ಗುವಾಹಟಿ: ಬಿಹಾರದಲ್ಲಿ ಬಿಜೆಪಿ (BJP) ಜೊತೆಗಿನ ಮೈತ್ರಿಯನ್ನು ಮುರಿದುಕೊಂಡು ಆರ್ಜೆಡಿ (RJD) ಜೊತೆ ಕೈಜೋಡಿಸಿ ಹೊಸ ಸರ್ಕಾರ ರಚಿಸುವ ಮೂಲಕ ನಿತೀಶ್ ಕುಮಾರ್ (Nitish Kumar) ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಆದರೆ, ನಿತೀಶ್ ಕುಮಾರ್ಗೆ ಇದೀಗ ಮತ್ತೊಂದು ಶಾಕ್ ಎದುರಾಗಿದ್ದು, ಮಣಿಪುರದಲ್ಲಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷದ 6 ಶಾಸಕರ ಪೈಕಿ ಐವರು ಶುಕ್ರವಾರ ಆಡಳಿತಾರೂಢ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಮಣಿಪುರ ವಿಧಾನಸಭೆ ಕಾರ್ಯದರ್ಶಿ ಕೆ. ಮೇಘಜಿತ್ ಸಿಂಗ್ ಸಹಿ ಮಾಡಿರುವ ಹೇಳಿಕೆಯಲ್ಲಿ ಬಿಜೆಪಿಯೊಂದಿಗೆ ಐವರು ಜೆಡಿಯು ಶಾಸಕರ ವಿಲೀನವನ್ನು ಅಂಗೀಕರಿಸಲು ಸ್ಪೀಕರ್ ಸಂತಸ ವ್ಯಕ್ತಪಡಿಸಿದ್ದಾರೆ. ಈಶಾನ್ಯದಲ್ಲಿ ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷದ ಶಾಸಕರನ್ನು ಬಿಜೆಪಿ ಗುರಿಯಾಗಿಸಿದ್ದು ಇದು ಎರಡನೇ ಬಾರಿ. 2020ರಲ್ಲಿ ಅರುಣಾಚಲ ಪ್ರದೇಶದಲ್ಲಿ 7 ಜೆಡಿಯು ಶಾಸಕರ ಪೈಕಿ 6 ಮಂದಿ ಬಿಜೆಪಿಗೆ ಸೇರಿದ್ದರು. ಈ ವರ್ಷ ಮಾರ್ಚ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು ಸ್ಪರ್ಧಿಸಿದ್ದ 38 ಕ್ಷೇತ್ರಗಳ ಪೈಕಿ 6ರಲ್ಲಿ ಗೆದ್ದಿತ್ತು. ಬಿಜೆಪಿಗೆ ಸೇರ್ಪಡೆಯಾದ ಶಾಸಕರೆಂದರೆ ಕೆ.ಎಚ್. ಜೋಯ್ಕಿಶನ್, ಎನ್. ಸನತೆ, ಎಂಡಿ ಅಚಾಬ್ ಉದ್ದೀನ್, ಮಾಜಿ ಡಿಜಿಪಿ ಎಲ್ಎಂ ಖೌಟೆ ಮತ್ತು ತಂಗಜಮ್ ಅರುಣ್ ಕುಮಾರ್.
ಇದನ್ನೂ ಓದಿ: ಬಿಹಾರದಲ್ಲಿ ಬಿಜೆಪಿ-ಜೆಡಿಯು ಮೈತ್ರಿ ಸರ್ಕಾರ ಪತನ; ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ
ಎಲ್ಎಂ ಖೌಟೆ ಮತ್ತು ಅರುಣ್ ಕುಮಾರ್ ಈ ಹಿಂದೆ ಬಿಜೆಪಿಯಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರಯತ್ನಿಸಿದ್ದರು. ಆದರೆ, ಬಿಜೆಪಿ ಪಕ್ಷದಿಂದ ತಿರಸ್ಕರಿಸಲ್ಪಟ್ಟ ನಂತರ ಜೆಡಿಯು ಸೇರಿದ್ದರು. ಬಿಹಾರದಲ್ಲಿ 9 ವರ್ಷಗಳಲ್ಲಿ ಎರಡನೇ ಬಾರಿಗೆ ಕೇಸರಿ ಪಕ್ಷದೊಂದಿಗಿನ ಮೈತ್ರಿಯನ್ನು ಜೆಡಿಯು ಮುರಿದುಕೊಂಡ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಈ ವರ್ಷದ ಮಾರ್ಚ್‌ನಲ್ಲಿ ನಡೆದ ಮೈಪುರ್ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು ಸ್ಪರ್ಧಿಸಿದ್ದ 38 ಕ್ಷೇತ್ರಗಳ ಪೈಕಿ ಆರರಲ್ಲಿ ಗೆದ್ದಿತ್ತು. ನಿತೀಶ್ ಕುಮಾರ್ ಬಿಜೆಪಿಯನ್ನು ತ್ಯಜಿಸಿ ತೇಜಸ್ವಿ ಯಾದವ್ ಅವರ ಜೆಡಿಯು, ಕಾಂಗ್ರೆಸ್ ಮತ್ತು ಇತರ ಪಕ್ಷಗಳೊಂದಿಗೆ ಸೇರಿಕೊಂಡು ಬಿಜೆಪಿಯನ್ನು ಬಿಟ್ಟು, ಬಿಹಾರದಲ್ಲಿ ಸಮ್ಮಿಶ್ರ ಸರ್ಕಾರವನ್ನು ರಚಿಸಿದ ಬೆನ್ನಲ್ಲೇ ಮಣಿಪುರದ ಜೆಡಿಯು ಶಾಸಕರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.
Published On - 10:27 am, Sat, 3 September 22