Hassan: ಮನೆ ಹಾಳು ಮಾಡೋರು ಒಳಗಿನವರೇ: ಎ ಮಂಜು ವಿಚಾರಕ್ಕೆ ರೇವಣ್ಣ ವಿರುದ್ಧ ಹಾಲಿ ಶಾಸಕ ಗುಡುಗು
Karnataka Politics: ಎ ಮಂಜು ಜೆಡಿಎಸ್ ಸೇರುತ್ತಿರುವುದು ಅರಕಲಗೂಡು ಕ್ಷೇತ್ರದಲ್ಲಿ ಸಂಚಲನವನ್ನೇ ಸೃಷ್ಟಿಸಿದೆ. ಹಾಲಿ ಜೆಡಿಎಸ್ ಶಾಸಕ ಎ.ಟಿ. ರಾಮಸ್ವಾಮಿ ಭಾರೀ ಅಸಮಾಧಾನಗೊಂಡಿದ್ದು ಅವರು ಬಿಜೆಪಿ ಸೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಕುರಿತು ಒಂದು ವರದಿ.
ಹಾಸನ: ದೇವೇಗೌಡರ ಕುಟುಂಬ, ಅದರಲ್ಲೂ ಹೆಚ್ಡಿ ರೇವಣ್ಣ ಮತ್ತವರ ಕುಟುಂಬದ ವಿರುದ್ಧ ನಿರಂತರವಾಗಿ ರಾಜಕೀಯ ಹೋರಾಟಗಳನ್ನು ಮಾಡುತ್ತಾ ಬಂದಿದ್ದ ಅರಕಲಗೂಡು ಕ್ಷೇತ್ರದ ಮಾಜಿ ಶಾಸಕ ಎ ಮಂಜು ಈಗ ಜೆಡಿಎಸ್ ಪಕ್ಷಕ್ಕೆ (A Manju Joining JDS) ಬರಲಿದ್ದಾರೆ ಎಂಬ ಸುದ್ದಿ ದಟ್ಟವಾಗಿದೆ. ಈ ಬೆಳವಣಿಗೆ ಬಗ್ಗೆ ಅರಕಲಗೂಡು ಕ್ಷೇತ್ರದ ಹಾಲಿ ಜೆಡಿಎಸ್ ಶಾಸಕ ಎ.ಟಿ. ರಾಮಸ್ವಾಮಿ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎ ಮಂಜು ಜೆಡಿಎಸ್ ಸೇರ್ಪಡೆಯಾಗುವುದಕ್ಕೆ ಸಂಚು ನಡೆದಿದೆ. ಅವರ ಆಗಮನದಿಂದ ಹಾಸನದಲ್ಲಿ ಜೆಡಿಎಸ್ ಪಕ್ಷ ಹಾಳಾಗುತ್ತದೆ ಎಂದು ನಾಲ್ಕು ಬಾರಿಯ ಶಾಸಕ ರಾಮಸ್ವಾಮಿ ಎಚ್ಚರಿಸಿದ್ದಾರೆ.
“ಮನೆ ಹಾಳಾಗುತ್ತಿರುವುದಕ್ಕೆ ಹೊಗಿನವರನ್ನು ಯಾಕೆ ದೂಷಿಸಲಿ? ಮನೆಯೊಳಗೆ ಇರುವಂಥ ಜನರೇ ತಾನೇ ಮನೆ ಹಾಳು ಮಾಡೋದು. ಅವರ ಮನೆಗೆ ಅವರೇ ಬೆಂಕಿ ಹಾಕಿಕೊಂಡಿದ್ದಾರೆ” ಎಂದು ಹೆಚ್ಡಿ ರೇವಣ್ಣರ ಹೆಸರೆತ್ತದೆಯೇ ಪರೋಕ್ಷವಾಗಿ ಹರಿಹಾಯ್ದ ಎ.ಟಿ. ರಾಮಸ್ವಾಮಿ, ಮುಂದಿನ ದಿನಗಳಲ್ಲಿ ಈ ಬೆಂಕಿ ಯಾರನ್ನು ಸುಡುತ್ತದೆ ಕಾದು ನೋಡಿ ಎಂದು ಹೇಳುವ ಮೂಲಕ ಜೆಡಿಎಸ್ ಪಕ್ಷಕ್ಕೆ ವಿನಾಶ ಕಾದಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
“ರೇವಣ್ಣ ನಮ್ಮ ಮನೆಗೆ ಎರಡು ದಿನ ಬಂದಿದ್ದರು. ಕೆಲವು ಗೊಂದಲಗಳು, ಸಮಸ್ಯೆಗಳಿವೆ. ದೊಡ್ಡವರ ಜೊತೆ ಮಾತನಾಡಿ ಅವನ್ನು ಬಗೆಹರಿಸಿಕೊಳ್ಳೋಣ ಎಂದು ನಾನು ಹೇಳಿದ್ದಕ್ಕೆ ಹೂಂ ಎಂದು ಹೋದರು. ಜನವರಿ 22ಕ್ಕೆ ದೊಡ್ಡ ಕಾರ್ಯಕ್ರಮ ಇತ್ತು. ಜನವರಿ 21ರಂದು ಏನೋ ಸಂಚು ನಡೆದಿದೆ. ಈ ಸಂಚಿನ ಹಿಂದೆ ಯಾರ್ಯಾರು ಇದ್ದಾರೋ ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ” ಎಂದು ಅರಕಲಗೂಡು ಶಾಸಕರು ಹೇಳಿದರು.
ಎ ಮಂಜು ಜೆಡಿಎಸ್ ಸೇರ್ಪಡೆಯಾಗುವುದನ್ನು ತಾನು ಬಹಳ ಹಿಂದೆಯೇ ನಿರೀಕ್ಷೆ ಮಾಡಿದ್ದೆ. ಒಟ್ಟಾರೆ ರಾಜಕಾರಣ ತುಂಬ ಕೆಟ್ಟು ಹೋಗಿದೆ. ಅರಕಲಗೂಡು ಕ್ಷೇತ್ರದಲ್ಲಿ ಅಪವಿತ್ರ ಮೈತ್ರಿ ಮಾಡಿಕೊಂಡು ಸ್ವಾರ್ಥಕ್ಕಾಗಿ ರಾಜಕಾರಣ ಮಾಡಲು ಮುಂದಾಗಿದ್ದಾರೆ. ಬಹಳ ಕಾಲ ಇದು ಬಾಳಿಕೆಗೆ ಬರುವುದಿಲ್ಲ ಎಂದು ಎ.ಟಿ. ರಾಮಸ್ವಾಮಿ ಖೇದ ವ್ಯಕ್ತಪಡಿಸಿದರು.
ಇದನ್ನೂ ಓದಿ: Tv9 Web Exclusive: ಹಾಸನಕ್ಕೆ ಭವಾನಿ ರೇವಣ್ಣ ಪಟ್ಟು, ಎಚ್ಡಿಕೆ ರಹಸ್ಯ ಮಾತುಕತೆ; ಜೆಡಿಎಸ್ ಪಾಳಯದಲ್ಲಿ ಮಹತ್ವದ ಬೆಳವಣಿಗೆ
ಇನ್ನು, ಜೆಡಿಎಸ್ನೊಳಗೆ ಇನ್ನಷ್ಟು ಒಳಸಂಚಿನ ಪ್ರಕರಣಗಳನ್ನು ರಾಮಸ್ವಾಮಿ ಈ ಸಂದರ್ಭದಲ್ಲಿ ಉಲ್ಲೇಖಿಸಿದರು. ಹಾಗೆಯೇ, ಜೆಡಿಎಸ್ ಪಕ್ಷದೊಳಗೆ ಕೆಲ ಕಾಲ ಚಟುವಟಿಕೆಗಳಿಂದ ತಾನು ದೂರ ಉಳಿಯಲು ಕಾರಣ ಏನೆಂಬ ಸಂಗತಿಯನ್ನೂ ಬಯಲುಗೊಳಿಸಿದರು.
ಕೊಡಗು ಜಿಲ್ಲೆಯಲ್ಲಿ ಜೆಡಿಎಸ್ನಿಂದ ಮುಸ್ಲಿಂ ಅಭ್ಯರ್ಥಿಯೊಬ್ಬರಿಗೆ ಟಿಕೆಟ್ ನೀಡಲಾಗಿತ್ತು. ಆದರೆ, ನಂತರ ಮುಸ್ಲಿಂ ಅಭ್ಯರ್ಥಿಯನ್ನು ವಾಪಸ್ ತೆಗೆಸಿದರು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಅನುಕೂಲ ಮಾಡಿಕೊಡಲು ಈ ಒಳಸಂಚು ಮಾಡಿದ್ದರು. ನನ್ನ ಗಮನಕ್ಕೆ ಈ ಸಂಗತಿ ಮೊದಲೇ ಬಂದಿತ್ತು. ಅದಕ್ಕಾಗಿ ನಾನು ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದು ನಿಜ ಎಂದು ಅವರು ವಿವರ ನೀಡಿದರು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ವಿಷಯಗಳ ಬಗ್ಗೆ ಕೂಲಂಕಷವಾಗಿ ಮಾತನಾಡುವುದಾಗಿಯೂ ಅವರು ಹೇಳಿದರು.
ರಾಜಕೀಯದಿಂದ ದೂರವಾಗ್ತಾರಾ ಎಟಿಆರ್?
ಎ.ಟಿ. ರಾಮಸ್ವಾಮಿ ಅವರನ್ನು ಮೂಲೆಗುಂಪು ಮಾಡಲೆಂದೇ ಎ ಮಂಜು ಅವರನ್ನು ಜೆಡಿಎಸ್ ಪಕ್ಷದೊಳಗೆ ಕರೆತರಲಾಗುತ್ತಿದೆ. ರಾಮಸ್ವಾಮಿ ರಾಜಕೀಯದಿಂದ ದೂರ ಉಳಿಯಬೇಕಾಗುತ್ತದೆ ಎಂಬ ಮಾತು ಹಾಸನದ ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ. ಆದರೆ, ತಾನು ರಾಜಕಾರಣದಲ್ಲಿ ಖಂಡಿತವಾಗಿ ಮುಂದುವರಿಯುತ್ತೇನೆ ಎಂದು ರಾಮಸ್ವಾಮಿ ಸ್ಪಷ್ಟಪಡಿಸಿದರು.
ನಾನು ಯಾವತ್ತೂ ಸ್ವಾರ್ಥಕ್ಕಾಗಿ ರಾಜಕಾರಣ ಮಾಡಿಲ್ಲ. ಜನರಿಗೋಸ್ಕರ ರಾಜಕಾರಣ ಮಾಡಿದ್ದೇನೆ. ಹೀಗಾಗಿ, ನಾನು ನೆಮ್ಮದಿಯಾಗಿ, ಸಂತೋಷವಾಗಿ, ಖುಷಿಯಾಗಿ ಇದೀನಿ. ಎಲ್ಲಿಯವರೆಗೆ ನನಗೆ ಶಕ್ತಿ ಇರುತ್ತದೆಯೋ ಅಲ್ಲಿಯವರೆಗೆ ಅನ್ಯಾಯ, ಅಸತ್ಯ, ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಲೇ ಇರುತ್ತೇನೆ. ಎಲ್ಲವನ್ನೂ ಜನರ ತೀರ್ಮಾನಕ್ಕೆ ಬಿಟ್ಟಿದ್ದೇನೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ: ದಾವಣಗೆರೆಯಲ್ಲಿ ಬಿಜೆಪಿ ಮಹಾಸಂಗಮ, 2 ತಿಂಗಳಲ್ಲಿ 200 ರೋಡ್ ಶೋ, 4 ದಿಕ್ಕಲ್ಲೂ ರಥಯಾತ್ರೆ
ಎ.ಟಿ. ರಾಮಸ್ವಾಮಿ 1989, 1994, 2004 ಮತ್ತು 2018ರಲ್ಲಿ ನಾಲ್ಕು ಬಾರಿ ಅರಕಲಗೂಡು ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಚುನಾಯಿತರಾಗಿದ್ದಾರೆ. 2018ರಲ್ಲಿ ಅವರು ಎ ಮಂಜು ಅವರನ್ನು ಸೋಲಿಸಿದ್ದರು.
ಇನ್ನು, ಎ ಮಂಜು ಮೊದಲ ಬಾರಿಗೆ ಶಾಸಕರಾಗಿದ್ದು 1999ರಲ್ಲಿ. ಆಗ ಬಿಜೆಪಿ ಟಿಕೆಟ್ನಿಂದ ಗೆದ್ದಿದ್ದರು. ಬಳಿಕ ಕಾಂಗ್ರೆಸ್ ಸೇರಿ 2008 ಮತ್ತು 2013ರಲ್ಲಿ ಅರಕಲಗೂಡು ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದರು. ಸಿದ್ದರಾಮಯ್ಯರ ನೆಚ್ಚಿನ ಬಂಟರಲ್ಲಿ ಒಬ್ಬರೆನಿಸಿದ್ದರು. 2014ರಲ್ಲಿ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಎಚ್ಡಿ ದೇವೇಗೌಡರ ವಿರುದ್ಧವೇ ಸ್ಪರ್ಧಿಸಿ ಹೀನಾಯವಾಗಿ ಸೋತರು. ಬಳಿಕ ಬಿಜೆಪಿ ವಾಪಸ್ ಹೋದ ಅವರು ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ನ ಪ್ರಜ್ವಲ್ ರೇವಣ್ಣ ವಿರುದ್ಧವೂ ಸೋತರು. ನಂತರ ಬಿಜೆಪಿಯಲ್ಲಿ ಮೂಲೆಗುಂಪಾಗಿದ್ದ ಮಂಜು ಮತ್ತೆ ಕಾಂಗ್ರೆಸ್ ಸೇರಬಹುದು ಎಂಬ ನಿರೀಕ್ಷೆ ಇರುವಾಗಲೀ ಈಗ ತಮ್ಮ ರಾಜಕೀಯ ಕಡುವೈರಿ ಪಕ್ಷ ಜೆಡಿಎಸ್ ಅನ್ನು ಅಪ್ಪಿಕೊಳ್ಳುತ್ತಿದ್ದಾರೆ.
ಬಿಜೆಪಿಯತ್ತ ರಾಮಸ್ವಾಮಿ?
ಅರಕಲಗೂಡು ಮಂಜು ಜೆಡಿಎಸ್ ಪಕ್ಷ ಸೇರುವ ಸುದ್ದಿ ಬರುತ್ತಿರುವಂತೆಯೇ ಈ ಕ್ಷೇತ್ರದ ಜೆಡಿಎಸ್ನೊಳಗೆ ದೊಡ್ಡ ಸಂಚಲನವೇ ಸೃಷ್ಟಿಯಾಗಿದೆ. ಬಹಳಷ್ಟು ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಹಂಚಿಹೋಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕೆಲ ವರದಿಗಳ ಪ್ರಕಾರ ಎ.ಟಿ. ರಾಮಸ್ವಾಮಿ ಅವರು ಬಿಜೆಪಿ ಸೇರುವ ಸಾಧ್ಯತೆ ಇದೆ. ಕಳೆದ ಕೆಲ ತಿಂಗಳುಗಳಿಂದ ಅವರು ಜೆಡಿಎಸ್ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿರುವುದು ಮತ್ತು ಕಾಂಗ್ರೆಸ್ ಪಕ್ಷದ ವಿರುದ್ಧ ಟೀಕೆಗಳನ್ನು ಮಾಡುತ್ತಿರುವುದು ಅವರು ಬಿಜೆಪಿ ಸೇರುವ ಸಾಧ್ಯತೆಯನ್ನು ಪುಷ್ಟೀಕರಿಸುತ್ತವೆ.
Published On - 11:07 am, Sun, 5 February 23