ ನಾಗ್ 2004 ಚುನಾವಣೆ ಬಳಿಕ ದೂರ ಉಳಿದಿದ್ದರು. ಇದೀಗ ಬಿಜೆಪಿ ಸೇರ್ಪಡೆಗೆ ಮುಂದಾಗಿದ್ದಾರೆ. ಅದರಂತೆ ಇಂದು ಸಂಜೆ 4.30 ಪಕ್ಷ ಸೇರ್ಪಡೆ ಕಾರ್ಯಕ್ರಮವನ್ನು ಬಿಜೆಪಿ ಕಚೇರಿಯಲ್ಲಿ ಆಯೋಜಿಸಲಾಗಿತ್ತು. ಆದ್ರೆ, ಸೇರ್ಪಡೆ ಕಾರ್ಯಕ್ರಮಕ್ಕೆ ಗೈರಾಗಿದ್ದು, ಒಂದು ವಾರದ ಬಳಿಕ ರಾಷ್ಟ್ರೀಯ ನಾಯಕರ ಸಮ್ಮುಖದಲ್ಲಿ ಸೇರ್ಪಡೆಯಾಗಲಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಅಲ್ಲದೇ ಅನಂತ್ ನಾಗ್ ಗೈರಾಗುವ ಮೂಲಕ ಬಿಜೆಪಿ ಸೇರ್ಪಡೆಯಿಂದ ದೂರ ಉಳಿದರಾ? ಎಂಬ ಪ್ರಶ್ನೆ ಮೂಡಿದೆ.
ಮಾಹಿತಿ ಪ್ರಕಾರ ಮುಂದಿನ ವಾರ ರಾಷ್ಟ್ರೀಯ ನಾಯಕ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ. ಇದೇ ಫೆ.27ರಂದು ಶಿವಮೊಗ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಈ ವೇಳೆ ಏನಾದರೂ ಬಿಜೆಪಿ ಸೇರ್ಪಡೆಯಾಗುತ್ತಾರಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.
ಅನಂತ್ ನಾಗ್ ಬಿಜೆಪಿ ಸೇರಲಿದ್ದಾರೆ ಎನ್ನುವ ಹೊರಬೀಳುತ್ತಿದ್ದಂತೆಯೇ ರಾಜ್ಯದಾದ್ಯಂತ ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧದ ಚರ್ಚೆಗಳು ನಡೆದಿದ್ದವು. ಕೆಲವರು ಬಿಜೆಪಿ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿದ್ರೆ, ಇನ್ನೂ ಕೆಲವರು ಒಳ್ಳೆಯ ನಿರ್ಧಾರ ಎಂದಿದ್ದಾರೆ. ಇನ್ನಷ್ಟು ಜನ ಈ ರಾಜಕೀಯ ಸಹವಾಸ ಬೇಡವಾಗಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Published On - 8:41 pm, Wed, 22 February 23