ಹುಬ್ಬಳ್ಳಿ: ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಕಾರ್ಯಕಾರಿಣಿಯಲ್ಲಿ ಚರ್ಚೆ ಇಲ್ಲ. ವರಿಷ್ಠರ ಜತೆ ಚರ್ಚಿಸಿ ಆ ಬಗ್ಗೆ ಸಿಎಂ ನಿರ್ಧಾರ ಮಾಡ್ತಾರೆ. ಸಿಎಂ ಬದಲಾವಣೆ ಇಲ್ಲ ಎಂದು ಹಲವು ಬಾರಿ ಹೇಳಿದ್ದೇನೆ. ಬೊಮ್ಮಾಯಿ ನೇತೃತ್ವದಲ್ಲಿ 2023ರ ಚುನಾವಣೆ ಎದುರಿಸ್ತೇವೆ ಎಂದು ಹುಬ್ಬಳ್ಳಿಯಲ್ಲಿ ಕಾರ್ಯಕಾರಿಣಿ ಸಭೆ ಬಳಿಕ ಪ್ರಲ್ಹಾದ್ ಜೋಶಿ ಹೇಳಿಕೆ ನೀಡಿದ್ದಾರೆ.
ಕೇಂದ್ರ, ರಾಜ್ಯ ಸರ್ಕಾರದ ಪ್ರಮುಖ ಅಂಶಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸಿದ್ದಕ್ಕೆ ಅಭಿನಂದನೆ ಸಲ್ಲಿಸಲಾಗಿದೆ. ಇಂದಿನ ಸಭೆಯಲ್ಲಿ ಸಿಎಂಗೆ ಅಭಿನಂದನೆಯನ್ನ ಸಲ್ಲಿಸಿದ್ದೇವೆ. ಮುಂದೆ ವಿಧಾನಪರಿಷತ್ನಲ್ಲೂ ಜಾರಿ ಮಾಡಲಾಗುವುದು ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಇಂತಹ ಮುಖ್ಯಮಂತ್ರಿಯನ್ನು ನಾನು ಎಲ್ಲಿಯೂ ನೋಡಿಲ್ಲ: ಸಿಎಂ ಬೊಮ್ಮಾಯಿಗೆ ಅರುಣ್ ಸಿಂಗ್ ಪ್ರಶಂಸೆ
ಸಿಎಂ ಬೊಮ್ಮಾಯಿ ನೇತೃತ್ವದ ಸರ್ಕಾರ 100 ದಿನ ಪೂರೈಸಿದೆ. 100 ದಿನಗಳಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗಳನ್ನು ಮಾಡಿದ್ದಾರೆ. ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ಜಾರಿಗೆ ತಂದಿದ್ದಾರೆ. ರಾಜ್ಯ ಸರ್ಕಾರ ನೀರಾವರಿಗೆ ಹೆಚ್ಚಿನ ಆದ್ಯತೆ ಕೊಟ್ಟಿದ್ದಾರೆ. ಪ್ರವಾಹ ಸಂದರ್ಭದಲ್ಲಿ ಸ್ಥಳಗಳಿಗೆ ತೆರಳಿ ಪರಿಶೀಲಿಸಿದ್ದಾರೆ. ಬೊಮ್ಮಾಯಿ ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಟಿವಿ9ಗೆ ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ತಿಳಿಸಿದ್ದಾರೆ.
ರಾಜ್ಯ ಸರ್ಕಾರದಿಂದ ವಸತಿ ನಿರ್ಮಾಣ ಮಾಡದ ವಿಚಾರವಾಗಿ ಅರುಣ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸುಳ್ಳುಗಾರ. ಹೀಗಾಗಿ ಮನೆಗಳನ್ನು ವಿತರಿಸಿಲ್ಲ ಎಂದು ಸುಳ್ಳು ಹೇಳುತ್ತಾರೆ. ನಾವು ಮನೆ ಕಟ್ಟಿಸಿಕೊಟ್ಟಿರುವ ದಾಖಲೆಗಳನ್ನು ಕೊಡುತ್ತೇವೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಹಿಂದೂ ಕಾರ್ಯಕರ್ತ ಹತ್ಯೆ, ನೀರಾವರಿ ಇಲಾಖೆಯಲ್ಲಿ ಸಾಕಷ್ಟು ಗೋಲ್‌ಮಾಲ್ ನಡೆದಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಬಹಳಷ್ಟು ಅವ್ಯವಹಾರ ನಡೆದಿದೆ. ಆದರೆ ಅವರು ಬೊಮ್ಮಾಯಿ ವಿರುದ್ಧ ಸಾಕಷ್ಟು ಆರೋಪ ಮಾಡುತ್ತಾರೆ ಎಂದು ಹೇಳಿದ್ದಾರೆ.
ಸಿಎಂ ಬೊಮ್ಮಾಯಿ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆದಿಲ್ಲ. ಒಂದೇ ಒಂದು ರೂಪಾಯಿಯಷ್ಟು ಭ್ರಷ್ಟಾಚಾರ ನಡೆದಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಸಿಂಪಲ್ ಸಿಎಂ ಆಗಿದ್ದಾರೆ. ಇಂತಹ ಮುಖ್ಯಮಂತ್ರಿಯನ್ನು ನಾನು ಎಲ್ಲಿಯೂ ನೋಡಿಲ್ಲ. ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಚುನಾವಣೆ ನಡೆಯುತ್ತೆ. ಬೆಳಗಾವಿ ಸೋಲಿನ ಬಗ್ಗೆ ಪಕ್ಷದಲ್ಲಿ ಚರ್ಚೆ ನಡೆಸುತ್ತಿದ್ದೇವೆ ಎಂದು ಅರುಣ್ ಸಿಂಗ್ ವಿವರಿಸಿದ್ದಾರೆ.
ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಸಲಾಗಿದೆ. ಬಿಜೆಪಿ ಕಾರ್ಯಕಾರಿಣಿಗೆ ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಚಾಲನೆ ನೀಡಿದ್ದಾರೆ. ಕಾರ್ಯಕಾರಿಣಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಡಿ.ವಿ. ಸದಾನಂದ ಗೌಡ ಸೇರಿದಂತೆ 70ಕ್ಕೂ ಹೆಚ್ಚು ಶಾಸಕರು ಭಾಗಿ ಆಗಿದ್ದಾರೆ. ಬಿಜೆಪಿ ಪದಾಧಿಕಾರಿಗಳು, ಪ್ರಧಾನ ಕಾರ್ಯದರ್ಶಿಗಳು ಭಾಗಿ ಆಗಿದ್ದಾರೆ.
ಅವಿಶ್ರಮಿತವಾಗಿ ದಣಿವರಿಯದೇ ಕೆಲಸ ಮಾಡುವ ಶಕ್ತಿ ನನ್ನಲಿದೆ: ಸಿಎಂ ಬಸವರಾಜ ಬೊಮ್ಮಾಯಿ
ವರ್ಷದ 365 ದಿನಗಳು ಅವಿಶ್ರಮಿತವಾಗಿ ದಣಿವರಿಯದೇ ಕೆಲಸ ಮಾಡುವ ಶಕ್ತಿ, ಸ್ಪೂರ್ತಿ ನನ್ನಲ್ಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಮುಖ್ಯಮಂತ್ರಿಗಳು ಕೆಲಸಮಯ ವಿಶ್ರಮಿಸಬೇಕೆನ್ನುವ ಎಂ.ಪಿ.ಕುಮಾರಸ್ವಾಮಿ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿ, ನಾನು ದಣಿವರಿಯದೇ ಕೆಲಸ ಮಾಡುವ ಶಕ್ತಿ ಹೊಂದಿದ್ದೇನೆ. ದಿನದಲ್ಲಿ ಕನಿಷ್ಟ 15 ತಾಸು ಕೆಲಸ ಮಾಡುವ ಸಂಕಲ್ಪ ಮಾಡಿದ್ದೇನೆ. 2023ರ ಚುನಾವಣೆಯಲ್ಲಿ ಮತ್ತೊಮ್ಮೆ ಭಾರತೀಯ ಜನತಾ ಪಕ್ಷವನ್ನು ಅಧಿಕಾರಕ್ಕೆ ತರುವುದು ನನ್ನ ಗುರಿ. ಈ ನಿಟ್ಟಿನಲ್ಲಿ ತಯಾರಿಯನ್ನು ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಇಂದು ಮತ್ತು ನಾಳೆ ಬಿಜೆಪಿ ಪಕ್ಷದ ಕಾರ್ಯಕಾರಣಿ ಸಭೆ ನಡೆಯಲಿದ್ದು, ಪಕ್ಷದ ಸಂಘಟನೆ ಹಾಗೂ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು. ಕಾರ್ಯಕಾರಣಿ ಸಭೆಯ ಕಾರ್ಯಸೂಚಿ ಮತ್ತು ಪಕ್ಷದ ರಾಜ್ಯಧ್ಯಕ್ಷರು ಮತ್ತು ಅರುಣ್ ಸಿಂಗ್ ಅವರು ನಿರ್ಧರಿಸಲಿದ್ದಾರೆ ಎಂದು ಹೇಳಿದ್ದಾರೆ. ಬಿಡಿಎ ಮೇಲೆ ಎಸಿಬಿ ದಾಳಿಗೆ ಸಂಬಂಧಪಟ್ಟಂತೆ ಎಫ್‍ಐಆರ್ ಸಲ್ಲಿಸಲು ಅನುಮತಿ ಕೋರಿದ್ದಾರೆ. ಆಂತರಿಕ ವಿಜಿಲೆನ್ಸ್ ಸೆಲ್‍ನಿಂದ ಬರುವ ಪ್ರಸ್ತಾವನೆಗೆ ತಡಮಾಡದೇ ಅನುಮತಿ ಕೊಡಲಾಗುವುದು ಎಂದು ತಿಳಿಸಿದ್ದಾರೆ.
2023ರ ಚುನಾವಣೆಯಲ್ಲಿ ಮುಖ್ಯಮಂತ್ರಿಯವರ ನೇತೃತ್ವದಲ್ಲಿ ನಡೆಸಲಾಗುವುದು ಎಂದು ಅರುಣ್ ಸಿಂಗ್ ಅವರು ತಿಳಿಸಿದ್ದಾರೆ ಎಂಬುದಕ್ಕೆ ಪ್ರತಿಕ್ರಯಿಸಿ, ಕೇಂದ್ರದ ನಾಯಕರು ನನ್ನ ಮೇಲೆ ವಿಶ್ವಾಸವಿಟ್ಟಿದ್ದಾರೆ. ಭಾಜಪ ಪಕ್ಷ ಟೀಂವರ್ಕ್‍ನಲ್ಲಿ ನಂಬಿಕೆ ಇಟ್ಟಿದ್ದು, ಒಗ್ಗಟ್ಟಾಗಿ ಸಂಘಟಿತರಾಗಿ ಕೆಲಸ ಮಾಡಲಾಗುವುದು. ಪಕ್ಷ ಮತ್ತು ಸರ್ಕಾರ ನಡುವೆ ಉತ್ತಮ ಸಂಬಂಧವನ್ನು ಸಂಯೋಜಿಸಿ ಕಾರ್ಯನಿರ್ವಹಿಸಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಆರೋಗ್ಯದ ದೃಷ್ಟಿಯಿಂದ ಸಿಎಂ ಬೊಮ್ಮಾಯಿ ಮನೆಯಲ್ಲೇ ಇರಲಿ; ಕನಿಷ್ಠ 20 ದಿನ ರೆಸ್ಟ್ ಪಡೆಯಲಿ: ಎಂಪಿ ಕುಮಾರಸ್ವಾಮಿ