ರಾಜ್ಯದಲ್ಲಿ ಮಜಾ ಮಾಡಿ ಮೋದಿ ಬಳಿ ಹೋಗಿ ಹಣ ಕೇಳುತ್ತಿದ್ದಾರೆ: ಶಿವಮೊಗ್ಗದಲ್ಲಿ ಸಿಎಂ ವಿರುದ್ಧ ಶಾಸಕ ಬಸನಗೌಡ ಯತ್ನಾಳ್ ವಾಗ್ದಾಳಿ

| Updated By: ಗಣಪತಿ ಶರ್ಮ

Updated on: Feb 14, 2024 | 3:07 PM

Basangouda Patil Yatnal: ಕೇಂದ್ರದಿಂದ ತೆರಿಗೆ ಪಾಲು ಸಿಗುತ್ತಿಲ್ಲ ಎಂದು ಆರೋಪಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಿಜಯಪುರ ಬಿಜಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.ರಾಜ್ಯದಲ್ಲಿ ಮಜಾ ಮಾಡಿ ಪ್ರಧಾನಿ ನರೇಂದ್ರ ಮೋದಿ ಬಳಿ ಸಿಎಂ ದುಡ್ಡು ಕೇಳುತ್ತಿದ್ದಾರೆ ಎಂದು ಅವರು ಟೀಕಿಸಿದರು. ಜತೆಗೆ, ಎಲ್ಲ ಅರ್ಹತೆ ಇದ್ದರೂ ನನಗೆ ಪಕ್ಷದಲ್ಲಿ ಸ್ಥಾನಮಾನ ನೀಡಿಲ್ಲ ಎಂದು ಅಸಮಾಧಾನವನ್ನೂ ವ್ಯಕ್ತಪಡಿಸಿದರು.

ಶಿವಮೊಗ್ಗ, ಫೆಬ್ರವರಿ 14: ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah) ರಾಜ್ಯದಲ್ಲಿ ಮಜಾ ಮಾಡಿ ಪ್ರಧಾನಿ ನರೇಂದ್ರ ಮೋದಿ (Narendra Modi) ಬಳಿ ಹೋಗಿ ಹಣ ಕೇಳುತ್ತಿದ್ದಾರೆ ಎಂದು ವಿಜಯಪುರ ಬಿಜಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ವಾಗ್ದಾಳಿ ನಡೆಸಿದರು. ಶಿವಮೊಗ್ಗದಲ್ಲಿ ಬುಧವಾರ ಮಾತನಾಡಿದ ಅವರು, ತೆರಿಗೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಬೇಕು. ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್​ ಪಕ್ಷಕ್ಕೆ ವಾರಂಟಿಯೇ ಇರಲ್ಲ. ಜೆಡಿಎಸ್-ಬಿಜೆಪಿ ಸೀಟ್ ಹಂಚಿಕೆ ಕುರಿತು ಸದ್ಯ ಚರ್ಚೆ ಬೇಡ. ಈ ಬಗ್ಗೆ ಮೈಸೂರಿಗೆ ಬಂದಾಗ ಕೇಂದ್ರ ಸಚಿವ ಅಮಿತ್ ಶಾ ಸೂಚನೆ ನೀಡಿದ್ದಾರೆ. ಜೆಡಿಎಸ್ ಜೊತೆಗಿನ ಬಿಜೆಪಿ ಮೈತ್ರಿ ಚೆನ್ನಾಗಿ ಇದೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲುವುದು ಮಾತ್ರ ನಮ್ಮ ಗುರಿ ಎಂದರು.

ಹೋರಾಟಕ್ಕೆ ದುಡ್ಡು ಕೊಟ್ಟು ಕರೆಯುವ ಗಿರಾಕಿಗಳು ನಾವಲ್ಲ. ಇವತ್ತು ಇಲ್ಲಿ ಸಣ್ಣ ಪ್ರಮಾಣದಲ್ಲಿ ಪ್ರತಿಭಟನೆ ಆಗಿದೆ. ಸಮಾಜದ ಭವಿಷ್ಯಕ್ಕಾಗಿ ಹೋರಾಟ ಹೊರತು ಯಾರನ್ನೋ ಮುಖ್ಯಮಂತ್ರಿ ಮಾಡಲು ಅಲ್ಲ. ನಾವು ಒಂದು ಸಮಾಜದ ಪರ ಹೋರಾಟ ಮಾಡುತ್ತಿಲ್ಲ. ಎಲ್ಲಾ ಸಮಾಜದ ಧ್ವನಿ ಆಗಿ ಹೋರಾಟ ಮಾಡುತ್ತಿದ್ದೇವೆ. ವೀರೇಶೈವ, ಲಿಂಗಾಯತರು ಹಿಂದೂಗಳಲ್ಲ ಅಂತ ದಾವಣಗೆರೆಯಲ್ಲಿ ಕೆಲವರು ಹೇಳಿದರು. ಈ ಹೋರಾಟವನ್ನು ಹಾಳು ಮಾಡಬೇಕು ಅಂತ ಕೆಲವರು ಸಂಚು ಮಾಡಿದರು. ಹಣ ಕೊಡುತ್ತೇವೆ, ಛಲೋ‌ಗಾಡಿ ಕೊಡಿಸುತ್ತೇವೆ ಅಂತ ಕೆಲವು ಮಂತ್ರಿಗಳು ಸ್ವಾಮೀಜಿ ಹತ್ರ ಹೋಗ್ತಾರೆ. ನಮ್ಮ ಸಮಾಜದ ಮಂತ್ರಿಯೇ ಒಬ್ಬ ಹತ್ತು ಕೋಟಿ ಚೆಕ್ ಹಿಡಿದುಕೊಂಡು ಬಂದಿದ್ದರು. ಆಗ, ಹತ್ತು ಕೋಟಿಗೆ ನನ್ನ ಸಮಾಜವನ್ನು ಮಾರಲ್ಲ ಅಂತ ಸ್ವಾಮೀಜಿ ಹೇಳಿದ್ದರು ಎಂದು ಯತ್ನಾಳ್ ಹೇಳಿದರು.

ನಾನು ಮಂತ್ರಿ ಆಗಲು, ರಾಜ್ಯಾಧ್ಯಕ್ಷ ಆಗಲು, ವಿರೋಧ ಪಕ್ಷದ ನಾಯಕ ಆಗಲು ಸ್ವಾಮೀಜಿಯಿಂದ ಲಾಬಿ ಮಾಡಲ್ಲ. ನನ್ನ ಸೋಲಿಸಲು ಕೆಲವರು ವಿಜಯಪುರಕ್ಕೆ ಬಹಳ ಹಣ ಕಳಿಸಿದ್ದರು. ಜನ ಅದಕ್ಕೆ ತಲೆ ಕಡೆಸಿಕೊಳ್ಳದೆ ಹಣ ಇಸ್ಕೊಂಡ್ರು, ನನಗೆ ಮತ ಹಾಕಿದರು. ನಾಯಕತ್ವಕ್ಕಾಗಿ ನಮ್ಮ ಹೋರಾಟ ಅಲ್ಲ. ರಾಜಕೀಯ ಮೀಸಲಾತಿ ನಾವು ಕೇಳುತ್ತಿಲ್ಲ. ಬಡ ಮಕ್ಕಳಿಗೆ ನೇಮಕಾತಿ ಮತ್ತು ಶೈಕ್ಷಣಿಕ ಮೀಸಲಾತಿಗಾಗಿ ನಮ್ಮ ಹೋರಾಟ ನಡೆಯುತ್ತಿದೆ. ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದೇವೆ. ಯಾವುದೇ ಸಮಾಜಕ್ಕೆ ಅನ್ಯಾಯ ಮಾಡಲು ಈ ಹೋರಾಟ ಅಲ್ಲ. ಸ್ವಯಂ ಘೋಷಿಸಿತ ಲಿಂಗಾಯತ ನಾಯಕರೊಬ್ಬರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಮೀಸಲಾತಿಗೆ ಅಡ್ಡ ಹಾಕಿದರು, ಅವರು ಲಿಂಗಾಯಿತರೇ ಅಲ್ಲ. ಅವರು ರಾಜಕಾರಣದಲ್ಲಿ ನನ್ನ ತುಳಿಯುತ್ತಿದ್ದಾರೆ. ಸಾಮಾಜಿ ಜಾಲತಾದಲ್ಲಿ ಯಾರು ವಿರೋಧ ಪಕ್ಷ ನಾಯಕನಾಗ ಬೇಕು, ಯಾರು ರಾಜ್ಯಾಧ್ಯಕ್ಷ ನಾಗಬೇಕು ಅಂತ ಕೇಳಿದರು. ಆಗ ಎಲ್ಲರೂ ಯತ್ನಾಳ್ ಅವರನ್ನೇ ಮಾಡಬೇಕು ಎಂದರು. ಆದ್ರೆ ಕೆಳವರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ನನ್ನ ತಡೆದರು ಎಂದರು.

ಉತ್ತರ ಕನ್ನಡ ಹುಲಿಯದು ಏನು ನಡೆಯಲ್ಲ ಅಂತ ಕೆಲವರು ಬರೆಯುತ್ತಾರೆ. ಮರಿ ಹುಲಿ, ಆ ಹುಲಿಯದ್ದೇ ನಡೆಯುತ್ತೆ ಅಂತ ಕೆಲವು ಮಾಧ್ಯಮಗಳಲ್ಲಿ ಬರೆಯುತ್ತಾರೆ. ನನ್ನ ಮುಗಿಸಲು ಯತ್ನಿಸಿದವರು ಆಗ ಸೋತಿದ್ದರು. ಕೆಲವರು ನನ್ನ ಹೊರಗೆ ಹಾಕಲು ಯತ್ನಿಸಿದರು ಎಂದು ಹೆಸರು ಉಲ್ಲೇಖಸದೇ ಪರೋಕ್ಷವಾಗಿ ಯಡಿಯೂರಪ್ಪ ಕುಟುಂಬವನ್ನು ಯತ್ನಾಳ್ ಕುಟುಕಿದರು.

ಅಶೋಕನ ಕೆಳಗಡೆ ನಾನು ಉಪ ನಾಯಕ ಆಗಬೇಕಾ: ಯತ್ನಾಳ್ ಪ್ರಶ್ನೆ

ಲೋಕಸಭಾ ಚುನಾವಣೆ ಅಷ್ಟರಲ್ಲಿ ನಮ್ಮ ಸಮಾಜಕ್ಕೆ ಮೀಸಲಾತಿ ಘೋಷಣೆ ಮಾಡಬೇಕು. ಇಲ್ಲವಾದರೆ ಲೋಕಸಭಾ ಚುನಾವಣೆಯಲ್ಲಿ ನಾವು ಪಾಠ ಕಲಿಸುತ್ತೇವೆ. ಎಲ್ಲರೂ ಎಲ್ಲಾ ಕಡೆಯಿಂದ ಪ್ರತಿಭಟನೆ ಪ್ರಾರಂಭ ಮಾಡಬೇಕು. ನಮ್ಮ ಬಿಜೆಪಿ ಪಕ್ಷದಲ್ಲಿ ಕೆಲವರು ಸಮಾಜದ ಹೆಸರಲ್ಲಿ ದೊಡ್ಡ ಸ್ಥಾನದಲ್ಲಿದ್ದಾರೆ. ಅಶೋಕನ ಕೆಳಗಡೆ ನಾನು ಉಪ ನಾಯಕ ಆಗಬೇಕಾ? ಕೆಲವು ವ್ಯಕ್ತಿಗಳ ಕೈಯಲ್ಲಿ ಈಗ ಪಕ್ಷ ಸೇರಿಕೊಂಡಿದೆ. ಬಲಿಪಶು ಮಾಡುವ ಕೆಲಸವನ್ನು ಕೆಲವರು ಮಾಡಿದರು. ಮ್ಯಾಲಿನವರು ಆಶೀರ್ವಾದ ಮಾಡಿದರೇ ರಾಜ್ಯದ ಇತಿಹಾಸವನ್ನು ಚೇಂಜ್ ಮಾಡ್ತೇನೆ. ಮಣ್ಣಿನ ಮಗ, ರೈತನ ಮಗ ಅಂತ ಕೆಲವರು ಹೇಳ್ತಾರೆ. ಹಾಗಾದರೆ ನಾವು ಮಣ್ಣಿನ ಮಕ್ಕಳು ಅಲ್ವಾ? ಮೀಸಲಾತಿಗಾಗಿ ತ್ಯಾಗ ಮಾಡಲು ಸಿದ್ದರಾಗಬೇಕು ಎಂದರು.

ಏಕಲವ್ಯನಂತೆ ತ್ಯಾಗ ಮಾಡುವುದೇ ಆಗಿದೆ: ಯತ್ನಾಳ್


ಎಲ್ಲ ಅರ್ಹತೆ ಇದ್ದರೂ ನನಗೆ ಪಕ್ಷದಲ್ಲಿ ಸ್ಥಾನಮಾನ ನೀಡಿಲ್ಲ. ನಮ್ಮದು ಏಕಲವ್ಯನಂತೆ ತ್ಯಾಗ ಮಾಡುವುದೇ ಆಗಿದೆ ಎಂದು ಯತ್ನಾಳ್ ಅಸಮಾಧಾನ ವ್ಯಕ್ತಪಡಿಸಿದರು. ಪಕ್ಷದ ನಾಯಕರ ಬಳಿ ನಾನು ಯಾವುದೇ ಸ್ಥಾನಮಾನ ಕೇಳಿಲ್ಲ. ನಮ್ಮ ಹಣೆಬರಹದಲ್ಲಿ ಇದ್ದರೆ ಸ್ಥಾನಮಾನ ಸಿಗುತ್ತದೆ. ದೆಹಲಿ ಭೇಟಿ ವೇಳೆ ಯಾವುದೇ ರಾಜೀ ಸಂಧಾನ ನಡೆದಿಲ್ಲ. ನಾಯಕರ ಜೊತೆ ಒಟ್ಟಿಗೆ ಕುಳಿತು ಚಹಾ ಕುಡಿದಿದ್ದೇವೆ ಅಷ್ಟೇ. ಹೈಕಮಾಂಡ್ ನಾಯಕರು ನನಗೆ ಯಾವುದೇ ಎಚ್ಚರಿಕೆ ನೀಡಿಲ್ಲ ಎಂದು ಯತ್ನಾಳ್ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ