ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಅಟ್ಟಿಕಾ ಬಾಬು ತಂದಿರಿಸಿದ್ದ ಫುಡ್ ಕಿಟ್ ಸೀಜ್ ಮಾಡಿದ ಪೊಲೀಸ್
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಅಟ್ಟಿಕಾ ಬಾಬು ಅವರು ತಮ್ಮ ಮನೆಯಲ್ಲಿ ಸಂಗ್ರಹಿಸಿದ್ದ ಫುಡ್ ಕಿಟ್ಗಳ ಮೇಲೆ ಕಂದಾಯ ಅಧಿಕಾರಿಗಳು ದಾಳಿ ಮಾಡಿದ್ದು, ವಶಕ್ಕೆ ಪಡೆದುಕೊಂಡಿದ್ದಾರೆ.
ತುಮಕೂರು: ಮತದಾರರಿಗೆ ಹಂಚಲು ತಂದಿದ್ದ ಲೋಡ್‌ಗಟ್ಟಲೆ ಫುಡ್ ಕಿಟ್‌ಗಳನ್ನು (Food Kit) ಪೊಲೀಸರು ಸೀಜ್ ಮಾಡಿದ್ದಾರೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಅಟ್ಟಿಕಾ ಬಾಬು (attica babu) ಅವರು ನಗರದ ಪಿಎನ್ಕೆ ಲೇಔಟ್ನಲ್ಲಿ ಇರುವ ತಮ್ಮ ಮನೆಯಲ್ಲಿ ಫುಡ್ ಕಿಟ್‌ಗಳನ್ನು ಸಂಗ್ರಹಿಸಿದ್ದರು. ಮಾಹಿತಿ ತಿಳಿದ ಕಂದಾಯ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಯುಗಾದಿ ಹಾಗೂ ರಂಜಾನ್ ಪ್ರಯುಕ್ತ ಮತದಾರರಿಗೆ ಹಂಚಲು ಫುಡ್ ಕಿಟ್‌ಗಳನ್ನು ತರಸಲಾಗಿದೆ ಎನ್ನಲಾಗುತ್ತಿದೆ. ಪ್ರತಿಯೊಂದು ಕಿಟ್ಗಳ ಮೇಲೆ ಅಟ್ಟಿಕಾ ಬಾಬು ಭಾವಚಿತ್ರವೂ ಇದೆ. ಅಕ್ಕಿ, ರವೆ, ಅಡುಗೆ ಎಣೆ, ಮತ್ತಿತರ ವಸ್ತುಗಳು ಫುಡ್ ಕಿಟ್ನಲ್ಲಿವೆ. ಅಟ್ಟಿಕಾ ಬಾಬು ಅವರಿಗೆ ಇನ್ನು ಟಿಕೆಟ್ ಪಕ್ಕಾ ಆಗಿಲ್ಲವಾದರೂ ಜಮೀರ್ ಅಹಮದ್ ಖಾನ್ ಅವರ ಮೂಲಕ ಹೇಗಾದರೂ ಮಾಡಿ ಟಿಕೆಟ್ ಪಡೆಯುತ್ತೇನೆ ಎನ್ನುವ ಧೈರ್ಯದಲ್ಲಿ ಹಣ ಖರ್ಚು ಮಾಡುತ್ತಿದ್ದಾರೆನ್ನಲಾಗುತ್ತಿದೆ. ಈ ಮುಂಚೆಯೂ ಕುಕ್ಕರ್, ಸೀರೆ ಹಂಚಿ ಸುದ್ದಿಯಾಗಿದ್ದರು.
ಮತದಾರರಿಗೆ ಹಂಚಲು ತಯಾರಿಸಿದ್ದ 2900 ಕುಕ್ಕರ್ಗಳು ಜಪ್ತಿ
ರಾಮನಗರ: ತಾಲೂಕಿನ ಕರಿಕಲ್ ದೊಡ್ಡಿ ಬಳಿಯಿರುವ ಕುಕ್ಕರ್ ತಯಾರಿಕಾ ಕಾರ್ಖಾನೆ ಮೇಲೆ ತಹಶೀಲ್ದಾರ್ ತೇಜಸ್ವಿನಿ ನೇತೃತ್ವದಲ್ಲಿ ದಾಳಿ ಮಾಡಿದ್ದು, 2900 ಕುಕ್ಕರ್ಗಳನ್ನು ಜಪ್ತಿ ಮಾಡಲಾಗಿದೆ. ವಿಶ್ವಾಸ್ ವೈದ್ಯ ಎಂಬುವರಿಗೆ ಕುಕ್ಕರ್ಗಳು ಸೇರಿದ್ದು ಎನ್ನಲಾಗುತ್ತಿದೆ. ಸವದತ್ತಿ ಯಲ್ಲಮ್ಮ ಕ್ಷೇತ್ರದ ಮತದಾರರಿಗೆ ಹಂಚಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು ಎನ್ನಲಾಗುತ್ತಿದೆ. ಸದ್ಯ ಈ ಕುರಿತು ಇಬ್ಬರ ವಿರುದ್ಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ: Assembly Polls: ರಾಣೆಬೆನ್ನೂರು ಮಾಜಿ ಶಾಸಕ ಆರ್ ಶಂಕರ್ ಸಹ ಮತದಾರರಿಗೆ ಕುಕ್ಕರ್ ಹಂಚುವ ಕಾರ್ಯವನ್ನು ಆರಂಭಸಿದ್ದಾರೆ!
ಕುಕ್ಕರ್, ಮಿಕ್ಸರ್ ಗ್ರೈಂಡರ್, ಸೀರೆಗಳನ್ನು ಹಂಚುವ ಕಾರ್ಯ ಎಲ್ಲ ಪಕ್ಷದ ಶಾಸಕರು, ನಾಯಕರು, ಉಚ್ಚಾಟಿತ ನಾಯಕರು ಶುರವಿಟ್ಟುಕೊಂಡಿದ್ದಾರೆ. ಜೆಡಿಎಸ್ ಪಕ್ಷದಿಂದ ಹೊರದೊಬ್ಬಲ್ಪಟ್ಟಿರುವ ಗುಬ್ಬಿ ಕ್ಷೇತ್ರದ ಶಾಸಕ ಎಸ್ ಆರ್ ಶ್ರೀನಿವಾಸ ಅವರು ಇತ್ತೀಚೆಗೆ ಶಿವರಾತ್ರಿಯಂದು ತಮ್ಮ ಕ್ಷೇತ್ರದಲ್ಲಿ ಕುಕ್ಕರ್ ಹಂಚಲು ಹೋಗಿ ಮತದಾರರಿಂದ ಮಂಗಳಾರತಿ ಮಾಡಿಸಿಕೊಂಡಿದ್ದಾರೆ.
ಚುನಾವಣೆ ದಿನಾಂಕ ಪ್ರಕಟವಾಗುವ ಮೊದಲೇ ಗಿಫ್ಟ್ಗಳ ವಿತರಣೆ!
ಬೆಳಗಾವಿ: ಸ್ಟಾರ್ಟ್ ಅಪ್ಗಳನ್ನು ಆರಂಭಿಸುವ ಯೋಚನೆಯಿರುವ ಯುವಕರು ರಾಜ್ಯ ವಿಧಾನ ಸಭಾ ಚುನಾವಣೆ ಮುಗಿಯುವವರೆಗೆ ಆ ಯೋಜನೆಯನ್ನು ಕೈಬಿಟ್ಟು ಬೆಳಗಾವಿ ಜಿಲ್ಲೆಯಲ್ಲಿ ಸೀರೆ ಮತ್ತು ಮಿಕ್ಸರ್ ಗ್ರೈಂಡರ್ಗಳ ಸಗಟು ವ್ಯಾಪಾರ ಮಾಡುವುದರಲ್ಲಿ ಹೆಚ್ಚು ಲಾಭವಿದೆ ಅಂತ ನಮಗನಿಸುತ್ತಿದೆ. ಚುನಾವಣೆ ದಿನಾಂಕ ಇನ್ನೂ ಪ್ರಕಟಗೊಂಡಿಲ್ಲ. ಆದರೆ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ರಾಷ್ಟ್ರೀಯ ಪಕ್ಷಗಳ ಸಂಭವನೀಯ ಅಭ್ಯರ್ಥಿಗಳು ಮತದಾರರನ್ನು ಓಲೈಸಿಕೊಳ್ಳಲು ಗಿಫ್ಟ್ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: Tumakuru: ಶಾಸಕ ಎಸ್ ಆರ್ ಶ್ರೀನಿವಾಸ ಕಳಿಸಿದ ಕುಕ್ಕರನ್ನು ತಿರಸ್ಕರಿಸಿ ತಂದವರಿಗೆ ಮಂಗಳಾರತಿ ಮಾಡಿದ ಗುಬ್ಬಿ ಕ್ಷೇತ್ರದ ಮತದಾರ
ರಮೇಶ್ ಜಾರಕಿಹೊಳಿ ಆಪ್ತನಿಂದ ಸೀರೆ ಹಂಚಿಕೆ
ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ಒಂದಲ್ಲ ಒಂದು ರಣತಂತ್ರ ರೂಪಿಸುತ್ತಿರುತ್ತವೆ. ಅದರಲ್ಲಿ ಗಿಫ್ಟ್ ಪಾಲಿಟಿಕ್ಸ್ ಕೂಡ ಒಂದು. ಈ ಪದ್ಧತಿ ಅನಾದಿ ಕಾಲದಿಂದ ನಡೆದುಕೊಂಡು ಬಂದಿದ್ದು, ಮತದಾರರನ್ನು ಸೆಳೆಯಲು ಆಮಿಷ ಮಾರ್ಗ ಹಿಡಿದಿದ್ದಾರೆ. ಬೆಳಗಾವಿ ಗ್ರಾಮಾಂತರ ಕ್ಷೇತ್ರದಲ್ಲಿ ಗಿಫ್ಟ್ ಪಾಲಿಟಿಕ್ಸ್ ಮುಂದುವರಿದಿದೆ. ಈ ಹಿಂದೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ತೆಂಗಿನ ಕಾಯಿ ಮೇಲೆ ಪ್ರಮಾಣ ಮಾಡಿಸಿಕೊಂಡು ಗಿಫ್ಟ್ ನೀಡಿದ್ದರು.
ಈಗ ಗೋಕಾಕ್ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಆಪ್ತ ಮತದಾರರ ಓಲೈಕೆಗೆ ಗಿಫ್ಟ್ ಹಂಚಿಕೆ ಮಾಡಿದ್ದಾರೆ. ಹಿಂಡಲಗಾ ಗ್ರಾ.ಪಂ ಅಧ್ಯಕ್ಷ, ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ನಾಗೇಶ್ ಮನೋಳ್ಕರ್ನಿಂದ ಗಿಫ್ಟ್ ವಿತರಣೆ ಮಾಡಿದ್ದಾರೆ. ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮದಲ್ಲಿ ಮನೋಳ್ಕರ್ ಅರಿಶಿನ ಕುಂಕುಮ ಕಾರ್ಯಕ್ರಮ ನಡೆಸಿ ಮಹಿಳೆಯರಿಗೆ ಸೀರೆ, ಒಂದು ಹಾಟ್ ಬಾಕ್ಸ್ ವಿತರಿಸಿದ್ದಾರೆ. ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಮತದಾರರನ್ನು ಸೆಳೆಯಲು ಕಸರತ್ತು ನಡೆಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:34 pm, Sun, 19 March 23